ಚುನಾವಣೆ ನಂತರ ಬಿಬಿಎಂಪಿ ವಿಭಜನೆ : ರಚನೆಯಾಗುವುದೇ ಗ್ರೇಟರ್ ಬೆಂಗಳೂರು..?

ಈ ಸುದ್ದಿಯನ್ನು ಶೇರ್ ಮಾಡಿ

bbmp2

– ರಮೇಶ್‍ಪಾಳ್ಯ

ಬೆಂಗಳೂರು, ಸೆ.20-ಬಿಬಿಎಂಪಿ ಮೇಯರ್ ಆಯ್ಕೆಗೆ ಇದೇ 28ರಂದು ಚುನಾವಣೆ ನಿಗದಿಯಾಗಿದೆ. ಇದರ ಬೆನ್ನಲ್ಲೇ ಪಾಲಿಕೆಯನ್ನು ಮೂರು ಭಾಗ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಬಿಬಿಎಂಪಿಯನ್ನು ಮೂರು ಪಾಲಿಕೆಗಳನ್ನಾಗಿ ಪರಿವರ್ತಿಸಿ ಇಡೀ ಮೂರು ಪಾಲಿಕೆಗಳ ಉಸ್ತುವಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ.   ಏನಪ್ಪಾ… ಬಿಬಿಎಂಪಿ ಮೇಯರ್ ಆಯ್ಕೆ ಸಂದರ್ಭದಲ್ಲೇ ವಿಭಜನೆ ಮಾತು ಎಂದು ಗಾಬರಿಪಡುವ ಅಗತ್ಯವೇನಿಲ್ಲ. ನಿಗದಿಯಂತೆ 28ರಂದು ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದರೆ 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ನಂತರವಷ್ಟೆ ಬಿಬಿಎಂಪಿಯನ್ನು ವಿಭಜಿಸಲಾಗುವುದು ಎಂದು ತಿಳಿದುಬಂದಿದೆ.

ಆಡಳಿತ ಸುಧಾರಣೆ ಮತ್ತು ಸಮನ್ವಯತೆ ಸಾಧಿಸುವ ದೃಷ್ಟಿಯಿಂದ ಬಿಬಿಎಂಪಿಯನ್ನು ಮೂರು ಭಾಗ ಮಾಡಲು ತೀರ್ಮಾನಿಸಲಾಗಿದೆ. ಮೂರು ಹಂತಗಳಲ್ಲಿ ಪಾಲಿಕೆಯನ್ನು ವಿಭಜಿಸಲು ಮುಂದಾಗಿದ್ದು, ಮೊದಲನೆ ಹಂತದಲ್ಲಿ ವಾರ್ಡ್ ಸಮಿತಿಗಳನ್ನು ರಚನೆ ಮಾಡುವುದು, ಎರಡನೆ ಹಂತದಲ್ಲಿ ಬಿಬಿಎಂಪಿಯನ್ನು ಮೂರು ಭಾಗ ಮಾಡುವುದು ಹಾಗೂ ಮೂರನೆ ಹಂತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡುವಂತೆ ಬಿಬಿಎಂಪಿ ಪುನರ್ ರಚನಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಮೇಯರ್ ನೇರ ಆಯ್ಕೆ:

ಗ್ರೇಟರ್ ಬೆಂಗಳೂರು ರಚನೆಯಾದರೆ ಜನರಿಂದಲೇ ನೇರವಾಗಿ ಆಯ್ಕೆಯಾಗುವ ಮೇಯರ್ ಅವರೇ ಪ್ರಾಧಿಕಾರದ ಮುಖ್ಯಸ್ಥರಾಗಿರುತ್ತಾರೆ. ಮಾತ್ರವಲ್ಲ ಅವರ ಅವಧಿ ಐದು ವರ್ಷಗಳಾಗಿರಲಿದೆ.  ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಅದರ ಮುಖ್ಯಸ್ಥರಾದ ಮೇಯರ್ ಅವರದ್ದೇ ಪರಮಾಧಿಕಾರವಾಗಿರಲಿದ್ದು, ನಗರದ ಮೂಲಭೂತ ಸೌಕರ್ಯಾಭಿವೃದ್ಧಿ ಮತ್ತಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವರೇ ಸ್ವತಂತ್ರರು. ಸಂಪೂರ್ಣ ಅಧಿಕಾರ ಹೊಂದುವ ಮೇಯರ್ ಅವರು ಸರ್ಕಾರಕ್ಕೆ ಪರ್ಯಾಯವಾಗಿ ಆಡಳಿತ ನಡೆಸುವರು.

ವಿಧಾನಸಭೆ ಚುನಾವಣೆ ನಂತರ ವಿಭಜನೆ:

