ಮೇಯರ್ ಆಯ್ಕೆಯಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ : ಡಿ.ಕೆ.ಸುರೇಶ್ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

DK-Suresh--01

ಬೆಂಗಳೂರು,ಸೆ.20- ಈ ಬಾರಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಇಬ್ಬರು ಸದಸ್ಯರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.  ಎರಡು ಬಾರಿ ಮೇಯರ್ ಚುನಾವಣೆ ನಡೆದಾಗ ತಮ್ಮನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಈ ಬಾರಿಯಾದರೂ ನಮ್ಮನ್ನು ಪರಿಗಣಿಸಿ ರಾಜರಾಜೇಶ್ವರಿನಗರ ಕ್ಷೇತ್ರದ ವೇಲು ನಾಯಕ್ ಹಾಗೂ ಬೇಗೂರು ಬಿಬಿಎಂಪಿ ಸದಸ್ಯ ಅಂಜನಪ್ಪ ಅವರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಗೆ ಹೊಸದಾಗಿ ಸೇರುರಿವ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಕ್ಷೇತ್ರದವರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಅಧಿಕಾರ ಹಂಚಿಕೆ ಹಾಗೂ ಅಭಿವೃದ್ದಿ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ನಮ್ಮ ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ಕೇಳುವುದು ನಮ್ಮ ಹಕ್ಕು. ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳಾಗದೆ ಹಾಗೆ ಉಳಿದಿವೆ. ನಾನು ಸಂಸದ. ನನ್ನನ್ನು ಪರಿಗಣಿಸಬೇಕು. ಒಂದು ವೇಳೆ ಪರಿಗಣಿಸದಿದ್ದರೆ ಮುಂದೆ ಏನು ಬೇಕಾದರೂ ಆಗಬಹುದು ಎಂದು ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.  ಮೇಯರ್ ಆಯ್ಕೆ ಬಗ್ಗೆ ಈಗಾಗಲೇ ಕೆಲವು ನಾಯಕರ ಜೊತೆ ಚರ್ಚಿಸಿದ್ದೇನೆ. ನಮ್ಮ ಮನವಿಗೆ ವರಿಷ್ಠರು ಸ್ಪಂದಿಸಿದ್ದಾರೆ. ಮುಂದೆ ನಮ್ಮದೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮನ್ನು ಆಹ್ವಾನಿಸಿಲ್ಲ. ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ಜೆಡಿಎಸ್ ಜೊತೆ ನನ್ನ ನೇತೃತ್ವದಲ್ಲಿ ಮಾತುಕತೆ ನಡೆಸುತ್ತೇನೆ ಎಂದರು.  ಕೇವಲ ಮಲ್ಲೇಶ್ವರಂ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ನಮ್ಮ ಕ್ಷೇತ್ರಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ನಾನು ಜನರಿಂದ ಆಯ್ಕೆಯಾದ ನನಗೆ ನಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

Facebook Comments

Sri Raghav

Admin