ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Cauvery-Supreme--Court

ನವದೆಹಲಿ, ಸೆ.20- ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಭಾರೀ ಹಿನ್ನಡೆಯಾಗುವಂತಹ ತೀರ್ಪು ಸುಪ್ರೀಂಕೋರ್ಟ್‍ನಿಂದ ಬಂದಿದೆ.
ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಕಳೆದ ಐದು ದಶಕಗಳಿಂದ ನಿರ್ವಹಣಾ ಮಂಡಳಿ ರಚನೆಗೆ ರಾಜ್ಯಸರ್ಕಾರ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದೀಗ ಖುದ್ದು ನ್ಯಾಯಾಲಯವೇ ನಿರ್ವಹಣಾ ಮಂಡಳಿರ ಚನೆ ಮಾಡಬೇಕೆಂದು ಆದೇಶ ನೀಡಿರುವುದರಿಂದ ರಾಜ್ಯಸರ್ಕಾರ ಹೋರಾಟಕ್ಕೆ ತೀವ್ರ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ.

ಕೃಷ್ಣ ಹಾಗೂ ನರ್ಮದಾ ನದಿ ನೀರು ಹಂಚಿಕೆ ಕುರಿತಂತೆ ನಿರ್ವಹಣಾ ಮಂಡಳಿ ರಚನೆ ಮಾಡಿರುವಾಗ ಕಾವೇರಿ ನದಿಗೂ ಈ ನಿಯಮ ಏಕೆ ಅನ್ವಯವಾಗಬಾರದೆಂದು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್‍ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಕರ್ನಾಟಕ ಪರ ವಕೀಲ ನಾರಿಮನ್ ಅವರನ್ನು ಪ್ರಶ್ನಿಸಿದರು. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಕೃಷ್ಣ ನದಿ ನೀರು ಹಂಚಿಕೆ ಕುರಿತಂತೆ ನಿರ್ವಹಣೆ ಮಂಡಳಿ ರಚನೆ ಮಾಡಲಾಗಿದೆ. ಇದೇ ರೀತಿ ಗುಜರಾತ್, ಮಧ್ಯಪ್ರದೇಶದಲ್ಲಿ ನರ್ಮದಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ರಚನೆ ಮಾಡಿರುವಾಗ ನೀವು ಏಕೆ ಕಾವೇರಿನದಿ ನೀರು ಹಂಚಿಕೆಯಲ್ಲಿ ಏಕೆ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ವಹಣಾ ಮಂಡಳಿ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಆಯಾ ಸರ್ಕಾರಗಳು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ನಾರಿಮನ್ ವಾದ ಮಂಡಿಸಿದರು. ಇದಕ್ಕೆ ತಮಿಳುನಾಡು ಪರ ವಕೀಲರು ಆಕ್ಷೇಪಿಸಿ ಈವರೆಗೂ ಕೇಂದ್ರ ಸರ್ಕಾರದ ಜಲಮಂಡಳಿಯೇ ನೀರು ಹಂಚಿಕೆ ಮಾಡಿದೆ. ನದಿ ನೀರು ಹಂಚಿಕೆ ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ರಚನೆಯಾದರೆ ಮೂರು ರಾಜ್ಯಗಳಿಗೂ ಪರಿಸ್ಥಿತಿಗಳಿಗನುಗುಣವಾಗಿ ನೀರು ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಕರ್ನಾಟಕ ಸರ್ಕಾರದ ವಾದವನ್ನು ಪುರಸ್ಕರಿಸದೆ ಮಂಡಳಿ ರಚನೆಗೆ ಅವಕಾಶ ಕಲ್ಪಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅಂತಿಮವಾಗಿ ಎರಡೂ ಕಡೆ ವಾದ-ವಿವಾದ ಆಲಿಸಿದ ತ್ರಿಸದಸ್ಯ ಪೀಠ ನಿರ್ವಹಣಾ ಮಂಡಳಿ ರಚನೆಗೆ ಆದೇಶ ನೀಡಿತು. ಈ ಮಂಡಳಿ ನಿರ್ವಹಣೆ ಹೇಗಿರಬೇಕೆಂಬುದನ್ನು ಮುಂದಿನ ಆದೇಶದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.

Facebook Comments

Sri Raghav

Admin