ಎಣ್ಣೆ ಹೊಡೆದು ಹತ್ತಿದ್ರೆ ಕಾರ್ ಮುಂದೆ ಹೋಗಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Drink-And--01

ಬೆಂಗಳೂರು, ಸೆ.18-ದೇಶದಲ್ಲಿ ಡ್ರಿಂಕ್ ಅಂಡ್ ಡ್ರೈವ್‍ನಿಂದ ಸಂಭವಿಸುತ್ತಿರುವ ಭೀಕರ ಅಪಘಾತಗಳನ್ನು ತಪ್ಪಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ವೇಳೆ ಕಂಠಮಟ್ಟ ಕುಡಿದು ಕಾರನ್ನು ಚಾಲನೆ ಮಾಡುವುದಕ್ಕೆ ಬ್ರೇಕ್ ಹಾಕಲು ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಅಭಿವೃದ್ಧಿಗೊಳಿಸಲಾಗುತ್ತಿದೆ. ಇವುಗಳಲ್ಲಿ ಆಲ್ಕೋಹಾಲ್ ಸೆನ್ಸೊರ್ (ಮದ್ಯಪಾನ ಸಂವೇದಕ) ಸಾದನವೂ ಒಂದು. ಚಾಲಕ ಎಣ್ಣೆ ಹಾಕಿದ್ರೆ ಕಾರ್ ಮುಂದೆ ಹೋಗೋದಿಲ್ಲ ಎಂಬುದು ಇದರ ಅರ್ಥ. ಇದನ್ನು ಇಂಟರ್ ಲಾಕ್ ಎನ್ನಬಹುದು.

ಈ ಸಾಧನ ಹೇಗೆ ಕಾರ್ಯನಿರ್ವಹಿಸುತ್ತದೆ ?

ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಈ ತಂತ್ರಜ್ಞಾನವು ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಪ್ರಚಲಿತವಾಗುತ್ತಿದೆ. ಬ್ಲಡ್ ಆಲ್ಕೋಹಾಲ್ ಸೆನ್ಸೊರ್‍ನನ್ನು (ರಕ್ತದಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು ಪತ್ತೆ ಮಾಡುವ ಸಾಧನ ಅಥವಾ ಬಿಎಸಿ) ಕಾರಿನಲ್ಲಿ ಅಳವಡಿಸಲಾಗಿರುತ್ತದೆ. ಚಾಲಕ ಮದ್ಯ ಸೇವಿಸಿ ಸ್ಟೇರಿಂಗ್ ಮುಟ್ಟಿದರೆ ಈ ಸೂಕ್ಷ್ಮ ಸಂವೇದಕ ಸಾಧನಕ್ಕೆ ತಿಳಿಯುತ್ತದೆ. ತಕ್ಷಣ ಕಾರ್ ಬಂದ್ ಆಗಿ ಮುಂದೆ ಹೋಗುವುದೇ ಇಲ್ಲ. ಇಂಟರ್‍ಲಾಕ್ ಲಾಕ್ ಆಗಿ ವಾಹನ ಕೆಟ್ಟು ನಿಂತಂತಾಗುತ್ತದೆ. ಚಾಲಕನ ಮದ್ಯದ ಅಮಲು ಸಂಪೂರ್ಣ ಇಳಿದ ಮೇಲೆಯೇ ಕಾರು ಮತ್ತೆ ಚಾಲನೆಯಾಗುತ್ತದೆ.

ಚಾಲಕನ ಉಸಿರು ಮತ್ತು ಸ್ಪರ್ಶದಿಂದ ಆತ ಪಾನಮತ್ತನಾಗಿದ್ದಾನೆ ಎಂಬುದನ್ನು ಗ್ರಹಿಸುವ ತಂತ್ರಜ್ಞಾನ ಇದಾಗಿದೆ. ಡ್ರೈವರ್ ಆಲ್ಕೋಹಾಲ್ ಡಿಟೆಕ್ಷನ್ ಸಿಸ್ಟಮ್ ಫಾರ್ ಸೆಫ್ಟಿ (ಡಿಎಡಿಎಸ್‍ಎಸ್) ಮೂಲಕ ಅಭಿವೃದ್ಧಿಗೊಳಿಸಲಾದ ತಂತ್ರಜ್ಞಾನದಿಂದ ಕಾರಿನಲ್ಲಿ ಅಳವಡಿಸಲಾದ ಸಾಧನವು ಚಾಲಕನ ಎಷ್ಟು ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದ್ದಾನೆ ಎಂಬುದನ್ನು ನಿಖರವಾಗಿ ತಿಳಿಸುತ್ತದೆ.  ಚಾಲಕ ಮದ್ಯ ಸೇವಿಸಿದ್ದರೆ ಅದು ದೇಹವನ್ನು ಪ್ರವೇಶಿಸಿದ ಕೆಲವೇ ಕೆಲವು ನಿಮಿಷಗಳಲ್ಲಿ ಅದು ಪ್ರಭಾವ ಬೀರುತ್ತದೆ. ಮೂಗು ಮತ್ತು ಬಾಯಿಯಿಂದ ಬರುವ ವಾಸನೆ (ಉಸಿರು ಮೂಲಕ ಪತ್ತೆ) ಹಾಗೂ ರಕ್ತದಲ್ಲಿ ಸೇರಿದ ಆಲ್ಕೋಹಾಲ್(ಸ್ಪರ್ಶದ ಮೂಲಕ ಪತ್ತೆ) ಮೂಲಕ ಪಾನಮತ್ತರನ್ನು ಪತ್ತೆ ಮಾಡುತ್ತದೆ.

