ಪತ್ನಿ ಪೀಡಕ ಎನ್ಆರ್ಐಗಳಿಗೆ ಕಾದಿದೆ ಗ್ರಹಚಾರ..!
ನವದೆಹಲಿ, ಸೆ.18-ಪತ್ನಿಗೆ ಕಿರುಕುಳ ನೀಡುವ ಅಥವಾ ಆಕೆಯನ್ನು ತ್ಯಜಿಸುವ ಅನಿವಾಸಿ ಭಾರತೀಯರ(ಎನ್ಆರ್ಐಗಳು) ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಪತ್ನಿ ಪೀಡಕ ಎನ್ಆರ್ಐಗಳನ್ನು ಬಂಧಿಸುವ ಅಥವಾ ಅವರ ಪಾಸ್ಪೋರ್ಟ್ಗಳನ್ನು ರದ್ದುಗೊಳಿಸಲು ಗಂಭೀರ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಉನ್ನತ ಮಟ್ಟದ ಸಮಿತಿ ಶಿಫಾರಸುಗಳನ್ನು ಸರ್ಕಾರವು ಅಂಗೀಕರಿಸಿದರೆ, ಹೊಸ ನಿಯಾಮಾವಳಿ ಶೀಘ್ರ ಜಾರಿಗೆ ಬರಲಿದೆ. ಎನ್ಆರ್ಐ ಕುಟುಂಬಗಳ ಪರಿತ್ಯಕ್ತ ಮತ್ತು ಕಿರುಕುಳಕ್ಕೆ ಒಳಗಾದ ಪತ್ನಿಯರಿಂದ ವಿದೇಶಾಂಗ ಸಚಿವಾಲಯಕ್ಕೆ ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಗಂಭೀರ ಪರಿಶೀಲನೆ ನಡೆದಿದೆ.
ಕಳೆದ ಮೇ ತಿಂಗಳಿನಲ್ಲಿ ಹಲವು ಕಾನೂನು ಮತ್ತು ನಿಯಂತ್ರಣಾತ್ಮಕ ಸವಾಲುಗಳನ್ನು ನಿಭಾಯಿಸುವ ಸಂಬಂಧ ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಇನ್ನು ಮುಂದೆ ಭಾರತ ಯಾವುದೇ ದೇಶದೊಂದಿಗೆ ಗಡೀಪಾರು ಅಥವಾ ಹಸ್ತಾಂತರ ಒಪ್ಪಂದ ಮಾಡಿಕೊಳ್ಳುವ ವೇಳೆ, ಗೃಹ ಹಿಂಸೆ ಕುರಿತ ವಿವರಗಳನ್ನು ಪ್ರಧಾನ ಅಂಶವಾಗಿ ಉಲ್ಲೇಖಿಸಬೇಕು ಎಂದು ಶಿಫಾರಸು ಮಾಡಿದೆ.