ರೋಹಿಂಗ್ಯ ಅಕ್ರಮ ವಲಸಿಗರ ಪತ್ತೆಗಾಗಿ ಬಿಎಸ್‍ಎಫ್ ಹೊಸ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

BSF--01

ಕೊಲ್ಕತ್ತಾ, ಸೆ.24-ಮ್ಯಾನ್ಮಾರ್‍ನಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರನ್ನು ಪತ್ತೆ ಮಾಡಲು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಾಧ್ಯವಾಗುವ ಎಲ್ಲ ತಂತ್ರಗಳನ್ನು ಅನುಸರಿಸುತ್ತಿದೆ. ವಿಶೇಷವಾಗಿ ಪಶ್ವಿಮಬಂಗಾಳದ 22 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ರೋಹಿಂಗ್ಯಾ ಅಕ್ರಮ ವಲಸಿಗರ ಮೇಲೆ ನಿಗಾ ಇರಿಸಿರುವ ಬಿಎಸ್‍ಎಫ್ ಸ್ಥಳೀಯ ಭಾಷಾ ಕೌಶಲ್ಯಗಳು ಹಾಗೂ ಇಂಟೆಲ್ ತಂತ್ರಜ್ಞಾನದ ಮೊರೆ ಹೋಗಿದೆ.
ಮ್ಯಾನ್ಮಾರ್‍ನ ರಖೈನ್ ಜಿಲ್ಲೆಯಲ್ಲಿ ಭುಗಿಲೆದ್ದ ವ್ಯಾಪಕ ಹಿಂಸಾಚಾರದಿಂದ ಬಾಂಗ್ಲಾದೇಶ ಮತ್ತು ಭಾರತದತ್ತ ರೋಹಿಂಗ್ಯಾ ಅಲ್ಪಸಂಖ್ಯಾತರು ಈ ಎರಡೂ ದೇಶಗಳಿಗೂ ತಲೆ ನೋವು ತಂದಿದ್ದಾರೆ. ಇವರು ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಭಾರತ-ಮ್ಯಾನ್ಯಾರ್ ಗಡಿಯಲ್ಲಿ ಬಿಗಿ ಪಹರೆ ಹಾಕಲಾಗಿದೆ.

ಬಹುತೇಕ ಪ್ರಕರಣಗಳಲ್ಲಿ ಭಾರತದತ್ತ ಹೆಚ್ಚಾಗಿ ನುಸುಳುವ ರೋಹಿಂಗ್ಯಾಗಳು ತಮ್ಮನ್ನು ಬಿಎಸ್‍ಎಫ್ ಯೋಧರ ತಡೆದರೆ ತಮ್ಮನ್ನು ಬಾಂಗ್ಲಾದೇಶದವರು ಅಥವಾ ಬಂಗಾಳಿಗಳು ಎಂದು ಸುಳ್ಳು ಹೇಳಿ ಗಡಿ ಪ್ರದೇಶ ದಾಟುತ್ತಾರೆ. ಅವರ ಕಳ್ಳಾಟವನ್ನು ಪತ್ತೆ ಮಾಡಲು ಬಿಎಸ್‍ಎಫ್ ಯೋಧರು ಬಂಗಾಳಿ ಭಾಷೆಯಲ್ಲಿ ಅವರನ್ನು ಪ್ರಶ್ನಿಸುವ ತಂತ್ರ ಅನುಸರಿಸುತ್ತಿದ್ದಾರೆ.  ಒಬ್ಬ ವ್ಯಕ್ತಿ ಗಡಿ ಪ್ರದೇಶವನ್ನು ಅಕ್ರಮವಾಗಿ ದಾಟಿ ಬಂಧಿತನಾದರೆ ಆತನನ್ನು ಯೋಧರು ಪ್ರಶ್ನಿಸುತ್ತಾರೆ. ಈ ಸಂದರ್ಭದಲ್ಲಿ ಅವರು ತಾವು ಬಾಂಗ್ಲಾದವರು ಎಂದು ಹೇಳಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ ರೋಹಿಂಗ್ಯಾಗಳಿಗೆ ಬಂಗಾಲಿ ಭಾಷೆ ಬರುವುದಿಲ್ಲ. ಹೀಗಾಗಿ ಅವರನ್ನು ಬಂಧಿಸುವದು ಸುಲಭ ಎನ್ನುತ್ತಾರೆ ಬಿಎಸ್‍ಎಫ್ ಐಜಿ (ದಕ್ಷಿಣ ಬಂಗಾಲ್) ಪಿ.ಎಸ್.ಆರ್. ಆಂಜನೇಯಲು.

ಪಶ್ಚಿಮಬಂಗಾಳದ ನಾರ್ತ್ 24 ಪರಗಣ, ಮುರ್ಷಿದಾಬಾದ್ ಮತ್ತು ಕೃಷ್ಣನಗರ್ ಜಿಲ್ಲೆಗಳ 22 ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಯಾದ ಪಹರೆ ಹಾಕಲಾಗಿದೆ. ಅಕ್ರಮ ವಲಸೆ ತಪ್ಪಿಸಲು ಇಂಟೆಲ್ ತಂತ್ರಜ್ಞಾನ ನೆರವು ಪಡೆಯಲಾಗಿದೆ. ಈವರೆಗೆ 175ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.  ರೋಹಿಂಗ್ಯ ಮುಸ್ಲಿಮರು ನಿರಾಶ್ರಿತರಲ್ಲ ಅವರು ಅಕ್ರಮ ವಲಸಿಗರು. ಅವರನ್ನು ದೇಶದಿಂದ ಮ್ಯಾನ್ಮಾರ್‍ಗೆ ವಾಪಸ್ ಕಳುಹಿಸುವುದು ಸೂಕ್ತ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಳೆದ ಮೂರು ದಿನಗಳ ಹಿಂದೆ ತಿಳಿಸಿದ್ದರು.

Facebook Comments

Sri Raghav

Admin