ಕೇಂದ್ರದಿಂದ ಸಿಎಂ ಸಿದ್ದರಾಮಯ್ಯನವರ ಫೋನ್ ಕದ್ದಾಲಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

CIm-Phone-Tr

ಬೆಂಗಳೂರು,ಸೆ.19- ರಾಜ್ಯ ರಾಜಕಾರಣದಲ್ಲಿ ಇದೀಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಫೋನ್ ಕದ್ದಾಲಿಕೆ ಪ್ರಕರಣ ಭಾರೀ ಸದ್ದು ಮಾಡಿದೆ. ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ನಡೆಸುತ್ತಿದೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.  ಆದರೆ ಪ್ರತಿಪಕ್ಷ ಬಿಜೆಪಿ ನಾಯಕರು ರಾಜ್ಯ ಸರ್ಕಾರದತ್ತಲೇ ಬೊಟ್ಟು ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರ ಬಿಜೆಪಿ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದೆ ಎಂದು ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ.

ಇದೀಗ ಫೋನ್ ಕದ್ದಾಲಿಕೆ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ವಿವಾದವನ್ನೇ ಸೃಷ್ಟಿಸುವ ಸಾಧ್ಯತೆ ಇದೆ. ಏಕೆಂದರೆ ಫೋನ್ ಕದ್ದಾಲಿಕೆಯು ವ್ಯಕ್ತಿಯೊಬ್ಬನ ಖಾಸಗಿ ಹಕ್ಕಿಗೆ ಧಕ್ಕೆ ತರುವುದರಿಂದ ಇದನ್ನು ಗಂಭೀರ ಪ್ರಕರಣವೆಂದೇ ಪರಿಗಣಿಸಲಾಗುತ್ತದೆ.  ಈ ಹಿಂದೆ ಪ್ರತಿಪಕ್ಷಗಳ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಆಡಳಿತಾವಧಿಯಲ್ಲಿ ಇಂತಹ ಆರೋಪ ಕೇಳಿಬಂದಿತ್ತು. ಆದರೆ ಮುಂದೆ ಇದು ಅಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳಲಿಲ್ಲ. ಫೋನ್ ಕದ್ದಾಲಿಕೆ ಪ್ರಕರಣದಿಂದ ಕೆಲವು ಕಡೆ ಸರ್ಕಾರಗಳೇ ಉರುಳಿ ಹೋಗಿರುವ ನಿದರ್ಶಣಗಳಿವೆ.

ಸಿಎಂ ಹೇಳಿದ್ದೇನು?

ಮಂಗಳವಾರ ಫೋನ್ ಕದ್ದಾಲಿಕೆ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ವಾಕ್ ಸಮರ ನಡೆಯಿತು. ಈ ಪ್ರಕರಣ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಲವು ದಿನಗಳಿಂದ ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರ ಫೋನ್ ಕದ್ದಾಲಿಕೆ ನಡೆಸುತ್ತಿದೆ ಇದು ಚಿಲ್ಲರೆ ವಿಷಯ ಎಂದು ನಾನು ಮಾಧ್ಯಮಗಳ ಮುಂದೆ ಬಹಿರಂಗ ಮಾಡಿರಲಿಲ್ಲ. ಕೇಂದ್ರ ಸರ್ಕಾರ ನಮ್ಮ ಮುಖಂಡರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅದಕ್ಕಾಗಿ ಫೋನ್ ಕರೆಗಳನ್ನು ಕದ್ದಾಲಿಸಿ ಮಾಹಿತಿಯನ್ನು ಪಡೆಯುತ್ತಿದೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕೇಂದ್ರದಿಂದ ಕದ್ದಾಲಿಕೆ:

ಇನ್ನು ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ 35ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಕಳೆದ 6 ತಿಂಗಳಿನಿಂದ ದೂರವಾಣಿ ಕರೆಗಳ ಕದ್ದಾಲಿಕೆ ಮಾಡುತ್ತಿದೆ ಎಂದು ದೂರಿದರು.  ಸಚಿವರು ಮತ್ತು ಶಾಸಕರ ಚಲನವಲನಗಳ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ನನಗೆ ಕೆಲವು ಶಾಸಕರು ಮಾಹಿತಿ ನೀಡಿದ್ದಾರೆ. ನಾವು ಈ ಬಗ್ಗೆ ಕೇಂದ್ರಕ್ಕೆ ದೂರು ನೀಡಲಿದ್ದೇವೆ ಎಂದು ದೂರಿದರು.

ದೂರವಾಣಿ ಅಲ್ಲದೆ ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗುತ್ತಿದೆ ಎಂದು ಟೀಕಿಸಿದರು.  ಒಂದು ವೇಳೆ ನಾವು ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡಿದ್ದರೆ ಕೇಂದ್ರದಲ್ಲಿ ಅವರದೇ ಪಕ್ಷ ಆಡಳಿತದಲ್ಲಿದೆ. ಬಿಜೆಪಿಯವರು ಸಂಬಂಧಪಟ್ಟವರಿಗೆ ದೂರು ನೀಡಬಹುದು. ಈವರೆಗೂ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕ ಆರ್.ಅಶೋಕ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆರೋಪಕ್ಕಾಗಿ ನಮ್ಮ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ನಾವು ಅವರ ದೂರವಾಣಿಗಳನ್ನು ಕದ್ದಾಲಿಕೆ ಮಾಡಿದ್ದರೆ ತನಿಖೆ ಮಾಡಲಿ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಸರ್ಕಾರದ ಕುತಂತ್ರ:

ಇನ್ನು ಬೆಂಗಳೂರಿನಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಬಿಜೆಪಿಯವರನ್ನು ಗುರಿಯಾಗಿಟ್ಟುಕೊಂಡು ದೂರವಾಣಿ ಕದ್ದಾಲಿಕೆ ಮಾಡುತ್ತಿದೆ. ಈ ಬಗ್ಗೆ ಕೆಲವು ನಾಯಕರು ನಮಗೆ ಖಚಿತವಾದ ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಿದರು.   ನಾವು ಸರ್ಕಾರದ ವಿರುದ್ದ ಮಾತನಾಡದಂತೆ ಬಾಯಿ ಮುಚ್ಚಿಸಲ ಇಂತಹ ಹೀನ ಕೃತ್ಯಕ್ಕೆ ಸರ್ಕಾರ ಕೈ ಹಾಕಿದೆ. ಸಾಧ್ಯವಾದರೆ ಕೇಂದ್ರಕ್ಕೆ ಈ ಬಗ್ಗೆ ದೂರು ನೀಡಲು ಚಿಂತನೆ ನಡೆಸಿದ್ದೇವೆ ಎಂದರು.

Facebook Comments

Sri Raghav

Admin