ಆಗ್ನೇಯ ಪೊಲೀಸರ ಭರ್ಜರಿ ಕಾರ್ಯಾಚರಣೆ : 60 ಲಕ್ಷ ಮೌಲ್ಯದ 93 ಲ್ಯಾಪ್‍ಟಾಪ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Police--03

ಆಗ್ನೇಯ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 17  ಮಂದಿ ಆರೋಪಿಗಳನ್ನು ಬಂಧಿಸಿ ಸುಮಾರು 60 ಲಕ್ಷ ರೂ. ಮೌಲ್ಯದ 93 ಲ್ಯಾಪ್‍ಟಾಪ್‍ಗಳು ಹಾಗೂ 48 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿವಾಳ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 85 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡರೆ, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂವರನ್ನು ಬಂಧಿಸಿ 21 ದ್ವಿಚಕ್ರ ವಾಹನ ಹಾಗೂ 8 ಲ್ಯಾಪ್‍ಟಾಪ್ ವಶಕ್ಕೆ ಪಡೆದಿದ್ದಾರೆ. ಬೇಗೂರು ಠಾಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿ 7 ದ್ವಿಚಕ್ರ ವಾಹನ, 2 ಚಿನ್ನದ ಸರ ವಶಪಡಿಸಿಕೊಂಡರೆ, ಮೈಕೋ ಲೇಔಟ್ ಪೊಲೀಸರು ಇಬ್ಬರನ್ನು ಬಂಧಿಸಿ 8 ದ್ವಿಚಕ್ರ ವಾಹನ ಹಾಗೂ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿ 12 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು, ಸೆ.18- ಆಗ್ನೇಯ ವಿಭಾಗದ ಮಡಿ ವಾಳ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂವ ರನ್ನು ಬಂಧಿಸಿ 34 ಲಕ್ಷ ರೂ. ಬೆಲೆಯ 93 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಮಡಿವಾಳ ಹಾಗೂ ಇತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ತೆರೆದ ಬಾಗಿಲುಗಳ ಮೂಲಕ ಮನೆಗಳನ್ನು ಪ್ರವೇಶಿಸಿ ಲ್ಯಾಪ್‍ಟಾಪ್‍ಗಳನ್ನು ಕ್ಷಣಮಾತ್ರದಲ್ಲಿ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಬಗ್ಗೆ ದೂರು ದಾಖಲಾಗಿತ್ತು.  ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ಮತ್ತು ಸಹಾಯಕ ಪೊಲೀಸ್ ಕಮಿಷನರ್ ಲಕ್ಷ್ಮಿನಾರಾಯಣ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಬೋಳೆತ್ತಿನವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಅಂತಾರಾಜ್ಯ ಕಳ್ಳ ರಮೇಶ್ ಹಾಗೂ ಲ್ಯಾಪ್‍ಟಾಪ್ ಸ್ವೀಕರಿಸುತ್ತಿದ್ದ ಮಣಿಕಂಠನ್ ಎಂಬುವರನ್ನು ಬಂಧಿಸಿ 30 ಲಕ್ಷ ರೂ. ಮೌಲ್ಯದ 85 ವಿವಿಧ ಕಂಪೆನಿಯ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

Police--02

ಆರೋಪಿ ರಮೇಶ್ ಮೂಲತಃ ತಮಿಳುನಾಡಿನ ಶಂಕರಾಪುರ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಆರೇಳು ಮಂದಿ ಸಹಚರರೊಂದಿಗೆ ಬೆಂಗಳೂರಿಗೆ ಬಂದು ಮಡಿವಾಳ, ಮೈಕೋ ಲೇಔಟ್, ಕೋರಮಂಗಲ, ಬ್ಯಾಟರಾಯನಪುರ, ಎಚ್‍ಎಸ್‍ಆರ್ ಲೇಔಟ್ ಸೇರಿದಂತೆ ಇನ್ನಿತರೆಡೆಗಳಲ್ಲಿ ಸಾಫ್ಟ್‍ವೇರ್ ಎಂಜಿನಿಯರ್‍ಗಳು ವಾಸವಾಗಿರುವಂತಹ ಪಿಜಿ, ಬ್ಯಾಚುಲರ್ ರೂಮ್‍ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು.
ಆ ಕಟ್ಟಡಗಳ ಬಳಿ ಹೋಗಿ ಮಾತು ಬಾರದ ಮೂಕರಂತೆ ನಟನೆ ಮಾಡಿ ಭಿಕ್ಷೆ ಬೇಡುವವರ ರೀತಿಯಲ್ಲಿ ಸ್ಥಳೀಯರನ್ನು ಯಾಮಾರಿಸಿ ಹಗಲು ವೇಳೆಯಲ್ಲಿಯೇ ಚಾಣಾಕ್ಷತನದಿಂದ ತೆರೆದ ಬಾಗಿಲ ಮೂಲಕ ಒಳನುಗ್ಗಿ ಲ್ಯಾಪ್‍ಟಾಪ್, ಮೊಬೈಲ್ ಹಾಗೂ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದುದು ವಿಚಾರಣೆ ಯಿಂದ ತಿಳಿದು ಬಂದಿದೆ.

