ಮೈಸೂರು,ಮಂಡ್ಯ,ಚಾರಾ.ನಗರ,ಹಾಸನ, ಕೊಡಗು ಜಿಲ್ಲೆಗಳ ಬಡವರಿಗೆ ದಸರಾ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Bus-Dasara

ಮೈಸೂರು,ಸೆ.22- ಮಂಡ್ಯ-ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುಮಾರು 29 ತಾಲ್ಲೂಕುಗಳಲ್ಲಿನ ಆರ್ಥಿಕವಾಗಿ ದುರ್ಬಲರಾದ ಮಹಿಳೆಯರು ಮತ್ತು ವೃದ್ಧರಿಗೆ ದಸರಾ ವೀಕ್ಷಣೆಗೆ ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಖಾತೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.  ಇಲ್ಲಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಆಯೋಜಿಸಿರುವ ದಸರಾ ಕರಕುಶಲ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ-ವಿದೇಶಗಳಿಂದ ಪ್ರವಾಸಿಗರು ಬಂದು ದಸರಾ ವೀಕ್ಷಣೆ ಮಾಡುತ್ತಿದ್ದರೂ ನಮ್ಮ ಮೈಸೂರಿನ ಸುತ್ತಮುತ್ತಲ ಜಿಲ್ಲೆಗಳ ಬಡವರಿಗೆ ದಸರಾ ವೀಕ್ಷಣೆ ಸಾಧ್ಯವಾಗದಿರುವುದರಿಂದ ಅವರಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮೈಸೂರು-ಮಂಡ್ಯ ಜಿಲ್ಲೆಗಳ 18 ತಾಲ್ಲೂಕುಗಳು ಹಾಸನ-ಕೊಡಗು ಜಿಲ್ಲೆಗಳ 11 ತಾಲ್ಲೂಕುಗಳ ಮಹಿಳೆಯರು, ಬಡವರು, ವೃದ್ದರಿಗಾಗಿ 66 ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸೆ.22ರಿಂದ 26ರವರೆಗೆ ದಸರಾ ಉಪಸಮಿತಿ ವತಿಯಿಂದ ಈ ಸಾರಿಗೆ ವ್ಯವಸ್ಥೆ ಏರ್ಪಡಿಸಲಾಗಿದೆ.  ಸೆ.22ರಿಂದ 24 ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಸೆ.25ರಿಂದ 26 ಹಾಸನ, ಕೊಡಗು ಜಿಲ್ಲೆಗಳ ಪ್ರವಾಸಿಗರಿಗೆ ಈ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಫಲಾನುಭವಿಗಳು ಕೇವಲ 50 ರೂ. ನೀಡಿ ಪಾಸ್‍ಗಳನ್ನು ಪಡೆದು ಈ ಸೌಲಭ್ಯ ಉಪಯೋಗಿಸಿಕೊಳ್ಳಬಹುದು.

ಹೀಗೆ ಬರುವ ಪ್ರವಾಸಿಗರಿಗೆ ಚಾಮುಂಡಿ ಬೆಟ್ಟ , ಪ್ರಾಣಿ ಸಂಗ್ರಾಹಲಯ, ಮೈಸೂರು ಅರಮನೆ, ರೈತ ದಸರಾ ಮುಂತಾದವುಗಳ ದರ್ಶನ ಮಾಡಿಸಿ ಅವರನ್ನು ಮರಳಿ ಅವರವರ ಸ್ಥಳಗಳಿಗೆ ಕಳುಹಿಸಿಕೊಡಲಾಗುವುದು. ಇದಕ್ಕಾಗಿ ದಸರಾ ಉಪಸಮಿತಿ, ರಾಜ್ಯ ರಸ್ತೆ ಸಾರಿಗೆ ಸಮಿತಿಗೆ 21 ಲಕ್ಷ ರೂ. ಪಾವತಿಸಿದ್ದು , ಒಟ್ಟು 66 ಬಸ್‍ಗಳನ್ನು ಪಡೆಯಲಾಗಿದೆ ಎಂದು ತಿಳಿಸಿದರು.  ಈ ಸಂದರ್ಭ ಸಚಿವರೊಂದಿಗೆ ಶಾಸಕ ಎಂ.ಕೆ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin