ಪರಾರಿಯಾಗಲು ಯತ್ನಿಸಿದ ಕಳ್ಳರ ಕಾಲಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Bang-police

ಬೆಂಗಳೂರು, ಸೆ.22-ಅಂಗಡಿಗಳ ರೋಲಿಂಗ್ ಶಟರ್ ಮೀಟಿ ಕಳ್ಳತನ ಮಾಡುತ್ತಿದ್ದ ಕಳ್ಳರು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ ಹಿಡಿದು ಮತ್ತೊಬ್ಬನನ್ನು ಬಂಧಿಸಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಚಿಕ್ಕಬಳ್ಳಾಪುರದ ಅಶೋಕ್(19), ಗೌರಿಬಿದನೂರು ಮೂಲದ ನಾರಾಯಣಸ್ವಾಮಿ (29)ಗೆ ಗುಂಡೇಟು ತಗುಲಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಅಂಗಡಿ ಹಾಗೂ ಕ್ಲಿನಿಕ್‍ಗಳ ರೋಲಿಂಗ್ ಶಟರ್‍ಗಳನ್ನು ಮೀಟಿ ಕಳ್ಳತನ ಮಾಡುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದಿತ್ತು. ಇನ್ಸ್‍ಪೆಕ್ಟರ್ ಪುನೀತ್‍ಕುಮಾರ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಅಣ್ಣಯ್ಯ ರಾತ್ರಿ ಗಸ್ತಿನಲ್ಲಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಿಪುರ ಕ್ರಾಸ್ ಬಳಿಯ ಮಾರ್ಡನ್ ಕ್ಲಿನಿಕ್‍ನ ರೋಲಿಂಗ್ ಶಟರ್ ಮೀಟಿದ್ದ ಮೂವರು ಕಳ್ಳರ ಪೈಕಿ ಇಬ್ಬರು ಒಳನುಗ್ಗಿದ್ದರು. ಒಬ್ಬಾತ ಅಂಗಡಿ ಹೊರಗೆ ನಿಂತಿದ್ದನು.  ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಕಳ್ಳರು ಪರಾರಿಯಾಗಲು ಯತ್ನಿಸಿದಾಗ ಶರಣಾಗುವಂತೆ ಸಬ್‍ಇನ್ಸ್‍ಪೆಕ್ಟರ್ ಅಣ್ಣಯ್ಯ ಹೇಳಿದ್ದಾರೆ. ಅದನ್ನು ಲೆಕ್ಕಿಸದೆ ಇವರ ಮೇಲೆಯೇ ಹಲ್ಲೆಗೆ ಯತ್ನಿಸಿ ಮೂವರು ಕಳ್ಳರು ಓಡಲು ಮುಂದಾದಾಗ ಸುಧಾಕರ್ ಎಂಬಾತನನ್ನು ಹಿಡಿದು ಇನ್ಸ್‍ಪೆಕ್ಟರ್ ಪುನೀತ್‍ಕುಮಾರ್ ಹಾಗೂ ಸಬ್‍ಇನ್ಸ್‍ಪೆಕ್ಟರ್ ಅಣ್ಣಯ್ಯ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ.

ಆದರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇವರಿಬ್ಬರ ಕಾಲಿಗೆ ಗುಂಡು ಹಾರಿಸಿ ಹಿಡಿದು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಅಶೋಕ್ ವಿರುದ್ಧ ಮೂರು ಪ್ರಕರಣಗಳಿದ್ದು, ಮತ್ತೊಬ್ಬ ಆರೋಪಿ ನಾರಾಯಣಸ್ವಾಮಿ ವಿರುದ್ದ ಉಡುಪಿ ಹಾಗೂ ಇನ್ನಿತರ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇವರು ಅಂಗಡಿ ಹಾಗೂ ಕ್ಲಿನಿಕ್‍ಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವುಗಳ ರೋಲಿಂಗ್ ಶಟರ್ ಮೀಟಿ ಹಣ ದೋಚುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಗಳು ಎಲ್ಲೆಲ್ಲಿ ಅಂಗಡಿ ಹಾಗೂ ಕ್ಲಿನಿಕ್‍ಗಳ ರೋಲಿಂಗ್ ಶಟರ್ ಮೀಟಿ ಕಳ್ಳತನ ಮಾಡಿದ್ದಾರೆ ಎಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Facebook Comments

Sri Raghav

Admin