Police--01

ಈತ ಕಳವು ಮಾಡಿದ್ದ ಲ್ಯಾಪ್‍ಟಾಪ್‍ಗಳನ್ನು ಸ್ವೀಕರಿಸುತ್ತಿದ್ದ ಮಣಿಕಂಠನ್ ಮೂಲತಃ ಚೆನ್ನೈನವನಾಗಿದ್ದು, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವೀಧರನಾಗಿದ್ದ ಈತ ಲ್ಯಾಪ್‍ಟಾಪ್ ವಿಷಯದಲ್ಲಿ ಹೆಚ್ಚಿನ ತಿಳುವಳಿಕೆ ಇದ್ದುದರಿಂದ ಬೇಗನೆ ಹಣ ಸಂಪಾದನೆ ಮಾಡಿ ಶ್ರೀಮಂತನಾಗುವ ದುರಾಸೆಯಿಂದ ಎರಡು ವರ್ಷಗಳ ಹಿಂದೆ ಆರೋಪಿ ರಮೇಶನೊಂದಿಗೆ ಸೇರಿ ಕಳ್ಳತನ ಮಾಡಿದ್ದ ಲ್ಯಾಪ್‍ಟಾಪ್‍ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಅವುಗಳನ್ನು ಹೆಚ್ಚಿನ ಬೆಲೆಗೆ ತಮಿಳುನಾಡಿನ ವಿವಿಧಕಡೆ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಎಲೆಕ್ಟ್ರಾನಿಕ್ ಸಿಟಿ:

ಪಿಜಿಗಳಲ್ಲಿ ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡಿದ್ದ ಆರೋಪಿ ರಾಧಾಕೃಷ್ಣ ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ 4 ಲಕ್ಷ ರೂ. ಮೌಲ್ಯದ 8 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ.

14 ಮಂದಿ ಬೈಕ್ ಕಳ್ಳರ ಸೆರೆ : 48 ದ್ವಿಚಕ್ರ ವಾಹನ ವಶ :

