ಬಿಬಿಎಂಪಿ ಕಸ ವಿಲೇವಾರಿ : 688 ಕೋಟಿ ರೂ.ಅವ್ಯವಹಾರದಲ್ಲಿ ಸಿಎಂ, ಜಾರ್ಜ್ ಶಾಮೀಲು..!

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh--01

ಬೆಂಗಳೂರು, ಸೆ.23-ಬಿಬಿಎಂಪಿ ಕಸ ವಿಲೇವಾರಿಯಲ್ಲಿ ಸುಮಾರು 688 ಕೋಟಿ ರೂ.ಗಳಷ್ಟು ಅವ್ಯವಹಾರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ವಕ್ತಾರ, ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಈ ಕುರಿತು ಲೋಕಾಯುಕ್ತ, ಎಸಿಬಿ ಮತ್ತು ಬಿಎಂಟಿಎಫ್‍ನಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಸವಿಲೇವಾರಿಗೆ ಪ್ರಸ್ತುತ 1067ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದ್ದು, 2016ರ ಮಾರ್ಚ್‍ವರೆಗೂ ಕೇವಲ 385 ಕೋಟಿ ರೂ. ವ್ಯಯಿಸಲಾಗುತ್ತಿತ್ತು. ಕಸ ವಿಲೇವಾರಿಗೆ ಗುತ್ತಿಗೆದಾರರಿಗೆ ಏಕಾಏಕಿ 680 ಕೋಟಿ ರೂ.ಗಳ ಹೆಚ್ಚಳವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರ ಅಭಿವೃದ್ಧಿ ಸಚಿವ ಜಾರ್ಜ್ ಅವರಲ್ಲದೆ, ವಂಚಕ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದರಲ್ಲಿ ಪಾಲುದಾರರಾಗಿದ್ದು, ಅವರ ವಿರುದ್ಧವೂ ದೂರು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ವಾರ್ಷಿಕವಾಗಿ 236 ಕೋಟಿ ರೂ.ಗಳಷ್ಟು ಹಣ ಪಡೆಯುತ್ತಿದ್ದ ಗುತ್ತಿಗೆದಾರರಿಂದ ಪ್ರತಿತಿಂಗಳು ಕೋಟ್ಯಂತರ ರೂ.ಗಳನ್ನು ಕಮೀಷನ್ ರೂಪದಲ್ಲಿ ಪಡೆದುಕೊಳ್ಳುವ ದುರುದ್ದೇಶದಿಂದ 925 ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಾರ್ವಜನಿಕರ ತೆರಿಗೆ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲು ಅನುವು ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.

ತ್ಯಾಜ್ಯ ವಿಲೇವಾರಿಗೆ ಇಲಾಖೆ ವತಿಯಿಂದ ನಿರ್ವಹಣೆ ಹೆಸರಿನಲ್ಲಿ ಹಿಂದಿನ ಮೊತ್ತಕ್ಕಿಂತಲೂ 3 ರಿಂದ 9 ಪಟ್ಟು ಹೆಚ್ಚು ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗುತ್ತಿದೆ ಎಂದು ಹೇಳಿದ ಅವರು, ವಾರ್ಡ್ 198ರಲ್ಲಿ ಕಸ ವಿಲೇವಾರಿ ಕಾರ್ಯಕ್ಕೆ ಪ್ರತಿ ತಿಂಗಳು 11.81 ಲಕ್ಷ ರೂ. ಪಾವತಿಸಲಾಗುತ್ತಿತ್ತು. ಈ ಮೊತ್ತ ದಿಢೀರ್ ಎಂದು 1.04 ಕೋಟಿಗೆ ಏರಿಕೆಯಾಗಿದೆ. ಇದು ಒಂದು ವಾರ್ಡ್ ಉದಾಹರಣೆಯಾಗಿದೆ. ಎಲ್ಲಾ ವಾರ್ಡ್‍ಗಳಲ್ಲೂ ಇದೇ ರೀತಿಯಾಗಿದ್ದು, ಕಸದ ಮಾಫಿಯಾದಿಂದ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಅವರು ಹೇಳಿದರು.

