ರಾಜ್ಯಾದ್ಯಂತ ಭಾರೀ ಮಳೆಗೆ ಮೂವರು ಬಲಿ, ಜನ ಜೀವನ ಅಸ್ತವ್ಯಸ್ತ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಬೆಂಗಳೂರು/ವಿಜಯಪುರ, ಸೆ.17- ಕಳೆದ ಎರಡು-ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ರಾಜ್ಯಾದ್ಯಂತ ಮತ್ತೆ ಅಬ್ಬರಿಸತೊಡಗಿದ್ದಾನೆ. ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಕೊಪ್ಪಳದಲ್ಲಿ ತಾಯಿ-ಮಗಳಿಬ್ಬರೂ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ವಿಜಯಪುರದಲ್ಲಿ ಸೇತುವೆ ಮೇಲೆ ಬೈಕ್‍ನಲ್ಲಿ ಹೋಗುತ್ತಿದ್ದ ಇಬ್ಬರು ನಿನ್ನೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಪ್ರಕಾಶ್ ಎಂಬ ಯುವಕ ನೀರಿನ ಸೆಳೆತದಿಂದ ಬದುಕಿ ವಾಪಸಾಗಿದ್ದಾನೆ. ಶಿವರಾಜ್ ಎಂಬ ಇನ್ನೊಬ್ಬ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ವಿವಿಧೆಡೆ ಮಳೆ ಅಬ್ಬರ ಮುಂದುವರಿದಿದ್ದು, ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಯಾ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಕರಾವಳಿ, ಉತ್ತರ ಕರ್ನಾಟಕ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೊಡಗಿನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕೊಪ್ಪಳ ಜಿಲ್ಲೆ ಬೊಮ್ಮನಾಳ ಗ್ರಾಮದಲ್ಲಿ ತಾಯಿ-ಮಗಳಿಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದು, ತಾಯಿ ಹನುಮವ್ವ (50) ಮೃತ ದೇಹ ಪತ್ತೆಯಾಗಿದ್ದು,   ಮಗಳು ಪಾರವ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹೊಲದಿಂದ ಬರುವಾಗ ಎತ್ತಿನಬಂಡಿ ಪಲ್ಟಿಯಾಗಿ ನೀರಿನಲ್ಲಿ ತಾಯಿ-ಮಗಳು ಕೊಚ್ಚಿಕೊಂಡು ಹೋಗಿದ್ದು, ಇಂದು ಮುಂಜಾನೆ ಗ್ರಾಮದ ಹೊರವಲಯದಲ್ಲಿ ಹನುಮವ್ವನ ದೇಹ ಪತ್ತೆಯಾಗಿದ್ದು, ಮಗಳು ಪಾರವ್ವನಿಗಾಗಿ ಗ್ರಾಮಸ್ಥರು, ಪೊಲೀಸರು ಶೋಧ ನಡೆಸಿದ್ದಾರೆ.  ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.   ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿಯ ದೋಣಿ ನದಿ ಸೇತುವೆ ಮೇಲೆ ಹರಿಯುತ್ತಿದ್ದ ಪ್ರವಾಹಕ್ಕೆ ಸಿಲುಕಿದ್ದ ಇಬ್ಬರು ಬೈಕ್ ಸವಾರರಲ್ಲಿ ಒಬ್ಬರು ಬದುಕಿ ಬಂದಿದ್ದಾರೆ. ಇನ್ನೊಬ್ಬರು ನೀರು ಪಾಲಾಗಿರುವ ಬಗ್ಗೆ ವರದಿಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಅದನ್ನು ದಾಟಲು ಹೋದಾಗ ನಿಯಂತ್ರಣ ತಪ್ಪಿ ಬೈಕ್ ಸವಾರರು ನೀರಿಗೆ ಬಿದ್ದಿದ್ದರು. ಅದರಲ್ಲಿ ಮೃತ ವ್ಯಕ್ತಿಯನ್ನು ಒಬ್ಬರನ್ನು ತಾಳಿಕೋಟೆ ಶಿವರಾಜ್ ಹೊಸಳ್ಳಿ (30) ಎಂದು ಗುರುತಿಸಲಾಗಿದೆ.