Police--04

ಬೆಂಗಳೂರು, ಸೆ.18- ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳರ ಬೆನ್ನತ್ತಿದ ಆಗ್ನೇಯ ವಿಭಾಗದ ಸುದ್ದಗುಂಟೆಪಾಳ್ಯ, ಮೈಕೋ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೇಗೂರು ಠಾಣೆ ಪೊಲೀಸರು 14 ಮಂದಿಯನ್ನು ಬಂಧಿಸಿ 21.43 ಲಕ್ಷ ರೂ. ಮೌಲ್ಯದ 48 ದ್ವಿಚಕ್ರ ವಾಹನ ಹಾಗೂ 78 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಗುಂಟೆಪಾಳ್ಯ:  ಬಿಟಿಎಂ 1ನೆ ಹಂತದ ಸಾಯಿಬಾಬಾ ದೇವಸ್ಥಾನ ಸಮೀಪದ ಪಾರ್ಕ್‍ವೊಂದರ ಬಳಿ ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ದರೋಡೆಗೆ ಹೊಂಚುಹಾಕುತ್ತಿದ್ದ ಸಯ್ಯದ್ ಅಮೀರ್, ಇಮ್ರಾನ್ ಪಾಷ, ಮಹಮ್ಮದ್ ಆರಿಫ್ ಪಾಷ, ಸುಹೇಲ್ ಪಾಷ ಮತ್ತು ಸಯ್ಯದ್ ಮುಜಾಹಿದ್ ಎಂಬುವರನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಜೆಪಿ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಬೈಕ್ ಹಾಗೂ ಮೊಬೈಲ್, 500 ರೂ. ಕಿತ್ತುಕೊಂಡಿದ್ದ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸುದ್ದಗುಂಟೆಪಾಳ್ಯ, ಮೈಕೋ ಲೇಔಟ್, ತಿಲಕ್‍ನಗರದಲ್ಲಿ ಕಳ್ಳತನ ಮಾಡಿದ್ದ ಬೈಕ್‍ಗಳ ಬಗ್ಗೆಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಮೈಕೋ ಲೇಔಟ್: ಬೈಕ್‍ಗಳನ್ನು ಕಳ್ಳತನ ಮಾಡಿ ಜಾಲಿರೇಡ್ ಹಾಗೂ ವೀಲಿಂಗ್ ಮಾಡುತ್ತಿದ್ದ ಆರೋಪಿಗಳಾದ ಸಲ್ಮಾನ್ ಖಾನ್ ಮತ್ತು ಸಯ್ಯದ್ ಎಂಬುವರನ್ನು ಬಂಧಿಸಿ 4 ಲಕ್ಷ ರೂ. ಬೆಲೆಬಾಳುವ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ಮೈಕೋ ಲೇಔಟ್‍ನ 2 ಪ್ರಕರಣ, ಜಯನಗರ, ಜೆಪಿ ನಗರ, ಪುಟ್ಟೇನಹಳ್ಳಿಯ ತಲಾ 1 ಪ್ರಕರಣ ಹಾಗೂ ಕೆಜಿ ಹಳ್ಳಿಯ 2, ಸುಬ್ರಹ್ಮಣ್ಯನಗರದ 1 ಪ್ರಕರಣಗಳನ್ನು ಪತ್ತೆ ಮಾಡಿದಂತಾಗಿದೆ.

ಎಲೆಕ್ಟ್ರಾನಿಕ್ ಸಿಟಿ:   ಎಲೆಕ್ಟ್ರಾನಿಕ್ ಸಿಟಿ ಠಾಣೆ ಇನ್ಸ್‍ಪೆಕ್ಟರ್ ಮಲ್ಲೇಶ್ ಅವರ ನೇತೃತ್ವದ ತಂಡ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿ 11 ಲಕ್ಷ ರೂ. ಮೌಲ್ಯದ 21 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ತಮಿಳುನಾಡು ಮೂಲದ ಮಂಜುನಾಥ ಮತ್ತು ಬೇಗೂರಿನ ತೌಸಿಫ್ ಎಂಬುವರನ್ನು ಬಂಧಿಸಿ 8 ಪ್ರಕರಣಗಳನ್ನು ಪತ್ತೆ ಹಚ್ಚಿ 21 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು: ಹೊಸೂರು ರಸ್ತೆಯ ಎಇಸಿಎಸ್ ಲೇಔಟ್ ಬಳಿಯ ನೀಲಗಿರಿ ತೋಪಿನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳಾದ ಅಶೋಕ, ನವೀನ್, ಯಶ್ವಂತ್, ಚಲುವರಾಜ್, ಅರುಣ್ ಎಂಬುವರನ್ನು ಬಂಧಿಸಿರುವ ಬೇಗೂರು ಠಾಣೆ ಪೊಲೀಸರು ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಬೈಕ್‍ಗಳನ್ನು ವಶಪಡಿಸಿಕೊಂಡಿರುವುದಲ್ಲದೆ 29 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.  ಆರೋಪಿಗಳಿಂದ 2.43 ಲಕ್ಷ ರೂ. ಬೆಲೆಬಾಳುವ 7 ಬೈಕ್‍ಗಳು ಹಾಗೂ 78 ಸಾವಿರ ಬೆಲೆಯ 28.8 ಗ್ರಾಂ ತೂಕದ ಚಿನ್ನಾಭರಣ ಸೇರಿ 3.21 ಲಕ್ಷ ಬೆಲೆಬಾಳುವ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಈ ತಂಡ ಯಶಸ್ವಿಯಾಗಿದೆ.

Facebook Comments

Sri Raghav

Admin