ಬೆಂಗಳೂರು ಅಭಿವೃದ್ದಿಗೆ ಹಗಲು-ರಾತ್ರಿ ಶ್ರಮಿಸಿದ್ದೇನೆ : ಮೇಯರ್ ಪದ್ಮಾವತಿ

ಈ ಸುದ್ದಿಯನ್ನು ಶೇರ್ ಮಾಡಿ

Padmavati--01

ಬೆಂಗಳೂರು,ಸೆ.25 – ನನ್ನ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರು ಅಭಿವೃದ್ದಿಗೆ ಹಗಲು-ರಾತ್ರಿ ಶ್ರಮಿಸಿದ್ದೇನೆ ಎಂದ ಮೇಯರ್ ಜಿ.ಪದ್ಮಾವತಿ ತಿಳಿಸಿದರು. ಸೆ.28ಕ್ಕೆ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ಕೈಗೊಂಡ ಜನಪ್ರಿಯ ಯೋಜನೆಗಳನ್ನೊಳಗೊಂಡ 100 ಪುಟಗಳುಳ್ಳ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

32000 ಕಾರ್ಮಿಕರಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ, ನಾಡಪ್ರಭು ಕೆಂಪೇಗೌಡ ಸೊಸೆ ಲಕ್ಷ್ಮಿದೇವಿ ಕಂಚಿನ ಪ್ರತಿಮೆ ನಿರ್ಮಾಣ, ಕಲ್ಯಾಣ ಕಾರ್ಯಕ್ರಮದಡಿ 3402 ಅರ್ಹ ಫಲಾನುಭವಿಗಳಿಗೆ 75 ಕೋಟಿ ವೆಚ್ಚದಲ್ಲಿ ವಿವಿಧ ಸವಲತ್ತು ವಿತರಣೆ, ಪೌರಕಾರ್ಮಿಕರ ವೇತನ 17 ಸಾವಿರಕ್ಕೆ ಹೆಚ್ಚಳ ಸೇರಿದಂತೆ ವಿವಿಧ ಜನಪ್ರತಿಯ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು. ನನ್ನ ಅವಧಿಯಲ್ಲಿ ಪಾಲಿಕೆ ಕಚೇರಿಯಲ್ಲಿ ಅನಿರೀಕ್ಷಿತ ತಪಾಸಣೆ ಕೈಗೊಂಡು ನೌಕರರು ಹಾಗೂ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಆಡಳಿತದಲ್ಲಿ ಪಾರದರ್ಶಕತೆ ತರಲು ಇ-ಆಡಳಿತಕ್ಕೆ ಹೆಚ್ಚಿನ ಒತ್ತು,ಕಸ ಸಮಸ್ಯೆಯನ್ನು ಪರಿಹರಿಸಲು ಮೈಕ್ರೋ ಪ್ಲಾನ್, ಕಾಂಪೋಸ್ಟ್ ಸಂತೆಗೆ ಒತ್ತು ನೀಡಿ ಶೇ.50ರಷ್ಟು ಕಸ ವಿಂಗಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 12 ಸಾವಿರ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದೆ. ಇಡೀ ಪಾಲಿಕೆಯ ಆಡಳಿತ ಯಂತ್ರ ಗಣಕಿಕೃತಗೊಳಿಸಲು ಚಾಲನೆ ನೀಡಲಾಗಿದೆ ಎಂದರು.  ಪೌರಕಾರ್ಮಿಕರಿಗೆ 14 ಸಾವಿರ ರೂ. ಮಾಸಿಕ ವೇತನ, 4 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಪ್ರಕ್ರಿಯೆ ಚಾಲನೆಯಲ್ಲಿದೆ. ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 3500 ಮೆಟ್ರಿಕ್ ಟನ್ ಕಸವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ನಿಷೇಧ, ಒಣ-ಹಸಿ ಕಸ ಬೇರ್ಪಸಲು ಸಾರ್ವಜನಿಕರಲ್ಲಿ ಅರಿವು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜನರಿಕ್ ಔಷಧಿ ಮಳಿಗೆಗಳನ್ನು ರಾಜಾಜಿನಗರದಲ್ಲಿ ತೆರೆಯಲಾಗಿದೆ ಎಂದರು.