ಇನ್ನೂ ಮೂರು ದಿನ ಮಳೆ: ಕರಾವಳಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಕಂಡುಬಂದಿದೆ. ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್ ಅವರು ಹೈ ಅಲರ್ಟ್ ಘೋಷಿಸಿದ್ದಾರೆ. ಜಿಲ್ಲೆಯ ಎಲ್ಲ ತಹಸೀಲ್ದಾರ್‍ಗಳು, ಕಂದಾಯಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಕೇಂದ್ರ ಕಾರ್ಯಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸುವಂತೆ ಆದೇಶಿಸಿದ್ದಾರೆ. ಅಗತ್ಯಬಿದ್ದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತೆ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೇತುವೆ, ರಸ್ತೆ ಹಾನಿಯಾದರೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದ್ದಾರೆ.

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಗುಲ್ಬರ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ನಿನ್ನೆ ರಾತ್ರಿ, ಇಂದು ಬೆಳಗ್ಗೆ ಕೂಡ ವರ್ಷಧಾರೆ ಮುಂದುವರಿದಿದೆ. ಮಂಗಳೂರು ನಗರದಲ್ಲಿ ಮಳೆಯ ಅಬ್ಬರಕ್ಕೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿನ ಪುರಭವನದ ಪಕ್ಕದ ಭೋಜನ ಶಾಲೆ ಸೇರಿದಂತೆ ಹಲವು ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ.   ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಕಲ್ಲುಗುಡ್ಡದ ಬಳಿ ನಿನ್ನೆ ಸಿಡಿಲು ಬಡಿದು ಹತ್ತಾರು ಕುರಿಗಳು ಸಾವನ್ನಪ್ಪಿವೆ. ಕೊಡಗು ಜಿಲ್ಲೆಯಾದ್ಯಂತ ನಿನ್ನೆಯಿಡೀ ಧಾರಾಕಾರ ಮಳೆ ಸುರಿದಿದ್ದು, ಕಾವೇರಿ ನದಿನೀರು ಒಳ ಹರಿವು ಹೆಚ್ಚಾಗಿದೆ. ಭಾಗಮಂಡಲ, ಬಲಮುರಿ ಭಾಗಗಳಲ್ಲಿ ಮಳೆ ಮುಂದುವರಿದಿದೆ.

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ, ಹಿರಿಯೂರು, ಐಮಂಗಲ ಸೇರಿದಂತೆ ವಿವಿಧೆಡೆ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಜನರಿಗೆ ಹರ್ಷತಂದಿದೆ. ಚಳ್ಳಕೆರೆ ಪಟ್ಟಣದ ರಹೀಂನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತಾಲೂಕಿನ ಹೊನ್ನೂರು ಬಳಿ ಸೇತುವೆ ನೀರಿನ ಪ್ರವಾಹದಲ್ಲಿ ಮುಳುಗಿ ಹೋಗಿದೆ. ಹೊಸದುರ್ಗದಲ್ಲಿನ ವೇದಾವತಿ ನದಿ ತುಂಬಿ ಹರಿಯುತ್ತಿದೆ. ನಗರದ ಸೇತುವೆ ತುಂಬಿ ಹರಿದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಾಲೂಕಿನ ಸೋಮುಗುದ್ದ ಗ್ರಾಮದ ರೈಲ್ವೆ ಕೆಳಸೇತುವೆ ಬಳಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ತುಂಗ, ಭದ್ರಾ ಜಲಾಶಯಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಭೀಮಾ ನದಿ ಅಪಾಯದ ಮಟ್ಟ ತಲುಪಿದ್ದು, ಆಲಮಟ್ಟಿ ಜಲಾಶಯದ ಒಳ ಹರಿವಿನ ಪ್ರಮಾಣ 4 ಟಿಎಂಸಿ ಆಗಿದೆ. ಜಲಾಶಯದಲ್ಲಿ ಹಿನ್ನೀರು ಹೆಚ್ಚಾಗಿರುವುದರಿಂದ ಹಿನ್ನೀರು ಪ್ರದೇಶದ ಗ್ರಾಮಗಳು, ಜಮೀನುಗಳು ಜಲಾವೃತಗೊಂಡಿವೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಬಿಜಾಪುರ ಜಿಲ್ಲೆಯ ಭೀಮಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ಗ್ರಾಮಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ.
ಉತ್ತರ ಕನ್ನಡ, ಭಟ್ಕಳ, ಹೊನ್ನಾವರ, ಕಾರವಾರ, ಕುಮುಟ, ಅಂಕೋಲ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin