ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸೋದು ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಕಲಬುರಗಿ,ಸೆ.18- ವರಿಷ್ಠರ ಸೂಚನೆಯಂತೆ ನಾನು ಉತ್ತರ ಕರ್ನಾಟಕದ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಿಂದ ಸ್ಪರ್ಧಿಸಬೇಕೆಂದು ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಅಲ್ಲದೆ ಈ ಭಾಗದಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಕಾರಣದಿಂದ ತಾವು ಕಣಕ್ಕಿಳಿಯುವುದು ಖಚಿತ ಎಂದು ತಿಳಿಸಿದರು.   ಉತ್ತರ ಕರ್ನಾಟಕದಿಂದಲೇ ಕಣಕ್ಕಿಳಿಯುವಂತೆ ನನಗೆ ಪಕ್ಷದ ಕಾರ್ಯಕರ್ತರು ಹಲವು ಬಾರಿ ಮನವಿ ಮಾಡಿದ್ದರು. ರಾಜಕೀಯವಾಗಿ ನನಗೆ ಜನ್ಮ ನೀಡಿದ ಶಿವಮೊಗ್ಗ ಜಿಲ್ಲೆ ಶಿಕಾರಿಪುರವನ್ನು ಮರೆಯಲು ಸಾಧ್ಯವಾಗದ ಕಾರಣ ಕ್ಷೇತ್ರ ಬದಲಾಯಿಸಿರಲಿಲ್ಲ ಎಂದರು.

ತಾವು ವೀರಶೈವರೆಂಬ ಒಂದೇ ಕಾರಣಕ್ಕಾಗಿ ಈ ಭಾಗದಿಂದ ಸ್ಪರ್ಧಿಸಲು ವರಿಷ್ಠರು ಸೂಚನೆ ಕೊಟ್ಟಿಲ್ಲ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಈ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾವು ಎಲ್ಲಿಂದ ಸ್ಪರ್ಧಿಸಬೇಕು ಎಂಬುದಕ್ಕೆ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ವರಿಷ್ಠರು ಏನು ಸೂಚನೆ ಕೊಡುವರೊ ಅದನ್ನಷ್ಟೇ ಪಾಲನೆ ಮಾಡಲಾಗುವುದು. ಉಳಿದದ್ದನ್ನು ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರು ನೋಡಿಕೊಳ್ಳುತ್ತಾರೆ. ನನಗೆ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ಮುಖ್ಯ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕದಿಂದಲೇ ಸ್ಪರ್ಧಿಸಿದರೆ ಅದನ್ನು ನಾನು ಮುಕ್ತ ಕಂಠದಿಂದ ಸ್ವಾಗತಿಸುತ್ತೇನೆ. ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅಂತಿಮವಾಗಿ ಮತದಾರರು ಸೋಲು ಗೆಲುವನ್ನು ನಿರ್ಧರಿಸುತ್ತಾರೆ ಎಂದು ಬಿಎಸ್‍ವೈ ತಿಳಿಸಿದರು.

ನಾಲ್ಕೈದು ದಿನದಲ್ಲಿ ಚಾರ್ಜ್‍ಶೀಟ್:

ಮುಖ್ಯಮಂತ್ರಿ ಸೇರಿದಂತೆ ಅವರ ಸಂಪುಟದ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ನಡೆಸಿರುವ ಭ್ರಷ್ಟಾಚಾರದ ಹಗರಣಗಳನ್ನು ನಾಲ್ಕೈದು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು.  ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯನವರ ಕರ್ಮಕಾಂಡವನ್ನು ಜನತೆಯ ಮುಂದಿಟ್ಟು , ರಾಜ್ಯದ ಜನತೆಯ ಮನೆ ಬಾಗಿಲಿಗೆ ಹಂಚುವುದಾಗಿ ಗುಡುಗಿದರು.   ಈಗಾಗಲೇ ಹಗರಣಗಳ ದಾಖಲೆಗಳು ನಮಗೆ ಲಭ್ಯವಾಗಿವೆ. ಅಧಿಕೃತ ದಾಖಲೆಗಳು ಸಿಗಲಿ ಎಂಬ ಕಾರಣಕ್ಕಾಗಿ ತುಸು ವಿಳಂಬವಾಗಿತ್ತು. ಸಚಿವಾಲಯ, ಬಿಬಿಎಂಪಿ ಸೇರಿದಂತೆ ಎಲ್ಲೆಲ್ಲಿ ಮುಖ್ಯಮಂತ್ರಿ ಹಾಗೂ ಕುಟುಂಬದವರು ಮತ್ತು ಸಂಪುಟದ ಸಹದ್ಯೋಗಿಗಳು ನಡೆಸಿರುವ ಹಗರಣಗಳನ್ನು ಬಯಲು ಮಾಡುವುದಾಗಿ ಹೇಳಿದರು.

Facebook Comments

Sri Raghav

Admin