ಈಗಾಗಲೇ ಪ್ರಾದೇಶಿಕ ಆಯುಕ್ತರು ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿಭಜನೆ ಸಾಧ್ಯವಿಲ್ಲ. ಆದರೆ ವಿಧಾನಸಭೆ ಚುನಾವಣೆ ನಂತರ ವಿಭಜನೆ ಕಾರ್ಯವನ್ನು ಕೈಗೆತ್ತಿ ಕೊಳ್ಳಲಾಗುವುದು. ಸದ್ಯ ಆರಿಸಿ ಬಂದಿರುವ 198 ಸದಸ್ಯರ ಅವಧಿ ಇನ್ನು ಮೂರು ವರ್ಷಗಳು ಇರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸದೆ ಬಿಬಿಎಂಪಿಯನ್ನು ವಿಭಜನೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ಖಚಿತಪಡಿಸಿವೆ.  ಬಿಬಿಎಂಪಿ 800 ಕಿ.ಮೀ. ಗಳಿಗೂ ಹೆಚ್ಚು ಸುತ್ತಳತೆ ಹೊಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಎಂಟು ವಲಯಗಳ ನಡುವೆ ಸಮನ್ವಯತೆ ಸಾಧಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಮನಗಂಡು ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಳೆದು, ತೂಗಿ ಪಾಲಿಕೆಯನ್ನು ಮೂರು ಭಾಗಗಳನ್ನಾಗಿ ಮಾಡುವುದು ಸೂಕ್ತ ಎಂದು ಪುನರ್‍ರಚನಾ ಸಮಿತಿ ಅಭಿಪ್ರಾಯಪಟ್ಟಿದೆ.
ಸರ್ಕಾರ ಕೂಡ ಆಡಳಿತ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜಿಸಲು ಸಹಮತ ವ್ಯಕ್ತಪಡಿಸಿದ್ದು, ಸದ್ಯ ವಿಭಜನಾ ಕಾರ್ಯ ಕೈಗೆತ್ತಿಕೊಳ್ಳಲು ತಾಂತ್ರಿಕ ಅಡಚಣೆ ಎದುರಾಗಲಿರುವ ಹಿನ್ನೆಲೆಯಲ್ಲಿ 2018ರ ವಿಧಾನಸಭಾ ಚುನಾವಣೆ ನಂತರ ಪಾಲಿಕೆಯನ್ನು ವಿಭಜಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಸರ್ಕಾರದ ಜಾಣ ನಡೆ:

ತಕ್ಷಣವೇ ಬಿಬಿಎಂಪಿಯನ್ನು ವಿಭಜಿಸಿದರೆ ನ್ಯಾಯಾಂಗದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ಮೂರು ಪಾಲಿಕೆಗಳ ನಡುವೆ ಸಮನ್ವಯತೆ ಸಾಧಿಸುವುದು ಅಸಾಧ್ಯದ ಮಾತೇ ಸರಿ. ಹೀಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಪಾಲಿಕೆಯನ್ನು ವಿಭಜನೆ ಮಾಡಲಾಗುವುದು.  ಸರ್ಕಾರ ಆಡಳಿತ ದೃಷ್ಟಿಯಿಂದ ಇದ್ದ ಎಂಟು ವಲಯಗಳನ್ನು ಹತ್ತು ವಲಯಗಳನ್ನಾಗಿ ಮಾರ್ಪಡಿಸಿದೆ. ಆದರೆ ಇದು ಇನ್ನೂ ಜಾರಿಯಾಗಿಲ್ಲ. ಸದ್ಯಕ್ಕೆ ಹತ್ತು ವಲಯಗಳ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸುವತ್ತ ಗಮನಹರಿಸಲು ಆದ್ಯತೆ ನೀಡಲಾಗಿದೆ.

ಅಮಾನತಿಲ್ಲ:

ಲಿಕೆಯನ್ನು ಮೂರು ಭಾಗ ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಂಗೀಕಾರ ದೊರೆತಿದ್ದರೂ ಹಾಲಿ ಬಿಬಿಎಂಪಿ ಆಡಳಿತದಲ್ಲಿ ಅಮಾನತು ಪಡಿಸಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ಸರ್ಕಾರ ಅಮಾನತು ಮಾಡದಿರಲು ತೀರ್ಮಾನಿಸಿರುವುದು 198 ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 100 ಸದಸ್ಯರನ್ನೊಳಗೊಂಡಿದ್ದ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿ ನಗರಕ್ಕೆ 110ಹಳ್ಳಿಗಳು, 7 ನಗರಸಭೆ ಮತ್ತು ಒಂದು ಪುರಸಭೆಯನ್ನು ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು 800 ಕಿ.ಮೀ. ಸುತ್ತಳತೆ ವ್ಯಾಪ್ತಿಗೆ ಒಳಪಟ್ಟಿತ್ತು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಬಿಬಿಎಂಪಿಯನ್ನು ವಿಭಜಿಸುವ ಮಾತನಾಡುತ್ತಲೇ ಬಂದಿದ್ದರು. ಆದರೆ ತಾಂತ್ರಿಕ ಕಾರಣದಿಂದ ಅವರ ಉದ್ದೇಶ ಈಡೇರಿರಲಿಲ್ಲ. ಇದೀಗ ಬಿಬಿಎಂಪಿ ವಿಭಜನೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, 2018ರ ಚುನಾವಣೆ ನಂತರ ಬಿಬಿಎಂಪಿಯನ್ನು ವಿಭಜಿಸುವ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ನಿರ್ಧಾರವೇನು?

ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಬಿಎಂಪಿ ವಿಭಜನೆಯಾಗುವುದು ಬಹುತೇಕ ಖಚಿತ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವ ನಿರ್ಧಾರ ಕೈಗೊಳ್ಳುವರೋ ಗೊತ್ತಿಲ್ಲ.  ಹಾಲಿ ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹಾಗೇ ಉಳಿಸಿಕೊಳ್ಳುವರೇ ಅಥವಾ ಆಡಳಿತ ದೃಷ್ಟಿಯಿಂದ ವಿಭಜಿಸಲು ಮುಂದಾಗುವರೋ ಕಾದುನೋಡಬೇಕಿದೆ.

Facebook Comments

Sri Raghav

Admin