ಕಂಪೆನಿಗಳು ಸುಧಾರಿತ ಸಾಫ್ಟ್‍ವೇರ್‍ನೊಂದಿಗೆ ಈ ಸಾಧನವನ್ನು ಕೋಡ್ ಬಳಸಿ ಕಾರುಗಳಿಗೆ ಅಳವಡಿಸುತ್ತವೆ. ಇದರ ರಹಸ್ಯ ಸಂಕೇತವನ್ನು ಕಾರಿನ ಮಾಲೀಕರಿಗೂ ತಿಳಿಸುವುದಿಲ್ಲ. ಆಲ್ಕೋಹಾಲ್ ಸೆನ್ಸೋರ್ ಅಥವಾ ಇಂಟರ್‍ಲಾಕ್ ಅಳವಡಿಸಲು ಕೇವಲ ಎರಡು ತಾಸು ಬೇಕಾಗುತ್ತದೆ. ಡ್ಯಾಷ್ ಬೋರ್ಡ್ ಅಥವಾ ಸ್ಟೇರಿಂಗ್ ಸನಿಹ ಈ ಸಾಧನವನ್ನು ಇಡಲಾಗುತ್ತದೆ.  ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿದೆ. ರಸ್ತೆ ಸುರಕ್ಷತೆ ದೃಷ್ಟಿಯಿಂದ ಜಾರಿಗೆ ಬಂದ ಈ ತಂತ್ರಜ್ಞಾನದಿಂದ ಅಪಘಾತ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ.

ಅತಿವೇಗ, ಅಜಾಗರೂಕತೆ, ಡ್ರಿಂಕ್ ಅಂಡ್ ಡ್ರೈವ್‍ನಿಂದ ಸಂಭವಿಸುವ ಭೀಕರ ಅಪಘಾತಗಳನ್ನು ತಪ್ಪಿಸಲು ಇದು ಅತ್ಯಂತ ಪರಿಣಾಮಕಾರಿಯಾಗಿದೆ. ಬಹುತೇಕ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳಲ್ಲಿ ಸ್ಪೀಡ್ ಗೌರ್ನರ್ (ವೇಗ ನಿಯಂತ್ರಣ) ಅಳವಡಿಸಲಾಗಿದೆ. ಚಾಲಕನಿಗೆ ಮಂಪರು ಬಂದರೆ ಆತನಿಗೆ ಎಚ್ಚರಿಕ ನೀಡಿ ಜಾಗೃತಗೊಳಿಸುವ ಸಾಧನವನ್ನೂ ಸಹ ಬಳಸಲಾಗುತ್ತಿದೆ.  ಆದರೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವಾಗ ಸಂಭವಿಸುವ ಅನಾಹುತ ತಪ್ಪಿಸುವ ಆಲ್ಕೋಹಾಲ್ ಸೆನ್ಸೋರ್ ಸಾಧನ ಅಳವಡಿಸಬೇಕು. ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ವಾಹನಗಳಿಗೆ ಈ ಉಪಕರಣದ ಅಳವಡಿಸಿದರೆ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ನಮ್ಮ ದೇಶದಲ್ಲೂ ಈ ಸಾಧನೆ ಅಳವಡಿಸುವುದು ಕಡ್ಡಾಯವಾಗಬೇಕು. ಇದನ್ನು ರಾಷ್ಟ್ರೀಯ ನೀತಿಯಾಗಿ ಜಾರಿಗೊಳಿಸಬೇಕು. ಸಂಚಾರಿ ಪೊಲೀಸರು ಆಲ್ಕೋಹಾಲ್ ಮೀಟರ್ ಹಿಡಿದು ಹಗಲಿರುವ ವಾಹನಗಳನ್ನು ಪರಿಶೀಲಿಸುವ ಶ್ರಮ ಇದರಿಂದ ತಪ್ಪಿದಂತಾಗುತ್ತದೆ.

Facebook Comments

Sri Raghav

Admin