ನಗರದ 1,500ಕ್ಕೂ ರೌಡಿಗಳಿಗೆ ಮೇಯರ್ ವೈದ್ಯಕೀಯ ಅನುದಾನದಡಿ ಧನಸಹಾಯ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. 198 ವಾರ್ಡ್‍ಗಳಲ್ಲಿ ಏಕಗವಾಕ್ಷಿ ಯೋಜನೆಯಡಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ.
ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದು , ಅವುಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಿತ್ತೂರುರಾಣಿ ಮೇಲ್ಸೇತುವೆ, ಮಾಗಡಿ ರಸ್ತೆಯ ಹೌಸಿಂಗ್ ಬಳಿ ಇರುವ ಅಂಡರ್‍ಪಾಸ್, ಓರಿಯನ್ ಅಂಡರ್‍ಪಾಸ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಓಕಳಿಪುರಂ ವೃತ್ತದಲ್ಲಿ 274 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ 8 ಪಥದ ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಗತಿಗೆ ಒತ್ತು ನೀಡಿದ್ದೇವೆ. ಅದೇ ರೀತಿ ನೃಪುತುಂಗ ರಸ್ತೆ ವೈಟ್ ಟೆಪಿಂಗ್, ವಾರ್ ಮೆಮೊರಿಯಲ್ ರಸ್ತೆ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳನ್ನು ವೈಟ್ ಟೆಪಿಂಗ್ ಮಾಡಲಾಗಿದೆ ಎಂದು ತಿಳಿಸಿದರು.
500 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಹೂಳು ತೆಗೆಸಲಾಗಿದೆ. ತಡೆಗಳ ನಿರ್ಮಾಣ, ಇದುವರೆಗೂ ವಿವಿಧ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಒಟ್ಟು 408 ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದು ನನ್ನ ಅವಧಿಯಲ್ಲಿ 142 ಕಿ.ಮೀ ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಕೆ.ಆರ್.ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ಸ್ವಚ್ಛ ಮಾಡಲಾಗಿದೆ. 55 ಕೋಟಿ ರೂ. ಜಾಹಿರಾತು ತೆರಿಗೆ ವಸೂಲಿ, ಆಸ್ತಿ ತೆರಿಗೆ ವಸೂಲಿಗೆ ಹೆಚ್ಚಿನ ಕ್ರಮ, ಗ್ರೀನ್ ಆಪ್ ಜಾರಿಗೆ ತಂದು 10 ಲಕ್ಷ ಗಿಡ ನೆಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 198 ವಾರ್ಡ್‍ಗಳ ಪೈಕಿ 101 ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ರುದ್ರಭೂಮಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಹೆಚ್ಚಿಸಲಾಗಿದೆ. ನನ್ನ ಅವಧಿಯಲ್ಲಿ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಹಾಗೂ ಡೈನಾಮಿಕ್ ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿವರಿಸಿದರು.  ರಾಜ್ಯ ಸರ್ಕಾರ ಹಾಗೂ ಪಕ್ಷಕ್ಕೆ ನಿಷ್ಠವಾಗಿ ಕೆಲಸ ಮಾಡಿರುವುದು ತೃಪ್ತಿ ತಂದಿದೆ. ರಾಜ್ಯ ಸರ್ಕಾರ ನೀಡಿರುವ 7,300 ಕೋಟಿ ರೂ. ಅನುದಾನ ತ್ವರಿತವಾಗಿ ನಡೆಯಲು ಕಮಿಟಿ ರಚನೆ ಮಾಡಿದ್ದೇವೆ. ರಾಜಕಾಲುವೆ ಒತ್ತುವರಿ ತೆರವು ಮಂದಗತಿಯಲ್ಲಿ ಸಾಗಿದ್ದರೂ ಮುಂದುವರೆದಿದೆ. ಒಟ್ಟಾರೆ ನನ್ನ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಶ್ರಮ ವಹಿಸಿದ್ದೇನೆ ಎಂದು ಹೇಳಿದರು.   ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತ ಪಕ್ಷದ ನಾಯಕ ರಿಜ್ವಾನ್, ಜೆಡಿಎಸ್ ಆಡಳಿತ ಪಕ್ಷದ ನಾಯಕಿ ಪ್ರಮೀಳಾ, ಉಮಾಶಂಕರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin