ಉದ್ಯೋಗದಾಸೆ ನೀಡಿ ವಂಚಿಸುವ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಕ್ಕೆ ರಾಮಲಿಂಗಾರೆಡ್ಡಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01

ಬೆಂಗಳೂರು, ಸೆ.24- ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ ಖಾಸಗಿ ಏಜೆನ್ಸಿಯೊಂದು ಉಡುಪಿಯ ಜೆಸಿಂತಾ ಅವರನ್ನು ಶ್ರೀಮಂತರಿಗೆ ದುಬಾರಿ ಬೆಲೆಗೆ ಮಾರಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಇಂತಹ ಏಜೆನ್ಸಿಗಳ ಮೇಲೆ ನಿಗಾವಹಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ. ಕೆಲಸದ ಆಮಿಷ ಹೊಡ್ಡಿ ಜೆಸಿಂತಾ ಅವರನ್ನು ವಿದೇಶಕ್ಕೆ ಮಾರಾಟ ಮಾಡಿದ ಪ್ರಕರಣ ಬಹಿರಂಗವಾಗುತ್ತಿದ್ದಂತೆ ರಾಮಲಿಂಗಾರೆಡ್ಡಿ ಅವರು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಆದೇಶಿಸಿದ್ದಾರೆ. ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ವಂಚಿಸುವ ಖಾಸಗಿ ಏಜೆನ್ಸಿಗಳ ಮೇಲೆ ಹದ್ದಿನ ಕಣ್ಣಿಟ್ಟು, ಅಂತಹ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣ ಅವುಗಳನ್ನೇ ಇದಕ್ಕೆ ಹೊಣೆಗಾರರನ್ನಾಗಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಉಡುಪಿಯ ಜೆಸಿಂತಾ(46) ಎಂಬ ಮಹಿಳೆ ಕ್ಷಯರೋಗದಿಂದ ಬಳಲುತ್ತಿದ್ದ ತನ್ನ ಗಂಡನನ್ನು ಕಳೆದುಕೊಂಡಿದ್ದು, ಈ ಸಂದರ್ಭದಲ್ಲಿ ತನ್ನ ಮೂರು ಮಕ್ಕಳನ್ನು ಸಲಹುವ ಸಲುವಾಗಿ ಉದ್ಯೋಗ ಅರಸತೊಡಗಿದರು. ಈ ಸಂದರ್ಭದಲ್ಲಿ ಅವರ ಕಣ್ಣಿಗೆ ಬಿದ್ದದ್ದು ಮುಂಬೈನ ಟಿಯೋ ಟ್ರ್ಯಾಕ್ ಟ್ರಾವಲ್ ಏಜೆನ್ಸಿಯ ಜಾಹೀರಾತು. ಕತ್ತಾರ್‍ನಲ್ಲಿ ಮಾಸಿಕ 25ಸಾವಿರ ರೂ.ಗಳ ವೇತನದ ವಿವರವುಳ್ಳ ಈ ಜಾಹೀರಾತನ್ನು ನಂಬಿ ಜೆಸಿಂತಾ ಅವರು ಅರ್ಜಿ ಸಲ್ಲಿಸಿದ್ದರು.

ಆದರೆ, ಈ ಏಜೆನ್ಸಿ ಜೆಸಿಂತಾ ಅವರನ್ನು ಸೌದಿಅರೆಬಿಯಾದ ಅಬ್ದುಲ್ ಹಾಲ್ ಮುತ್ತೈರಿ ಎಂಬ ಶ್ರೀಮಂತನಿಗೆ ಹರಾಜಿನಲ್ಲಿ 5ಲಕ್ಷ ರೂ.ಗಳನಿಗೆ ಮಾರಿತ್ತು. ಹೀಗೆ ಖಾಸಗಿ ಸಂಸ್ಥೆ ತನ್ನನ್ನು 5 ಲಕ್ಷ ರೂ.ಗಳಿಗೆ ಮಾರಿದೆ ಎಂಬ ಅರಿವಿಲ್ಲದೆ ಜೆಸಿಂತ ಸೌದಿಅರೆಬಿಯಾಕ್ಕೆ ತೆರಳಿದ್ದರು. ಆದರೆ, ಅವರಿಗೆ ಸಿಗುತ್ತಿದ್ದದ್ದು ಕೇವಲ 16ಸಾವಿರ ರೂ. ವೇತನ. ಅದೂ ಸಾಲದು ಎಂಬಂತೆ 5 ಲಕ್ಷಕ್ಕೆ ಖರೀದಿಸಿದ್ದ ವ್ಯಕ್ತಿ ಹೊತ್ತು ಹೊತ್ತಿಗೆ ಸರಿಯಾಗಿ ಊಟ, ತಿಂಡಿ ನೀಡದೆ, ಹಗಲು-ರಾತ್ರಿ ಹಿಂಸೆ ನೀಡುತ್ತಿದ್ದ. ಇದರಿಂದಾಗಿ ಅನೇಕ ಬಾರಿ ಜೆಸಿಂತಾ ಪ್ರಜ್ಞೆ ತಪ್ಪಿ ಬೀಳುವ ಸ್ಥಿತಿ ಸೃಷ್ಟಿಯಾಗಿದ್ದಲ್ಲದೆ ರೋಗಿಯಾಗಿ ನರಳುವಂತಾಯಿತು.
ಆದರೆ, 9 ತಿಂಗಳ ಹಿಂದೆ ಏನೇನೋ ಪ್ರಯತ್ನ ಮಾಡಿ ಊರಿನಲ್ಲಿರುವ ತನ್ನ ಮಕ್ಕಳಿಗೆ ದೂರವಾಣಿ ಕರೆ ಮಾಡಿ ತಮ್ಮ ದಯನೀಯ ಪರಿಸ್ಥಿತಿಯ ಕುರಿತು ಅವರು ವಿವರಿಸಿದಾಗ ಮಧ್ಯಪ್ರವೇಶಿಸಿದ್ದು ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶಾನಭಾಗ್.

ಅವರ ಸತತ 9 ತಿಂಗಳ ಪ್ರಯತ್ನ ಕೇಂದ್ರ ಹಾಗೂ ಗಲ್ಫ್ ರಾಷ್ಟ್ರಗಳ ಕನ್ನಡ ಸಂಘಟನೆಗಳ ನೆರವಿನಿಂದ ಜೆಸಿಂತಾ ಅವರನ್ನು ರಕ್ಷಿಸಲಾಯಿತಲ್ಲದೆ, ಅವರು ತವರಿಗೆ ಹಿಂದಿರುಗುವಂತಾಯಿತು. ಕಾರ್ಕಳ ತಾಲ್ಲೂಕಿನ ಮುದರಂಗಡಿ ಗ್ರಾಮದ ನಿವಾಸಿ ಆದ ಇವರು, ಈಗ ಅನಾರೋಗ್ಯದಿಂದ ಉಡುಪಿಯ ಬಾಳಿಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ಷಯ, ರಕ್ತ ಹೀನತೆಯಿಂದ ಬಳಲಿ ಮಾನಸಿ ಹಾಗೂ ದೈಹಿಕ ಖಿನ್ನತೆಯಿಂದ ನರಳುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

Facebook Comments

Sri Raghav

Admin