ವೈದ್ಯಕೀಯ ಸೀಟು ಕುರಿತ ಮಹತ್ವದ ಮಾಹಿತಿ ಸೋರಿಕೆ : ಸಿಬಿಐ ಬಲೆಗೆ ಕರ್ನಲ್

ಈ ಸುದ್ದಿಯನ್ನು ಶೇರ್ ಮಾಡಿ

CBI--01

ನವದೆಹಲಿ, ಸೆ.19-ಶಿಸ್ತಿಗೆ ಹೆಸರಾದ ಭಾರತೀಯ ಸೇನಾ ಪಡೆಯಲ್ಲೂ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿರುವಾಗಲೇ ವೈದ್ಯಕೀಯ ಸೀಟು ಕುರಿತ ಗೋಪ್ಯ ಮಾಹಿತಿಗಳನ್ನು ವಿವಿಧ ಕಾಲೇಜುಗಳಿಗೆ ಸೋರಿಕೆ ಮಾಡುತ್ತಿದ್ದ ವ್ಯವಸ್ಥಿತ ಜಾಲವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಯಲು ಮಾಡುತ್ತಿದೆ. ಈ ಸಂಬಂಧ ಸೇನಾ ವೈದ್ಯಕೀಯ ಘಟಕದ ಕರ್ನಲ್ ಸೇರಿದಂತೆ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.  ಬಂಧಿತರನ್ನು ಸಿಟಿ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಚಾರಣೆ ತೀವ್ರಗೊಂಡಿದ್ದು, ಮತ್ತಷ್ಟು ಮಂದಿ ಬಲೆಗೆ ಬೀಳುವ ಸಾಧ್ಯತೆ ಇದೆ.

ಕರ್ನಲ್ ಅಜಯ್ ಕುಮಾರ್ ಸಿಂಗ್, ಭಾರತೀಯ ವೈದ್ಯಕೀಯ ಮಂಡಳಿಯ ಕೆಳದರ್ಜೆ ಗುಮಾಸ್ತ ಸಂತೋಷ್ ಕುಮಾರ್ ಹಾಗೂ ಇನ್ನಿಬ್ಬರು ಖಾಸಗಿ ವ್ಯಕ್ತಿಗಳಾದ ಸುಶೀಲ್ ಕುಮಾರ್ ಮತ್ತು ಸಚಿನ್ ಕುಮಾರ್ ಎಂಬುವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.  ವಿವಿಧ ಕಾಲೇಜುಗಳಿಗೆ ಸಂಬಂಧಪಟ್ಟಂತೆ ಭಾರತೀಯ ವೈದ್ಯಕೀಯ ಮಂಡಳಿ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ) ವ್ಯವಹರಿಸುವ ವಿಚಾರಗಳು, ತಪಾಸಣೆ, ಸೀಟುಗಳ ಸಂಖ್ಯೆ ಹಾಗೂ ಮತ್ತಿತರ ಸೂಕ್ಷ್ಮ ಮಾಹಿತಿಗಳನ್ನು ನೀಡುತ್ತಿದ್ದರು. ಇದಕ್ಕಾಗಿ ಭಾರೀ ಪ್ರಮಾಣದ ಲಂಚ-ರುಷುವತ್ತುಗಳನ್ನು ಸ್ವೀಕರಿಸುತ್ತಿದ್ದರು ಎಂದು ಸಿಬಿಐ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಈ ಸಂಬಂಧ ದೆಹಲಿ, ಚೆನ್ನೈ ಮತ್ತು ಪಾಂಡಿಚೇರಿ ಸೇರಿದಂತೆ ಒಂಭತ್ತು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ತೀವ್ರ ಶೋಧ ನಡೆಸಿ, 2 ಕೋಟಿ ರೂ. ನಗದು ಮತ್ತು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.  ಅಜಯ್ ಸಿಂಗ್‍ನ ದೆಹಲಿಯಲ್ಲಿರುವ ಅಂಜು ವಿಹಾರ್ ನಿವಾಸ ಮತ್ತು ಸಂತೋಶ್ ಕುಮಾರ್ ಮನೆ, ಹಾಗೂ ಒಂದು ಖಾಸಗಿ ಮೆಡಿಕಲ್ ಕಾಲೇಜಿನ ಮೇಲೂ ಸಿಬಿಐ ದಾಳಿ ನಡೆದಿದೆ.

ಈಗಾಗಲೇ ಸಿಂಗ್ ಹವಾಲಾ ಏಜೆಂಟ್‍ಗಳ ಮೂಲಕ ಈ ಮಾಹಿತಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದ್ದು, ಇನ್ನೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಲಕ್ಷ ರೂ.ಗಳನ್ನು ಪಡೆಯಲಿದ್ದರು. ಅಷ್ಟರೊಳಗೆ ಖಚಿತ ಮಾಹಿತಿಯನ್ನು ಆಧರಿಸಿ ಕರ್ನಲ್‍ನನ್ನು ಸಿಬಿಐ ತನ್ನ ಬಲೆಗೆ ಕೆಡವಿಕೊಂಡಿತು.  ಪಶ್ಚಿಮ ದೆಹಲಿ ಸಾಗರ್‍ಪರ್ ನಿವಾಸಿ ಸುಶೀಲ್ ಕುಮಾರ್ ಇಬ್ಬರು ಸರ್ಕಾರಿ ನೌಕರರ ಪರವಾಗಿ ಹವಾಲಾ ಆಪರೇಟರ್‍ಗಳಿಂದ ಚಾಂದಿನಿ ಚೌಕದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗಲೇ ಅಧಿಕಾರಿಗಳು ಬಂಧಿಸಿದರು.

ಈ ನಾಲ್ವರು ವ್ಯವಸ್ಥಿತ ಜಾಲ ಹೊಂದಿದ್ದು, ವಿವಿಧ ವೈದ್ಯಕೀಯ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಗೋಪ್ಯ ಮಾಹಿತಿಯಗಳನ್ನು ಸೋರಿಕೆ ಮಾಡುತ್ತಿದ್ದರು. (ಎಂಸಿಐ) ವ್ಯವಹರಿಸುವ ವಿಚಾರಗಳು, ಕೋರ್ಸ್‍ಗಳ ಸಂಖ್ಯೆ, ಅದಕ್ಕನ್ನುಗುಣವಾಗಿ ನಿಗದಿಗೊಳಿಸಲಾದ ಸೀಟುಗಳು, ಪೂರ್ವ ತಪಾಸಣೆ, ಹಾಗೂ ಮತ್ತಿತರ ಸೂಕ್ಷ್ಮ ಆಡಳಿತಾತ್ಮಕ ಮಾಹಿತಿಗಳನ್ನು ನೀಡುತ್ತಿದ್ದರು.  ಈ ದೊಡ್ಡ ಹಗರಣದಲ್ಲಿ ಪಾಂಡಿಚೇರಿಯ(ಪುದಚೇರಿ)ಶ್ರೀ ವೆಂಕಟೇಶ್ವರ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್‍ನ ಅಧ್ಯಕ್ಷ ಬಿ.ರಾಮಚಂದ್ರನ್ ಅವರ ಹೆಸರೂ ಸಿಬಿಐ ಎಫ್‍ಐಆರ್‍ನಲ್ಲಿದೆ. ಈ ಪ್ರಕರಣಗಳ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

Facebook Comments

Sri Raghav

Admin