ಬೆಂಗಳೂರಿಗರ ವೀಕೆಂಡ್ ಮೋಜಿಗೆ ಬ್ರೇಕ್ ಹಾಕಿದ ಮಳೆರಾಯ

ಈ ಸುದ್ದಿಯನ್ನು ಶೇರ್ ಮಾಡಿ

Rain--0ಬೆಂಗಳೂರು, ಸೆ.17- ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ಮತ್ತೆ ವರ್ಷಧಾರೆ ಪ್ರಾರಂಭವಾಗಿ ಭಾನುವಾರದ ಸಂತೋಷಕ್ಕೆ ಅಡಚಣೆಯಾಗಿದೆ. ಬೆಳ್ಳಂಬೆಳಗ್ಗೆ ಮಳೆ ಸುರಿದ ಪರಿಣಾಮ ಜನರು ಮನೆಯಿಂದ ಹೊರಬರಲಾರದೆ ತೊಂದರೆಗೀಡಾದರು.  ಮಲ್ಲೇಶ್ವರ, ವಿಜಯನಗರ, ಜಯನಗರ, ಶಿವಾಜಿನಗರ, ಶಾಂತಿನಗರ, ಕೋರಮಂಗಲ, ಈಜಿಪುರ, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ಸೇರಿದಂತೆ ಬಹತೇಕ ಕಡೆ ಬೆಳಗ್ಗೆಯೇ ನಗರದ ಜನತೆ ಟ್ರಾಫಿಕ್ ಸಮಸ್ಯೆ ಅನುಭವಿಸಿದರು.

ವೀಕ್‍ಎಂಡ್ ಮಸ್ತಿ, ಮೋಜಿನ ಗುಂಗಿನಲ್ಲಿದ್ದವರಿಗೆ ಮಳೆ ಶಾಕ್ ಕೊಟ್ಟಿತ್ತು. ಜೋರಾಗಿ ಮಳೆ ಬಿದ್ದ ಪರಿಣಾಮ ರಸ್ತೆಯಲ್ಲೆಲ್ಲ ನೀರು ಹರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಟ್ರಾಫಿಕ್ ಸಮಸ್ಯೆ ಜನರನ್ನು ಕಾಡಿತು. ಎರಡು-ಮೂರು ದಿನಗಳು ಮಳೆ ಬಿಡುವು ಕೊಟ್ಟಿದ್ದ ಪರಿಣಾಮ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿತ್ತು. ಇನ್ನೇನು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಮತ್ತೆ ಮಳೆ ಸುರಿದ ಪರಿಣಾಮ ರಸ್ತೆ ಯಾವುದು, ಗುಂಡಿ ಯಾವುದು ಎನ್ನುವುದು ತಿಳಿಯದೆ ಗೊಂದಲಕ್ಕೀಡಾಗಿ ನಗರದ ಜನತೆ ಶಪಿಸುತ್ತಲೇ ವಾಹನಗಳಲ್ಲಿ ಓಡಾಡುತ್ತಿದ್ದರು.

ತಗ್ಗು ಪ್ರದೇಶಗಳಲ್ಲಿ ವಾಸವಿರುವವರಂತೂ ಮಳೆಯಿಂದ ಭೀತಿಗೊಳಗಾಗಿದ್ದರು. ಕಳೆದ ಎಂಟು-ಹತ್ತು ದಿನಗಳಿಂದ ಭಾರೀ ಮಳೆ ಸುರಿದ ಪರಿಣಾಮ ನಗರದ ಕೆರೆ-ಕಟ್ಟೆಗಳೆಲ್ಲ ಕೋಡಿಬಿದ್ದು ತುಂಬಿ ಹರಿದಿದ್ದವು. ನಿನ್ನೆ ಮತ್ತೆ ಮಳೆ ಬಿದ್ದಿದ್ದರಿಂದ ಕೆರೆಗಳು ಭರ್ತಿಯಾಗಿ ಚರಂಡಿಗಳ ನೀರೆಲ್ಲ ರಸ್ತೆಗೆ ನುಗ್ಗಿತ್ತು. ಯಾವುದೇ ಮರಗಳು, ವಿದ್ಯುತ್ ಕಂಬಗಳು ಬಿದ್ದ ವರದಿಯಾಗಿಲ್ಲ. ಅವಘಡಗಳು ಸಂಭವಿಸಿಲ್ಲವಾದರೂ ಮಳೆಯ ಭೀತಿಯಿಂದ ಮಾತ್ರ ನಗರದ ಜನ ಹೊರಬಂದಂತಿಲ್ಲ.

Facebook Comments

Sri Raghav

Admin