ಪಾಲಿಕೆಯ ಕಸವಿಲೇವಾರಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ನೀಡುತ್ತಿರುವ ದಾಖಲೆಗಳ ಪ್ರಕಾರ 31 ಸಾವಿರ ಗುತ್ತಿಗೆ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, 887ಕಾಂಪ್ಯಾಕ್ಟರ್‍ಗಳು, 2794 ಟಿಪ್ಪರ್ ಆಟೋ ಕಸವಿಲೇವಾರಿ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೆ, ಪಾಲಿಕೆಯ 2734 ಮಂದಿ ಖಾಯಂ ಪೌರಕಾರ್ಮಿಕರು, 232 ಮಂದಿ ಹಿರಿಯ ಆರೋಗ್ಯ ಪರಿವೀಕ್ಷಕರು, 127 ಮೇಸ್ತ್ರಿಗಳು, 77 ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, 162 ಕ್ಲೀನರ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ವೇತನ ರೂಪದಲ್ಲಿ 83 ಕೋಟಿ ರೂ. ಹಣ ಪಾವತಿಸಲಾಗುತ್ತಿದೆ.  ಪಾಲಿಕೆ ತನ್ನ ವಾರ್ಷಿಕ ಆದಾಯ ಶೇ.55 ರಷ್ಟು ಹಣವನ್ನು ಕಸವಿಲೇವಾರಿಕಾರ್ಯಕ್ಕೆ ಖರ್ಚು ಮಾಡುವ ಪರಿಸ್ಥಿತಿ ತಲುಪಿದೆ ಎಂದು ಅವರು ಹೇಳಿದರು.  31 ಸಾವಿರ ಗುತ್ತಿಗೆ ಪೌರಕಾರ್ಮಿಕರ ಪೈಕಿ ಕೇವಲ 11,500 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಫಾಯಿ ಕರ್ಮಚಾರಿ ಆಯೋಗ ವರದಿ ನೀಡಿದ್ದು, 6600 ಮಂದಿ ನಕಲಿ ಪೌರಕಾರ್ಮಿಕರ ಹೆಸರಲ್ಲಿ ವೇತನ ವಂಚನೆಯಾಗುತ್ತಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಕಳೆದ ಸಾಲಿನ ಡಿಸೆಂಬರ್‍ನಲ್ಲಿ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ರಮೇಶ್ ಉಲ್ಲೇಖಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಕಾಂಗ್ರೆಸ್‍ಪಕ್ಷದ ಪ್ರಭಾವಿ ಮುಖಂಡರು ಗಾರ್ಬೇಜ್ ಮಾಫಿಯಾದ ಕಪಿಮುಷ್ಟಿಗೆ ಸಿಲುಕಿದ್ದಾರೆ. ಕಸ ವಿಲೇವಾರಿ ಗುತ್ತಿಗೆದಾರರಿಂದ ಪ್ರತಿತಿಂಗಳು ಹತ್ತಾರು ಕೋಟಿ ರೂ. ಲಂಚ ಪಡೆಯುತ್ತಿದ್ದಾರೆ. ಪಾಲಿಕೆಯ ಎಸ್‍ಡಬ್ಲ್ಯುಎಂ ಇಲಾಖೆ ಅಧಿಕಾರಿಗಳ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಂಡಿರುವ ಕೆಲ ಎನ್‍ಜಿಒಗಳು ಕೂಡ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿವೆ. ಪ್ರಸ್ತುತ ವಾರ್ಷಿಕ ಪಾಲಿಕೆ ಆದಾಯ 2 ಸಾವಿರ ಕೋಟಿ ರೂ.ಗಳಾದರೆ ವಾರ್ಷಿಕ ಖರ್ಚು-ವೆಚ್ಚ 2800 ಕೋಟಿರೂ.ಗಳಿದೆ. ಬಿಬಿಎಂಪಿ ಆರ್ಥಿಕ ದಿವಾಳಿಯಾದ ಸಂಸ್ಥೆ ಎಂದು ಘೋಷಿಸುವ ದಿನಗಳು ಹತ್ತಿರದಲ್ಲಿವೆ ಎಂದು ರಮೇಶ್ ಗಂಭೀರ ಆರೋಪ ಮಾಡಿದರು.

ಕಸದ ಬೃಹತ್ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಭಾರೀ ಅವ್ಯವಹಾರಕ್ಕೆ ಕಾರಣವಾಗಿರುವ 48 ಕಸವಿಲೇವಾರಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲಾಖೆ ವತಿಯಿಂದ ನಿರ್ವಹಣೆ ಮಾಡುತ್ತಿರುವ ಈ ಪದ್ಧತಿ ಕೈಬಿಟ್ಟು ಜಾಗತಿಕ ಟೆಂಡರ್ ಮೂಲಕ ಒಪ್ಪಿಗೆ ನೀಡಬೇಕು. ಸಾರ್ವಜನಿಕ ಸೋರಿಕೆ ಹಣವನ್ನು ತಡೆಗಟ್ಟಬೇಕೆಂದು ಆಗ್ರಹಿಸಿದ್ದಾರೆ.

Facebook Comments

Sri Raghav

Admin