ಗರ್ಭಿಯಣಿಯರ ಪೌಷ್ಟಿಕಾಂಶ ಔಷಧಿ ಖರೀದಿಯಲ್ಲೂ ಅವ್ಯವಹಾರ

ಈ ಸುದ್ದಿಯನ್ನು ಶೇರ್ ಮಾಡಿ

Pregnent--01

-ರವೀಂದ್ರ.ವೈ.ಎಸ್.

ಬೆಂಗಳೂರು,ಸೆ.19-ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗರ್ಭಿಯಣಿರಿಗಾಗಿ ಖರೀದಿಸಲು ಮುಂದಾಗಿರುವ ಔಷಧಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಹಾಗೂ ಮದ್ಯವರ್ತಿಗಳು ಶಾಮೀಲಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಲವಾರು ಕೋಟಿ ನಷ್ಟ ಉಂಟು ಮಾಡಲು ಮುಂದಾಗಿರುವ ಅಂಶ ಬೆಳಕಿಗೆ ಬಂದಿದೆ.
ಕೇಂದ್ರದ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಾತ್ರೋಪುಷ್ಟಿ ಕಾರ್ಯಕ್ರಮದಡಿ ಗರ್ಭಿಣಿ ಮಹಿಳೆಯರಿಗೆ ಮೈಕ್ರೋ ನ್ಯೂಟ್ರಿಷೆಯೆಂಟ್ ಗ್ರಾನ್ಯುಯಲ್ಸ್ (Micronutrient granuals) ಪೌಷ್ಟಿಕಾಂಶ ಔಷಧಿ(ಮಾತ್ರೆ) ಯನ್ನು ಖರೀದಿಸಲು ಸರ್ಕಾರ ತೀರ್ಮಾನಿಸಿತ್ತು.

ಗರ್ಭಿಣಿ ಮಹಿಳೆಯರಿಗೆ ಇದನ್ನು ನೀಡಿದರೆ ಹುಟ್ಟುವ ಮಗು ಮತ್ತು ತಾಯಿಗೆ ಪೌಷ್ಟಿಕಾಂಶ ಸಿಗುತ್ತದೆ ಎಂಬ ಕಾರಣಕ್ಕಾಗಿ ವೈದ್ಯರ ಶಿಫಾರಸ್ಸಿನಂತೆ ಈ ಮಾತ್ರೆಗಳನ್ನು ನೀಡುತ್ತಾರೆ. 30 ಕೋಟಿ ರೂ.ಗಳ ಯೋಜನೆ ಇದಾಗಿದ್ದು , ಪ್ರಾರಂಭಿಕ ಹಂತದಲ್ಲಿ ಸರ್ಕಾರ 10 ಕೋಟಿ ವೆಚ್ಚದಲ್ಲಿ ಮಾತ್ರೆಗಳನ್ನು ಖರೀದಿಸಲು ತರಾತುರಿಯಲ್ಲಿ ಟೆಂಡರ್ ಕರೆಯಲು ಮುಂದಾಗಿದೆ ಎಂಬ ಆರೋಪ ಕೇಳಬಂದಿದೆ.

ಆರೋಪವೇನು:

ರಾಜ್ಯ ಸರ್ಕಾರ ಮಾತ್ರೆ ಖರೀದಿಸಲು ಅರ್ಹ ಕಂಪನಿಗಳಿಂದ ಟೆಂಡರ್ ಆಹ್ವಾನಿಸಿತ್ತು. ನಾಲ್ಕು ಕಂಪನಿಗಳು ಇದರಲ್ಲಿ ಭಾಗವಹಿಸಿದ್ದವು. ಮೂರು ಕಂಪನಿಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿ ಮುಂಬೈ ಮೂಲದ ಫಾರ್ಮ ವೇದ ಎಂಬ ಕಂಪನಿಗೆ ನೀಡಲಾಗಿದೆ.  ಕರ್ನಾಟಕ ಡ್ರಗ್ ಹೌಸ್ ಲಾಜಿಸ್ಟಿಕ್ ಅಂಡ್ ವೇರ್‍ಹೌಸ್ ಸೊಸೈಟಿ ನಿಯಮಗಳ ಪ್ರಕಾರ ಟೆಂಡರ್‍ನಲ್ಲಿ ಭಾಗವಹಿಸಬೇಕಾದರೆ ಕನಿಷ್ಟ ಪಕ್ಷ ಮೂರು ವರ್ಷ ಔಷಧಿ ಉತ್ಪಾದನೆಗಳನ್ನು ತಯಾರಿಸಿರುವ ಬಗ್ಗೆ ಲೈಸೆನ್ಸ್ ನೀಡಬೇಕು.

ಫಾರ್ಮವೇದ ಸಂಸ್ಥೆಯು ಕೇವಲ ಎರಡು ಘಟಕಗಳ ಲೈಸೆನ್ಸ್ ನೀಡಿದ್ದು , ಟೆಂಡರ್ ನಿಬಂಧನೆಗಳ ಪ್ರಕಾರ ಮೂರು ವರ್ಷ ಉತ್ಪಾದನಾ ಹಾಗೂ ಪೂರೈಕೆ ಮಾಡಿರುವ ಬಗ್ಗೆ ಪ್ರಮಾಣ ಪತ್ರವನ್ನು ದೃಢೀಕರಿಸಬೇಕಾಗುತ್ತದೆ.  ಜೊತೆಗೆ ಈ ಸಂಸ್ಥೆಯು ಪ್ರತಿ ವರ್ಷ 50 ಲಕ್ಷ ಸದರಿ ಔಷಧಿಗಳನ್ನು ಸರ್ಕಾರಕ್ಕೆ ಪೂರೈಸಿರುವ ಬಗ್ಗೆ ದಾಖಲೆಗಳನ್ನು ನೀಡಬೇಕು. ಕೇವಲ ಒಂದು ವರ್ಷದ ದಾಖಲೆಯನ್ನು ನೀಡಿರುವ ವೇದ ಸಂಸ್ಥೆಯು 10 ಕೋಟಿ ವೆಚ್ಚದ ಟೆಂಡರ್ ಪಡೆಯಲು ಮುಂದಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ.

ಟೆಂಡರ್‍ನಲ್ಲಿ ನಮೂದಿಸಿರುವ ಕೆಲವು ನಿಬಂಧನೆಗಳನ್ನು ಸಂಸ್ಥೆ ನಮೂದಿಸದಿದ್ದರೂ ಟೆಂಡರ್‍ಗೆ ಪರಿಗಣಿಸಿರುವುದು ಜೊತೆಗೆ ಇದು ಮಹಾರಾಷ್ಟ್ರ ಮೂಲದ ಕಂಪನಿಯಾಗಿರುವುದರಿಂದ ಲೈಸೆನ್ಸ್ ನೀಡುವ ಬಗ್ಗೆ ಅಲ್ಲಿನ ಇಲಾಖೆಯಿಂದ ವಿವರಣೆ ಕೇಳಬೇಕಿತ್ತು.  ಕೆಟಿಪಿಪಿ ಕಾಯ್ದೆ ಪ್ರಕಾರ ಒಂದೇ ಸಂಸ್ಥೆಯ ತಾಂತ್ರಿಕ ಬಿಡ್ ಪರಿಗಣಿಸಿ ಹಣಕಾಸು ಬಿಡ್ ಒಪ್ಪುವಂತಿಲ್ಲ ಎಂಬ ನಿಯಮವಿದೆ.

ಟೆಂಡರ್ ರದ್ದಾಗಿತ್ತು:

ಈ ಹಿಂದೆ ಇದೇ ಸಂಸ್ಥೆಯು ಔಷಧಿಗಳನ್ನು ಖರೀದಿ ಮಾಡಲು ಮುಂದೆ ಬಂದಿದ್ದ ವೇಳೆ ಅಂದಿನ ಅಪರ ನಿರ್ದೇಶಕರಾದ ಡಾ.ರಾಮಚಂದ್ರ ಬೈರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ಸುಭೋದ್ ಯಾದವ್ ಈ ಟೆಂಡರ್‍ನಲ್ಲಿ ಗೋಲ್‍ಮಾಲ್ ನಡೆದಿದೆ ಎಂಬ ಶಂಕೆಯಿಂದ ರದ್ದುಪಡಿಸಿದ್ದರು.  ಜೂನ್ 2, 2017ರಂದು ಟೆಂಡರ್ ಅಧಿಸೂಚನೆ ನಂ. ಓಈಔ/Sಘೆಈ/Iಘೆಎ/14/201718 ಅಧಿಸೂಚನೆಯಂತೆ ಔಷಧಿ ಖರೀದಿಸಲು ಮುಂದಾಗಿದ್ದ ವೇಳೆ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡೀ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಪಡಿಸಿದ್ದರು.
ಇದೀಗ ಇಲಾಖೆ ಸಾರ್ವಜನಿಕರ ಕಣ್ಣೊರೆಸಲು 10 ಕೋಟಿ ವೆಚ್ಚದಲ್ಲಿ ಔಷಧಿಗಳನ್ನು ಖರೀದಿಸಲು ಮುಂದಾಗಿರುವುದು ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಧಿಕಾರಿಗಳು ಶಾಮೀಲು:

ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ನಡೆಯುತ್ತಿರುವ ಈ ಗೋಲ್‍ಮಾಲ್‍ಗೆ ಅಧಿಕಾರಿಗಳು ಹಾಗೂ ಕೆಲ ಮಧ್ಯವರ್ತಿಗಳೇ ನೇರ ಕಾರಣ ಎಂಬ ಆರೋಪಗಳು ಇಲಾಖೆಯಲ್ಲಿ ಕೇಳಿಬರುತ್ತಿದೆ.  ಹಣದಾಸೆಗಾಗಿ ಅಧಿಕಾರಿಗಳು ಟೆಂಡರನ್ನು ನಿರ್ದಿಷ್ಟ ಕಂಪನಿಗೆ ನೀಡುವುದು ಹಾಗೂ ಮಾರುಕಟ್ಟೆ ದರದಲ್ಲಿರುವ ಔಷಧಿಗಳನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಾರೆ ಎಂಬ ಆರೋಪ ಇದೆ.

ಪರಿಶೀಲನೆ ಸಭೆ ನಡೆಯಲೇ ಇಲ್ಲ:

ಇಲಾಖೆಯಲ್ಲಿ ಐವತ್ತು ಲಕ್ಷಕ್ಕಿಂತ ಹೆಚ್ಚು ಮೊತ್ತದ ಔಷಧಿಗಳನ್ನು ಖರೀದಿಸಬೇಕಾದರೆ ಸಾಮಾನ್ಯವಾಗಿ ಹಿರಿಯ ತಜ್ಞರನ್ನೊಳಗೊಂಡ ಪರಿಣಿತರ ತಂಡ ಪರಿಶೀಲನಾ ಸಭೆ ನಡೆಸಬೇಕು.  ಯಾವ ಕಂಪನಿಗೆ ನೀಡುತ್ತಿದ್ದೇವೆ. ಅದರ ಹಿನ್ನೆಲೆಯಲ್ಲಿ, ಉತ್ಪಾದನಾ ಸಾಮಥ್ರ್ಯ, ಕಂಪನಿಯ ಪಾರದರ್ಶಕತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಇದನ್ನು ಪರಿಶೀಲಿಸಿದ ಬಳಿಕವೇ ಟೆಂಡರ್ ನೀಡಬೇಕಾಗುತ್ತದೆ.   ಯಾವುದನ್ನು ಪರಿಶೀಲಿಸದೆ ಫಾರ್ಮವೇದ ಕಂಪನಿಗೆ ಟೆಂಡರ್ ನೀಡಲು ಮುಂದಾಗಿರುವುದು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ರಾಮನ ಲೆಕ್ಕ ಕೃಷ್ಣನ ಲೆಕ್ಕ:

ಅಂದಹಾಗೆ ರಾಜ್ಯ ಸರ್ಕಾರ ಖರೀದಿ ಮಾಡಲು ಮುಂದಾಗಿರುವ ಮೈಕ್ರೋ ನ್ಯೂಟ್ರಿಷೆಯೆಂಟ್ ಗ್ರಾನ್ಯುಯಲ್ಸ್ ಮಾತ್ರೆ ಒಂದು ಗ್ರಾಂಗೆ ಮಾರುಕಟ್ಟೆಯಲ್ಲಿ 70 ಪೈಸೆಗೆ ಸಿಗುತ್ತದೆ.  ಆದರೆ ಇಲಾಖೆಯವರು ಇದೇ ಔಷಧಿಯನ್ನು 1.92 ಪೈಸೆಗೆ ನೀಡಿ ಖರೀದಲು ಮುಂದಾಗಿದ್ದಾರೆ. ಇದರಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ರಾಮನ ಲೆಕ್ಕ, ಕೃಷ್ಣನ ಲೆಕ್ಕ ನೀಡಲು ಮುಂದಾಗಿರುವುದು ಸ್ಪಷ್ಟ.

ಬೇಲಿಯೇ ಎದ್ದು ಹೊಲ ಮೇಯ್ದಂತೆ:

ಇಷ್ಟೆಲ್ಲ ಬಾನಗಡಿ ನಡೆಸಿರುವ ಇಲಾಖೆಯ ಮತ್ತೊಂದು ಕರ್ಮಕಾಂಡವೆಂದರೆ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸುವುದು ತಾಂತ್ರಿಕ ನಿಪುಣರು. ಇಲ್ಲಿ ರಮ್ಯ.ಎನ್ ಎಂಬುವರು ಕೇವಲ ಪದವೀಧರ ಫಾರ್ಮಸಿಸ್ಟ್ ಆಗಿದ್ದಾರೆ. ಸಾಮಾನ್ಯವಾಗಿ ಇಂತಹ ಟೆಂಡರ್‍ನ್ನು ತಾಂತ್ರಿಕ ನಿಪುಣರು ಪರಿಶೀಲಿಸಿ ನೀಡಬೇಕಾಗುತ್ತದೆ. ಅಂದಹಾಗೆ ರಮ್ಯ. ಎನ್ ಅವರ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ 2015-16ನೇ ಸಾಲಿನಲ್ಲಿ ರಾಜ್ಯದ ವಿವಿಧ ಆರೋಗ್ಯ ಸಂಸ್ಥೆಗಳಿಗೆ ಔಷಧಿ ರಾಸಾಯನಿಕ ಮತ್ತು ಇತರೆ ವಸ್ತುಗಳನ್ನು ಖರೀದಿಸಿ ಪೂರೈಸಲು ಕರೆಯಲಾಗಿದ್ದ ಟೆಂಡರ್‍ನ್ನು ನಿಯಮ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ರಮ್ಯ ವಿರುದ್ದ ಕಾರಣ ಕೇಳಿ ಅಧೀನ ಕಾರ್ಯದರ್ಶಿ ಟಿ.ಎಂ.ನರಸಿಂಹಮೂರ್ತಿ ಅವರು ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ ಈಗಲೂ ಲೋಕಾಯುಕ್ತ ಸಂಸ್ಥೆಯಲ್ಲಿ ತನಿಖೆ ಮುಂದುವರೆದಿದೆ.  ಇಷ್ಟೆಲ್ಲಾ ಆರೋಪಗಳನ್ನು ಹೊತ್ತಿರುವ ರಮ್ಯ ಮುಂಬೈ ಮೂಲದ ಫಾರ್ಮ ವೇದ ಸಂಸ್ಥೆಗೆ ಟೆಂಡರ್ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.   ಇವರ ಕರ್ಮಕಾಂಡದಿಂದ ಬೇಸತ್ತಿದ್ದ ಇಲಾಖೆಯವರೇ ಜುಲೈ 1, 2017ರಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ವರ್ಗಾವಣೆ ಮಾಡಲಾಗಿತ್ತು. ರಮ್ಯ ಪ್ರಭಾವ ಎಷ್ಟಿದೆ ಎಂದರೆ ವರ್ಗಾವಣೆಗೊಂಡ ಒಂದೇ ಒಂದು ದಿನವೂ ಮಂಡ್ಯಕ್ಕೆ ಹೋಗದೇ ಪುನಃ ಅದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದೀಪಕ್ ಖುರಾನ:

ಆರೋಗ್ಯ ಕುಟುಂಬ ಇಲಾಖೆಯಲ್ಲಿ ದೀಪಕ್ ಖುರಾನ ಎಂದರೆ ಎಂತಹ ಅಧಿಕಾರಿಗಳು ಎದುರು ಹಾಕಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಷ್ಟರಮಟ್ಟಿಗೆ ಅವರು ಹಿಡಿತ ಸಾಧಿಸಿದ್ದಾರೆ.  ಅನಿವಾಸಿ ಭಾರತೀಯನಾದ ದೀಪಕ್ ಖುರಾನ, ಆರೋಗ್ಯ ಇಲಾಖೆಯಲ್ಲಿ ನಡೆಯುವ ಇಂಚಿಂಚು ಮಾಹಿತಿಗಳ ಭಾತ್ಮಿದಾರ. ಇಲಾಖೆಯಲ್ಲಿ ಏನೇ ಖರೀದಿಸಿದರೂ ಈತನ ಅನುಮತಿ ಇಲ್ಲದೆ ಏನೂ ನಡೆಯುವುದಿಲ್ಲ.   ಇಲಾಖೆಯಲ್ಲಿ ಹುಲ್ಲುಕಡ್ಡಿ ಮಿಸುಕಾಡಬೇಕಾದರೆ ದೀಪಕ್ ಖುರಾನನ ಒಪ್ಪಿಗೆ ಬೇಕು. ತನಗೆ ಬೇಕಾದ ಅಧಿಕಾರಿಗಳ ವರ್ಗಾವಣೆಯಿಂದ ಹಿಡಿದು ಔಷಧಿ ಖರೀದಿ, ಉತ್ಪಾದನೆ, ಪೂರೈಕೆ ಸೇರಿದಂತೆ ಎಲ್ಲವೂ ಇವರ ಸುಪರ್ದಿಯಲ್ಲೇ ನಡೆಯುತ್ತದೆ.   ಸಚಿವರು ಹಾಗೂ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಪಳಗಿರುವ ಈತ ಇರುವವರೆಗೂ ಇಲಾಖೆಗೆ ಹಿಡಿದಿರುವ ಗ್ರಹಣ ಬಿಡುವುದಿಲ್ಲ ಎಂದು ಅಧಿಕಾರಿಗಳೇ ದೂರುತ್ತಾರೆ.

Facebook Comments

Sri Raghav

Admin