ಬಿಎಸ್ವೈ ನಂತರ ಪ್ರಮುಖ ನಾಯಕರ ಕ್ಷೇತ್ರ ಬದಲಾವಣೆಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

BJP--001

ಬೆಂಗಳೂರು,ಸೆ.20-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಉತ್ತರ ಕರ್ನಾಟಕದಿಂದ ಕಣಕ್ಕಿಳಿಸಲು ಪಕ್ಷದ ಚಿಂತಕರ ಚಾವಡಿ ತೀರ್ಮಾನಿಸಿದ ಬೆನ್ನಲ್ಲೇ ಇದೀಗ ಪ್ರಮುಖ ನಾಯಕರನ್ನು ಕ್ಷೇತ್ರ ಬದಲಾಯಿಸುವಂತೆ ಸೂಚನೆ ನೀಡಿದೆ.  ಈ ಪ್ರಕಾರವಾಗಿ ಈವರೆಗೂ ತನ್ನ ರಾಜಕೀಯ ಭವಿಷ್ಯವನ್ನೇ ರೂಪಿಸಿಕೊಂಡಿದ್ದ ಘಟಾನುಘಟಿ ನಾಯಕರು ಅನಿವಾರ್ಯ ಕಾರ್ಯಗಳಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಬಿಜೆಪಿಯ ಚಿಂತಕರ ಛಾವಡಿ ಸೂಚಿಸಿರುವಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ , ಮಾಜಿ ಸಚಿವರಾದ ಆರ್.ಅಶೋಕ್, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರ ಪ್ರಮುಖರು ವರಿಷ್ಠರು ಸೂಚಿಸಿದ ಕ್ಷೇತ್ರದಲ್ಲೇ ಸ್ಪರ್ಧಿಸಬೇಕಾಗುತ್ತದೆ.  ಬಿಜೆಪಿ ಮುಖಂಡ ಆರ್.ಅಶೋಕ್ ಈವರೆಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡಿದ್ದರು. ಇದೀಗ ವರಿಷ್ಠರು ಅವರಿಗೆ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಲಹೆ ಮಾಡಿದ್ದಾರೆ. ಒಕ್ಕಲಿಗರ ಮತಗಳು ಈ ಪ್ರದೇಶದಲ್ಲಿ ನಿರ್ಣಾಯಕರಾಗಿರುವುದರಿಂದ ಅಶೋಕ್ ಸ್ಪರ್ಧಿಸಿದರೆ ಒಂದಿಷ್ಟು ಮತಗಳನ್ನು ಪಕ್ಷಕ್ಕೆ ಸೆಳೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು.

ಇದರ ಜೊತೆಗೆ ಕಳೆದ ಮೂರು ಬಾರಿ ಚಿಕ್ಕಮಗಳೂರಿನಿಂದ ಹ್ಯಾಟ್ರಿಕ್ ಭಾರಿಸಿರುವ ಬಿಜೆಪಿ ಯುವ ನಾಯಕ ಸಿ.ಟಿ.ರವಿ ಅವರನ್ನು ಮೈಸೂರು ಜಿಲ್ಲೆಯಲ್ಲಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಅಶೋಕ್ ಮತ್ತು ಸಿ.ಟಿ.ರವಿ ಜೋಡಿ ಸ್ಪರ್ಧಿಸಿದರೆ ಬಿಜೆಪಿಗೆ ಒಕ್ಕಲಿಗ ಮತಗಳನ್ನು ಸೆಳೆಯಬಹುದು ಅಲ್ಲದೆ ಜೆಡಿಎಸ್‍ಗೆ ಬಲವಾದ ಪೆಟ್ಟು ನೀಡಬಹುದೆಂಬುದು ಆರ್‍ಎಸ್‍ಎಸ್ ನಾಯಕರ ಸಲಹೆ. ಇನ್ನು ಸತತ ನಾಲ್ಕು ಬಾರಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಕೂಡ ಕ್ಷೇತ್ರ ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ.
ಲಿಂಗಾಯಿತ ಮತಗಳನ್ನು ಸೆಳೆಯುವ ಉದ್ದೇಶದಿಂದ ಯಡಿಯೂರಪ್ಪ ಜೊತೆ ಉತ್ತರ ಕರ್ನಾಟಕಕ್ಕೆ ಶೆಟ್ಟರ್ ಶಿಫ್ಟ್ ಆದರೂ ಅಚ್ಚರಿ ಇಲ್ಲ. ಈಗಾಗಲೇ ಬಿಜೆಪಿ ಬಿಎಸ್‍ವೈಗೆ ಉತ್ತರ ಕರ್ನಾಟಕ ವಲಸೆ ಹೋಗುವಂತೆ ಸೂಚಿಸಿದೆ.

ಕೊಪ್ಪಳಕ್ಕೆ ಈಶ್ವರಪ್ಪ :

ಶಿವಮೊಗ್ಗದಲ್ಲೇ ರಾಜಕೀಯ ಜೀವನ ಪ್ರಾರಂಭಿಸಿದ್ದ ಈಶ್ವರಪ್ಪ ಈ ಬಾರಿ ಕೊಪ್ಪಳದಲ್ಲಿ ಸ್ಪರ್ಧಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.   ಕೊಪ್ಪಳದಿಂದ ಸ್ಪರ್ಧಿಸಿದರೆ ಈ ಜಿಲೆಯಲ್ಲಿ ನಿರ್ಣಾಯಕವಾಗಿರುವ ಕುರುಬ ಮತವನ್ನು ಈಶ್ವರಪ್ಪ ಸೆಳೆದರೆ ಪಕ್ಷಕ್ಕೆ ಆನೆ ಬಲ ಬರುತ್ತದೆ ಎಂಬ ಮುಂದಾಲೋಚನೆ ಬಿಜೆಪಿಯಲ್ಲಿದೆ.   ಶಿವಮೊಗ್ಗ ನಗರ ಹೇಳಿಕೇಳಿ ಬಿಜೆಪಿಯ ಭದ್ರಕೋಟೆ. ಈಶ್ವರಪ್ಪನವರನ್ನು ಕೊಪ್ಪಳದಿಂದ ಕಣಕ್ಕಿಳಿಸಿದರೆ ಶಿವಮೊಗ್ಗದಿಂದ ಯಡಿಯೂರಪ್ಪನವರ ಬೆಂಬಲಿಗ ರುದ್ರೇಗೌಡ ಅವರಿಗೆ ಟಿಕೆಟ್ ನೀಡುವುದು ಸುಲಭವಾಗುತ್ತದೆ. ಅಲ್ಲದೆ ಉಂಟಾಗಬಹುದಾದ ಭಿನ್ನಮತವನ್ನು ಶಮನ ಮಾಡಬಹುದು. ಹೀಗಾಗಿಯೇ ವರಿಷ್ಠರು ಈಶ್ವರಪ್ಪಗೆ ಕೊಪ್ಪಳದಲ್ಲಿ ಸ್ಪರ್ಧಿಸುವಂತೆ ಕಿವಿಮಾತು ಹೇಳಿದ್ದಾರೆ.

ಇದೇ ರೀತಿ ಬಸವರಾಜ ಬೊಮ್ಮಾಯಿ ಕೂಡ ಉತ್ತರ ಕರ್ನಾಟಕದಲ್ಲಿ ಸುರಕ್ಷಿತ ಕ್ಷೇತ್ರವನ್ನು ಹುಡುಕುವತ್ತ ಮಗ್ನರಾಗಿದ್ದಾರೆ. ಸಮುದಾಯದ ಪ್ರಭಾವಿ ಮುಖಂಡರನ್ನು ನಿರ್ಣಾಯಕವಾಗಿರುವ ಮತ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವ ಮೂಲಕ ಪ್ರತಿ ಪಕ್ಷಗಳ ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡುವುದು ಬಿಜೆಪಿ ಲೆಕ್ಕಾಚಾರ.

ಉತ್ತರದಲ್ಲಿ ಪ್ರವಾಸ:

ನಾಳೆಯಿಂದ ಮೂರು ದಿನಗಳ ಕಾಲ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಕಲಬುರಗಿ, ಬೀದರ್ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಇಲ್ಲಿ ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂ ತೆ ಪದಾಧಿಕಾರಿಗಳನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಬಗ್ಗೆ ಕಾರ್ಯ ತಂತ್ರ ರೂಪಿಸಲಿದ್ದಾರೆ.ಈ ವೇಳೆ ಈ ಭಾಗದ ಸ್ಥಿತಿಗತಿ ಕುರಿತಂತೆ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸುವರು. ಬಳಿಕ ಯಾರು, ಯಾವಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಿದ್ದು, ತದನಂತರವೇ ಯಾರು ಎಲ್ಲಿಂದ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ ಎಂಬ ಗುಟ್ಟು ರಟ್ಟಾಗಲಿದೆ.

Facebook Comments

Sri Raghav

Admin