ಭಯೋತ್ಪಾದಕರ ಪಾಲಿಗೆ ಈಕೆ ಭದ್ರಕಾಳಿ ..!

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ಗುವಾಹತಿ, ಸೆ.21-ಭಯೋತ್ಪಾದಕರ ದಾಳಿ ಭಾರತದಲ್ಲಿ ದಿನನಿತ್ಯದ ಸುದ್ದಿ. ಉಗ್ರಗಾಮಿಗಳ ಆಕ್ರಮಣ ಮತ್ತು ಎನ್‍ಕೌಂಟರ್‍ಗಳು ಕಣಿವೆ ರಾಜ್ಯ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿಲ್ಲ. ಈಶಾನ್ಯ ಭಾರತದಲ್ಲೂ ಉಗ್ರವಾದ ಬಹು ಆಳವಾಗಿ ಬೇರುಬಿಟ್ಟಿವೆ. ಅಸ್ಸಾಂ ರಾಜ್ಯಕ್ಕೆ ದುಸ್ವಪ್ನದಂತೆ ಕಾಡುತ್ತಿರುವ ಬೋಡೋ ಉಗ್ರಗಾಮಿಗಳಿಗೇ ಸಿಂಹಸ್ವಪ್ನವಾಗಿರುವ ವೀರನಾರಿಯೊಬ್ಬರ ಶೌರ್ಯ-ಸಾಹಸ ಮೆಚ್ಚುವಂಥದ್ದು.  ಸಂಜುಕ್ತಾ ಪರಾಶರ್ ಭಾರತದ ಅತ್ಯಂತ ಧೈರ್ಯಶಾಲಿ ಐಪಿಎಸ್ ಅಧಿಕಾರಿ. ಅಸ್ಸಾಂನ ಪ್ರಥಮ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಗೆ ಇವರದು. ಬೋಡೊ ಉಗ್ರರ ಹುಟ್ಟಡಗಿಸುತ್ತಿರುವ ಇವರನ್ನು ಅಸ್ಸಾಂನ ಉಕ್ಕಿನ ಮಹಿಳೆ ಎಂದೇ ಗುರುತಿಸಿಕೊಂಡಿದ್ದಾರೆ. ಇವರು ಕೇವಲ 15 ತಿಂಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ 16 ಭಯೋತ್ಪಾದಕರನ್ನು ಕೊಂದು, 64 ಉಗ್ರರು ಮತ್ತು ಕುಖ್ಯಾತ ಕ್ರಿಮಿನಲ್‍ಗಳನ್ನು ಬಂಧಿಸಿದ್ದಾರೆ.

2006ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾದ ಸಂಜುಕ್ತಾ 85ನೇ ಅಖಿಲ ಭಾರತ ರ್ಯಾಂಕ್ ವಿಜೇತೆ. ಬಾಲ್ಯದಿಂದಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಅಭಿಲಾಷೆ ಹೊಂದಿದ್ದ ಇವರು ಐಪಿಎಸ್ ತರಬೇತಿ ನಂತರ 2008ರಲ್ಲಿ ಇವರು ಅಸ್ಸಾಂನ ಮಾಕುಮ್‍ಗೆ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆಗೆ ನಿಯೋಜನೆಗೊಂಡರು. ಇವರ ದಕ್ಷತೆ ಮತ್ತು ನಿರ್ಭೀತ ಕಾರ್ಯಗಳಿಂದಾಗಿ ಉದಾಲ್‍ಗುರಿಗೆ ಇವರನ್ನು ವರ್ಗಾವಣೆ ಮಾಡಲಾಯಿತು. ಆಗ ಆ ಪ್ರದೇಶದಲ್ಲಿ ಬೋಡೋ ಉಗ್ರರು ಮತ್ತು ಬಾಂಗ್ಲಾದೇಶಿ ವಲಸಿಗರ ನಡುವೆ ಭಯಾನಕ ಕೋಮುಗಲಭೆ ನಡೆಯುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ತಹಬಂದಿಗೆ ತಂದು ದುಷ್ಕರ್ಮಿಗಳನ್ನು ಬಂಧಿಸಿ ಶಾಂತಿ-ಸುವ್ಯವಸ್ಥೆ ನೆಲೆಗೊಳ್ಳುವಂತೆ ಮಾಡಿದರು.

ಸಂಜುಕ್ತಾ ಕೇವಲ 15 ತಿಂಗಳ ಕಾರ್ಯಾಚರಣೆಯಲ್ಲಿ 16 ಭಯೋತ್ಪಾದಕರನ್ನು ಕೊಂದು, 64 ಉಗ್ರರು ಮತ್ತು ಕುಖ್ಯಾತ ಕ್ರಿಮಿನಲ್‍ಗಳನ್ನು ಬಂಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಸಂಜುಕ್ತಾ ಎಕೆ-47 ರೈಫಲ್ ಹೊತ್ತು ಇವರ ಕಾರ್ಯಾಚರಣೆಗೆ ಇಳಿದರೆ ಉಗ್ರರ ಖತಂ ಖಚಿತ.  ಕಳೆದ ಕೆಲವು ವರ್ಷಗಳಿಂದ ಬೋಡೋ ಉಗ್ರರ ನಿಗ್ರಹ ಕಾರ್ಯಾಚರಣೆಗಳಿಗಾಗಿ ತಮ್ಮ ಸೇವೆಯನ್ನು ಮೀಸಲಿಟ್ಟಿದ್ದಾರೆ. ಇವರು ಉಗ್ರಗಾಮಿಗಳು ಮತ್ತು ಕುಖ್ಯಾತ ಕ್ರಿಮಿನಲ್‍ಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ದಾರೆ.

ಇವರ ಸೇವಾ ಮನೋಭಾವ ಅಪಾರ ಪ್ರಶಂಸೆಗೆ ಪಾತ್ರವಾಗಿದೆ. ಇವರು ಗೃಹಿಣಿ, ನಾಲ್ಕು ವರ್ಷದ ಮುದ್ದಾದ ಮಗುವಿದೆ. ಆದರೆ ಎರಡು ತಿಂಗಳಲ್ಲಿ ಒಮ್ಮೆ ಮಾತ್ರ ತಮ್ಮ ಕುಟುಂಬದೊಂದಿಗೆ ಕೆಲಕಾಲ ಕಳೆಯುತ್ತಾರೆ. ಇವರು ಜನಾನುರಾಗಿಯಾಗಿಯೂ ಗುರುಸಿಕೊಂಡಿದ್ದಾರೆ ಉಗ್ರರ ದಾಳಿಯಿಂದ ತಮ್ಮವರನ್ನು ಆಸ್ತಿ-ಪಾಸ್ತಿಗಳನ್ನು ಕಳೆದಕೊಂಡ ಜನರನ್ನು ಸಂತೈಸಿ ಸಹಾಯಹಸ್ತ ಚಾಚುತ್ತಾರೆ. ಪರಿಹಾರ ಶಿಬಿರಗಳಲ್ಲಿ ನೆರವು ನೀಡಿ ಮಾನವೀಯತೆ ತೋರಿದ್ದಾರೆ.
ಈ ವೀರನಾರಿಗೆ ಭಯೋತ್ಪಾದಕರ ಸಂಘಟನೆಗಳಿಂದ ಪ್ರಾಣ ಬೆದರಿಕೆ ಕರೆಗಳೂ ಬಂದಿವೆ. ತೀರಾ ಇತ್ತೀಚೆಗೆ ನ್ಯಾಷನಲ್ ಡೆಮೊಕ್ರಾಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‍ಡಿಎಫ್‍ಬಿ) ಇವರನ್ನು ಕೊಲ್ಲುವುದಾಗಿ ಧಮಕಿ ಹಾಕಿತ್ತು. ಆದರೆ ಈ ನಿರ್ಭೀತ ಅಧಿಕಾರಿಗೆ ಭಯವೆಂಬುದೇ ಗೊತ್ತಿಲ್ಲ. ಭಯೋತ್ಪಾದನೆ ವಿರುದ್ಧ ಸಮರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇಂಥ ವೀರಾಗ್ರಣಿಯರ ಅಗತ್ಯ ಇಂದು ನಮ್ಮ ದೇಶಕ್ಕೆ ಅಗತ್ಯವಿದೆ.

Facebook Comments

Sri Raghav

Admin