ಮನೆಗಳ್ಳತನ-ಬೈಕ್ ಕಳ್ಳತನ : ನಾಲ್ವರ ಸೆರೆ, 15.40 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

Crime-Benga

ಬೆಂಗಳೂರು,ಸೆ.20-ನಗರದ ವಿವಿಧೆಡೆ ಹಗಲು ವೇಳೆಯಲ್ಲಿಯೇ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿ 15.40 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಮನೆಗಳ್ಳರ ಬಂಧನ:

ಮನೆಗಳ್ಳತನ ಮಾಡುತ್ತಿದ್ದ ಬೋವಿ ಕಾಲೋನಿಯ ಗಜೇಂದ್ರ, ಸುರೇಶ್ ಮತ್ತು ವೆಂಕಟೇಶ್ ಎಂಬುವರನ್ನು ಬಂಧಿಸಿ 10.20 ಲಕ್ಷ ರೂ. ಬೆಲೆ ಬಾಳುವ 240 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ರಾಮಮೂರ್ತಿನಗರ, ಕೆ.ಆರ್.ಪುರಂ ಠಾಣೆಗಳಿಗೆ ಸಂಬಂಧಿಸಿದ 6 ಪ್ರಕರಣಕ್ಕೆ ಸಂಬಂಧಿಸಿದಂತೆ 240 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಮೂವರು ಹಗಲು ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದದ್ದು ವಿಚಾರಣೆಯಿಂದ ತಿಳಿದುಬಂದಿದೆ.

ದ್ವಿಚಕ್ರ ವಾಹನ ಕಳ್ಳನ ಸೆರೆ:

Bike-Rob

ಪಾರ್ಕಿಂಗ್ ಸ್ಥಳಗಳಲ್ಲಿ ಹಾಗೂ ಮನೆ ಮುಂದೆ ನಿಲ್ಲಿಸಿದಂತಹ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ವಿನೋದ್(20) ಎಂಬಾತನನ್ನು ರಾಮಮೂರ್ತಿನಗರ ಠಾಣೆಪೊಲೀಸರು ಬಂಧಿಸಿ ಎಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ 13 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಮಮೂರ್ತಿನಗರ, ಹೆಣ್ಣೂರು, ಬಾಣಸವಾಡಿ, ಬಯ್ಯಪ್ಪನಹಳ್ಳಿ, ಜೆ.ಬಿ.ನಗರ, ಭಾರತಿನಗರ, ಕೋರಮಂಗಲ, ಕಾಟನ್‍ಪೇಟೆ ಠಾಣೆಯ ಎಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ 5.20 ಲಕ್ಷ ರೂ. ಬೆಲೆಯ 13 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಇನ್‍ಸ್ಪೆಕ್ಟರ್ ಚಂದ್ರಧರ ಮತ್ತು ಸಬ್‍ಇನ್‍ಸ್ಪೆಕ್ಟರ್ ರಾಜು ಹಾಗೂ ಪ್ರೊಬೆಷನರಿ ಸಬ್‍ಇನ್‍ಸ್ಪೆಕ್ಟರ್ ಮೌನೇಶ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬೈಕ್‍ಗಳ ಕದ್ದು ಸರಗಳ್ಳತನ : ಮೂವರ ಬಂಧನ

Bike-Rob--01

ಬೆಂಗಳೂರು,ಸೆ.20-ಬೈಕ್‍ಗಳನ್ನು ಕಳ್ಳತನ ಮಾಡಿ ಆ ವಾಹನಗಳಲ್ಲೇ ಸುತ್ತಾಡುತ್ತಾ ಸರ ಅಪಹರಣ ಮಾಡುತ್ತಿದ್ದ ಮೂವರು ಸರಗಳ್ಳರನ್ನು ಬಾಣಸವಾಡಿ ಪೊಲೀಸರು ಬಂಧಿಸಿ 7.5 ಲಕ್ಷ ರೂ. ಬೆಲೆ ಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಕೆ.ಜಿ.ಹಳ್ಳಿ ಎಜೈಕಲ್ ಇಂಡಸ್ಟ್ರೀಯಲ್ ಏರಿಯಾದ ನಿವಾಸಿ ಸಜ್ಜಾದ್ ಮಿರ್ಜಾ, ಸೈಯದ್ ನಾಸೀರ್ ಮತ್ತು ಕಲೀಂ ಖಾನ್ ಬಂಧಿತ ಸರಗಳ್ಳರು.  ಇವರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಆ ವಾಹನಗಳಲ್ಲಿಯೇ ಒಂಟಿಯಾಗಿ ಹಾಗೂ ಜೊತೆಯಾಗಿ ಬೈಕ್ ಸವಾರಿ ಮಾಡಿಕೊಂಡು ಹಗಲು ವೇಳೆಯಲ್ಲಿ ಓಡಾಡುತ್ತಾ ಮನೆ ಬಾಗಿಲನ್ನು ಮುಂದೆ ಮಾಡಿಕೊಂಡು ಹೊರ ಹೋಗುವ ಮಹಿಳೆಯರನ್ನು ಗಮನಿಸಿ ಆ ಮನೆಗಳಿಗೆ ನುಗ್ಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದರು.

ಅಲ್ಲದೆ ಕಳ್ಳತನ ಮಾಡಿದ್ದ ಬೈಕ್‍ಗಳಲ್ಲೇ ಸುತ್ತಾಡುತ್ತಾ ಮಹಿಳೆಯರ ಸರಗಳನ್ನು ಅಪಹರಿಸುತ್ತಿದದ್ದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಗಳ ಬಂಧನದಿಂದ ಬಾಣಸವಾಡಿ ವ್ಯಾಪ್ತಿಯ ನಾಲ್ಕು ಸರ ಅಪಹರಣ ಪ್ರಕರಣ, ಮೂರು ಮನೆ ಕಳ್ಳವು ಹಾಗೂ ಇತರೆ ಕಳವು ಮತ್ತು ಹಲಸೂರು, ಕೆ.ಆರ್.ಪುರಂ, ಡಿ.ಜೆ.ಹಳ್ಳಿ, ಬಾಣಸವಾಡಿ  ಮತ್ತು ಕೊತ್ತನೂರು, ಠಾಣೆ ಸರಹದ್ದುಗಳಲ್ಲಿ ಕಳ್ಳತನವಾಗಿದ್ದಂತಹ ಐದು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 13 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರೊಂದಿಗೆ ಸೇರಿ ಸುಲಿಗೆ ಮಾಡುತ್ತಿದ್ದ ಮತ್ತೊಬ್ಬ ಆರೋಪಿ ಇಮ್ರಾನ್ ತಲೆಮರೆಸಿಕೊಂಡಿದ್ದು ಈತನ ಪತ್ತೆ ಕಾರ್ಯ ಮುಂದುವರೆದಿದೆ.

Facebook Comments

Sri Raghav

Admin