ಪದ್ಮಾವತಿ ನರಸಿಂಹಮೂರ್ತಿಗೆ ಬಿಬಿಎಂಪಿ ಉಪಮೇಯರ್ ಪಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

Padmavati-Narasim

ಬೆಂಗಳೂರು, ಸೆ.25- ರಾಜಗೋಪಾಲನಗರ ವಾರ್ಡ್‍ನ ಜೆಡಿಎಸ್ ಸದಸ್ಯೆ ಪದ್ಮಾವತಿ ನರಸಿಂಹಮೂರ್ತಿ ಬಿಬಿಎಂಪಿಯ ಮುಂದಿನ ಉಪಮೇಯರ್ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತಪಟ್ಟಿದೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಸ್ಥಾನ ಒಕ್ಕಲಿಗ ಸಮುದಾಯದ ಮಹಿಳೆಗೆ ಒಲಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ನಿನ್ನೆ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಕ್ಕಲಿಗ ಸಮುದಾಯದ ಅಭ್ಯರ್ಥಿ ಬದಲಿಗೆ ಹಿಂದುಳಿದ ವರ್ಗಕ್ಕೆ ಸೇರಿದ ಪದ್ಮಾವತಿ ಅವರನ್ನೇ ಉಪಮೇಯರ್ ಸ್ಥಾನಕ್ಕೆ ತರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹಾಲಿ ಲೆಕ್ಕಪತ್ರ ಸ್ಥಾಯಿಸಮಿತಿ ಅಧ್ಯಕ್ಷೆ ನೇತ್ರಾನಾರಾಯಣ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಗುಂಪಿನ ನಾಯಕಿ ರಮಿಳಾ ಉಮಾಶಂಕರ್ ಅವರಲ್ಲಿ ಒಬ್ಬರು ಉಪಮೇಯರ್ ಸ್ಥಾನ ಅಲಂಕರಿಸುವ ಸಾಧ್ಯತೆ ಇತ್ತು. ಆದರೆ, ಪದ್ಮಾವತಿ ಅವರ ಹೆಸರನ್ನು ಸ್ವತಃ ದೇವೇಗೌಡರೇ ಸೂಚಿಸಿರುವುದರಿಂದ ಉಪಮೇಯರ್ ಆಗಿ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗುವುದು ಬಹುತೇಕ ಖಚಿತಪಟ್ಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮುಂದುವರೆಸುವ ಕುರಿತಂತೆ ಕುಪೇಂದ್ರರೆಡ್ಡಿ ಅವರ ನಿವಾಸದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ನಡೆಸಿದ ಸಭೆ ಯಶಸ್ವಿಯಾದ ಬೆನ್ನಲ್ಲೇ ಶಾಸಕರಾದ ಕೆ.ಗೋಪಾಲಯ್ಯ, ಟಿ.ಎ.ಶರವಣ ಮತ್ತಿತರರು ದೇವೇಗೌಡರ ನಿವಾಸಕ್ಕೆ ತೆರಳಿ ಮುಂದಿನ ಕಾರ್ಯತಂತ್ರ ಕುರಿತಂತೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಸದಸ್ಯರನ್ನು ಹೊರತುಪಡಿಸಿ ಹಿಂದುಳಿದ ವರ್ಗದ ಪದ್ಮಾವತಿ ಅವರನ್ನೇ ಉಪಮೇಯರಾಗಿ ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಇದೇ 28ರಂದು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ರಾಜಗೋಪಾಲನಗರ ವಾರ್ಡ್‍ನ ಪದ್ಮಾವತಿ ನರಸಿಂಹಮೂರ್ತಿ ನಾಮಪತ್ರ ಸಲ್ಲಿಸಲಿದ್ದಾರೆ.

Facebook Comments

Sri Raghav

Admin