ರಣಜಿಗೆ ಸರಣಿಗೆ ಸಿಗಲ್ವಂತೆ ಚಿನ್ನಸ್ವಾಮಿ ಕ್ರೀಡಾಂಗಣ

ಈ ಸುದ್ದಿಯನ್ನು ಶೇರ್ ಮಾಡಿ

Chinnaswamy

ಬೆಂಗಳೂರು, ಸೆ.22- ಕಳೆದ ಬಾರಿಯಂತೆ ಈ ಬಾರಿಯು ಕೂಡ ರಣಜಿ ಸರಣಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಸಿಗಲ್ವಂತೆ…! ದೇಶದಲ್ಲೇ ಅತಿ ವಿನೂತನ ಸಬ್‍ದ- ಏರ್ ಸಿಸ್ಟಮ್ ಅನ್ನು ಅಳವಡಿಸುವ ಸಲುವಾಗಿ ಕಳೆದ ಬಾರಿಯ ರಣಜಿ ಸರಣಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣ ಮುಕ್ತವಾಗಿತ್ತು. ಅದೇ ರೀತಿ ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕ್ರೀಡಾಂಗಣವನ್ನು ನವನವೀನವಾಗಿ ಸಜ್ಜುಗೊಳಿಸುವ ಕಾರ್ಯವನ್ನು ಕೈಗೊಳ್ಳಲು ಕೆಎಸ್‍ಸಿಎ ಮುಂದಾಗಿರುವುದರಿಂದ ಈ ಬಾರಿಯ ರಣಜಿ ಪಂದ್ಯಗಳು ಕೂಡ ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎಂದು ಕ್ರೀಡಾಂಗಣದ ವಿನಯ್ ಮೃತ್ಯುಂಜಯ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೆಪ್ಟೆಂಬರ್ 28 ರಂದು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 4ನೆ ಏಕದಿನ ಪಂದ್ಯ ಮುಗಿದ ನಂತರ ಕ್ರೀಡಾಂಗಣವನ್ನು ಸಜ್ಜುಗೊಳಿಸಲು ಯೋಚಿಸಿದ್ದೇವೆ, ಆದರೆ ಬರುವ ಋತುವಿನ ರಣಜಿ ಪಂದ್ಯಾವಳಿಗೆ ಚಿನ್ನಸ್ವಾಮಿ ಕ್ರೀಡಾಂಗಣವು ಉನ್ನತ ಮಟ್ಟದ ಪಿಚ್‍ನೊಂದಿಗೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದೆ ಎಂದು ಅವರು ತಿಳಿಸಿದರು. ಕಳೆದ ಬಾರಿ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಎರಡು ಪಂದ್ಯಗಳನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಈ ಬಾರಿಯ ರಣಜಿ ಪಂದ್ಯಗಳು ಹುಬ್ಬಳ್ಳಿ , ಬೆಳಗಾವಿ ಹಾಗೂ ಮೈಸೂರಿನಲ್ಲಿ ನಡೆಯಲಿದೆ. ಜೊತೆಗೆ ಶಿವಮೊಗ್ಗ ಮತ್ತು ಅಲೂರ್ ಕ್ರೀಡಾಂಗಣಗಳಲ್ಲೂ ಕೂಡ ಪಂದ್ಯಗಳನ್ನು ಆಯೋಜಿಸಲಾಗಿದೆ.

ಕರ್ನಾಟಕ ತಂಡವು ಮೈಸೂರಿನಲ್ಲಿ ಅಸ್ಸಾಂ ವಿರುದ್ಧ ಮೊದಲ ಪಂದ್ಯ ಸೆಣಸಲಿದ್ದು , ಹೈದ್ರಾಬಾದ್ ವಿರುದ್ಧ ನಡೆಯುವ ಎರಡನೇ ಪಂದ್ಯವು ಶಿವಮೊಗ್ಗ ಮತ್ತು ದೆಹಲಿ ವಿರುದ್ಧ ಜರುಗಲಿರುವ ಮೂರನೇ ಪಂದ್ಯ ಅಲೂರ್ ಅಥವಾ ಹುಬ್ಬಳ್ಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೃತ್ಯುಂಜಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಮಾರ್ಚ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲೇ ಪಿಚ್‍ನ ಗುಣಮಟ್ಟದ ಬಗ್ಗೆ ಮ್ಯಾಚ್ ರೆಫ್ರಿ ಕಗ್ರಿಸ್ ಬೋರ್ಡ್ ಅಸಮಾಧಾನ ವ್ಯಕ್ತಪಡಿಸಿದ್ದರು. ಬ್ಯಾಟಿಂಗ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2017ರ ಐಪಿಎಲ್‍ನಲ್ಲೂ 200 ಕ್ಕೂ ಹೆಚ್ಚು ರನ್‍ಗಳು ಹರಿದು ಬಂದಿರಲಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ತುಂಬಾ ಹಳೆಯದಾಗಿದ್ದು ಬರುವ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಉತ್ತಮ ಪಿಚ್ ಕಲ್ಪಿಸುವ ದೃಷ್ಟಿಯಿಂದ ಈಗ ಕ್ರೀಡಾಂಗಣದ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಮುಂದಿನ ವರ್ಷದಿಂದ ರಣಜಿ ಸರಣಿಗಳು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೆಎಸ್‍ಸಿಎ ಕಾರ್ಯದರ್ಶಿ ಸುಧಾಕರ್ ರಾವ್ ತಿಳಿಸಿದ್ದಾರೆ. ಪ್ರಸಕ್ತ ರಣಜಿ ಪಂದ್ಯವು ಅಕ್ಟೋಬರ್ 6 ರಿಂದ ಜರುಗಲಿದ್ದು ಎ ಗುಂಪಿನಲ್ಲಿರುವ ಕರ್ನಾಟಕ ತಂಡವು ಅಸ್ಸಾಂ, ಹೈದ್ರಾಬಾದ್, ಮಹಾರಾಷ್ಟ್ರ , ದೆಹಲಿ, ಉತ್ತರ ಪ್ರದೇಶ ಹಾಗೂ ರೈಲ್ವೇ ತಂಡಗಳ ಸವಾಲನ್ನು ಎದುರಿಸಲಿದೆ.

Facebook Comments

Sri Raghav

Admin