ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯಕ್ಕೆ ಅನ್ಯಾಯ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಮೈಸೂರು, ಸೆ.21- ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂಬ ಆತಂಕ ಎದುರಾಗಿದೆ. ಈ ಬಗ್ಗೆ ಪ್ರಬಲ ವಾದ ಮಂಡಿಸುವಂತೆ ನಮ್ಮ ವಕೀಲರಿಗೆ ಸೂಚಿಸಿದ್ದೇನೆ. ರಾಜ್ಯದ ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ನಾವು ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ. ಮುಂದೆಯೂ ವಿರೋಧಿಸುತ್ತೇವೆ ಎಂದರು.

ಕಳೆದ ಮೂರು ವರ್ಷಗಳಿಂದ ಬರಗಾಲ ಇದ್ದುದರಿಂದ ದಸರಾವನ್ನು ಸರಳವಾಗಿ ಆಚರಿಸಬೇಕೆಂದುಕೊಂಡಿದ್ದೆವು. ಆದರೆ, ಆಗಸ್ಟ್‍ನಿಂದ ಉತ್ತಮ ಮಳೆಯಾಗಿ ಅಣೆಕಟ್ಟುಗಳು ತುಂಬಿವೆ. ಇದರಿಂದ ರೈತರ ಮೊಗದಲ್ಲಿ ಹರ್ಷ ಉಂಟಾಗಿದೆ. ಹಾಗಾಗಿ ಅದ್ಧೂರಿಯಾಗಿ ದಸರಾ ಆಚರಿಸಲಾಗುತ್ತಿದೆ ಎಂದರು. ದಸರಾ ಉದ್ಘಾಟನೆಗೆ ಸಾಹಿತಿ ನಿಸಾರ್ ಅಹಮ್ಮದ್ ಅವರ ಹೆಸರನ್ನು ಸೂಚಿಸಿದಾಗ ಎಲ್ಲರೂ ಒಕ್ಕೊರಲಿನಿಂದ ಸಹಮತ ವ್ಯಕ್ತಪಡಿಸಿದರು. ನಿಸಾರ್ ಅಹಮ್ಮದ್ ಅವರನ್ನು ಆಹ್ವಾನಿಸಿ ದಸರಾ ಉದ್ಘಾಟಿಸಿದ್ದರಿಂದ ನಾಡಿಗೆ ಗೌರವ ಬಂದಿದೆ. ನಿಸಾರ್ ಅಹಮ್ಮದ್ ಅವರು ಜಾತ್ಯತೀತ ನಿಲುವಿನಲ್ಲಿ ನಂಬಿಕೆ ಇಟ್ಟುಕೊಂಡವರು. ಸಮಾಜದ ಎಲ್ಲ ಜನರೊಂದಿಗೆ ಪ್ರೀತಿ-ವಿಶ್ವಾಸದಿಂದ ಬದುಕಬೇಕೆಂಬ ಬದ್ಧತೆಯುಳ್ಳವರು. ವೈಚಾರಿಕ ನೆಲೆಗಟ್ಟಿನ ಹಿನ್ನೆಲೆಯುಳ್ಳವರು, ವಿಚಾರವಂತರು, ಬರಹಗಾರರು ಆಗಿರುವುದರಿಂದ ಅವರನ್ನು ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಲಾಯಿತು.

ನನಗೆ ಮುಖ್ಯಮಂತ್ರಿಯಾಗಿ ಜಗದ್ವಿಖ್ಯಾತ ದಸರಾ ಉದ್ಘಾಟಿಸಲು ಐದು ವರ್ಷ ಕಾಲ ಅವಕಾಶ ಸಿಕ್ಕಿದೆ. ಮುಂದೆಯೂ ಸಿಗುವ ಆಶಾಭಾವನೆ ಇದೆ. ಈ ನಿಟ್ಟಿನಲ್ಲಿ ಜನರು ತಮ್ಮನ್ನು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು. ಜೂನ್ ವೇಳೆಗೆ ಮಳೆ ಆರಂಭವಾಗಬೇಕಿತ್ತು. ಆದರೆ, ಆಗಸ್ಟ್‍ನಲ್ಲಿ ಉತ್ತಮ ಮಳೆಯಾಗಿ ಅಣೆಕಟ್ಟುಗಳು ತುಂಬಿವೆ. ಕಬಿನಿ ಜಲಾಶಯ ತುಂಬಿರುವುದರಿಂದ ಇಂದೇ ಪೂಜೆ ಮಾಡಲು ಹೋಗುತ್ತಿದ್ದೇನೆ. ಕೆಆರ್‍ಎಸ್ ಅಣೆಕಟ್ಟು ಇನ್ನೂ ಭರ್ತಿಯಾಗಿಲ್ಲ. ಈ ಭಾಗದಲ್ಲಿ ಕಬ್ಬು ಬೆಳೆಯುವ ರೈತರಿಗೆ ನೀರು ಬಿಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಮುಖ್ಯಮಂತ್ರಿಗಳ ಮಾತು ಸ್ವಲ್ಪ ಒರಟಾಗಿರುತ್ತದೆ. ಆದರೆ, ಅವರ ಮನಸ್ಸು ಮೃದುವಾಗಿರುತ್ತದೆ. ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಮಾತನಾಡುತ್ತಾರೆ ಎಂದು ನನ್ನನ್ನು ಉಲ್ಲೇಖಿಸಿ ಸಂಸದ ಪ್ರತಾಪ್ ಸಿಂಹ ಹೇಳಿರುವುದು ಸತ್ಯ. ನಾನು ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳುವುದಿಲ್ಲ. ಎಲ್ಲವನ್ನೂ ಮಾತನಾಡುತ್ತೇನೆ. ಕೆಲವರು ತೋರಿಕೆಗೆ ಮೃದುವಾಗಿ ಮಾತನಾಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಉಮಾಶ್ರೀ, ತನ್ವೀರ್‍ಸೇಠ್, ಪ್ರಮೋದ್ ಮಧ್ವರಾಜ್ , ರುದ್ರಪ್ಪಮಾನಪ್ಪ ಲಮಾಣಿ, ಯು.ಟಿ.ಖಾದರ್, ಸಂಸದರಾದ ಪ್ರತಾಪ್‍ಸಿಂಹ, ಧೃವನಾರಾಯಣ್, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ನರೇಂದ್ರಸ್ವಾಮಿ, ಕಳಲೆ ಕೇಶವಮೂರ್ತಿ, ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ರಂದೀಪ್, ನಿಗಮ ಮಂಡಳಿ ಅಧ್ಯಕ್ಷರು ಸೇರಿದಂತೆ ಅನೇಕ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin