ಮಾತೃಪೂರ್ಣ ಯೋಜನೆ ರಾಜ್ಯಾದ್ಯಂತ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Matrupoorna--01

ಬೆಂಗಳೂರು, ಸೆ.26- ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಕಡಿಮೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆಯನ್ನು ಅ.2ರಂದು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವ್ ತಿಳಿಸಿದರು. ಖಾಸಗಿ ಹೊಟೇಲ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾತೃಪೂರ್ಣ ಯೋಜನೆಯನ್ನು ಈ ಮೊದಲು ಮಾನ್ವಿ, ಮಧುಗಿರಿ, ಜಮಖಂಡಿ ಸೇರಿದಂತೆ ನಾಲ್ಕು ತಾಲೂಕುಗಳಲ್ಲಿ ಒಟ್ಟು ಐದು ಯೋಜನಾ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅಲ್ಲಿನ ಫಲಿತಾಂಶ ಆಧರಿಸಿ ಈಗ ರಾಜ್ಯಾದ್ಯಂತ ಯೋಜನೆ ವಿಸ್ತರಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿರುವ ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಸೇರಿದಂತೆ ಸುಮಾರು 56.97 ಲಕ್ಷ ಫಲಾನುಭವಿಗಳು ಈ ಯೋಜನೆ ಸೌಲಭ್ಯ ಪಡೆಯಲಿದ್ದಾರೆ.

ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಪೂರೈಸಿದರೆ ಆರೋಗ್ಯವಂತ ಮಗು ಜನಿಸಲು ಸಾಧ್ಯ. ಇಲ್ಲವಾದರೆ ಅಪೌಷ್ಠಿಕತೆ, ಕಡಿಮೆ ತೂಕ, ಕಡಿಮೆ ಅಂತರ, ಅನಿಮಿಯಾದಂತಹ ದೈತ್ಯ ಸಮಸ್ಯೆಗಳು ಹಾಗೂ ಮೆದುಳು ಬೆಳವಣಿಗೆ ಕುಂಠಿತ ಸೇರಿದಂತೆ ಇತರೆ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಮಾತೃಪೂರ್ಣ ಯೋಜನೆ ಜಾರಿಗೆ ತರಲಾಗುತ್ತಿದ್ದು, ರಾಜ್ಯದಲ್ಲಿರುವ 65,911 ಅಂಗನವಾಡಿಗಳಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯ ಸಹಾಯಕಿಯರ ನೆರವಿನಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಒಂದು ಪೂರ್ಣ ಪ್ರಮಾಣದ ಬಿಸಿಯೂಟ ಒಳಗೊಂಡಿರುತ್ತದೆ. ಗರ್ಭಿಣಿಯರಿಗೆ 2580 ಕ್ಯಾಲರಿ, 78 ಮಿ.ಗ್ರಾಂ. ಪ್ರೊಟೀನ್, 1500ಮಿ.ಗ್ರಾಂ. ಕ್ಯಾಲ್ಸಿಯಂ ಅವಶ್ಯಕತೆಯಿದ್ದು, ಮಾತೃಪೂರ್ಣ ಯೋಜನೆಯಡಿ ಬಿಸಿಯೂಟದಲ್ಲಿ 1347 ಕ್ಯಾಲರಿ, 41 ಮಿ.ಗ್ರಾಂ. ಪ್ರೊಟೀನ್, 578ಮಿ.ಗ್ರಾಂ. ಕ್ಯಾಲ್ಸಿಯಂಯುಕ್ತ ಆಹಾರ ನೀಡಲಾಗುವುದು ಎಂದರು.

ಅನ್ನ-ಸಾಂಬಾರು, ಪಲ್ಯದ ಜತೆಗೆ 200 ಎಂ.ಎಲ್. ಹಾಲು, ಕಡಲೆ ಬೀಜದಿಂದ ಮಾಡಿದ ಆಹಾರವನ್ನು ನೀಡಲಾಗುವುದು. ಮೊಟ್ಟೆ ತಿನ್ನದ ಗರ್ಭಿಣಿಯರಿಗೆ ಮೊಳಕೆ ಕಟ್ಟಿದ ಕಾಳುಗಳನ್ನು ವಿತರಿಸಲಾಗುವುದು. ಜತೆಗೆ 100 ಕಬ್ಬಿಣಾಂಶ, ಜಂತು ಮಾತ್ರೆಗಳನ್ನು ಸೇವಿಸಲು ಪ್ರೋತ್ಸಾಹಿಸಲಾಗುವುದು.  ಗರ್ಭಿಣಿಯರ ತೂಕ 100 ರಿಂದ 12 ಕೆಜಿ ಹೆಚ್ಚಳವಾಗಿದ್ದರೆ ಆರೋಗ್ಯವಂತ ಮಗು ಜನಿಸಲು ಸಾಧ್ಯವಾಗಲಿದೆ. ಅಂಗನವಾಡಿಗೆ ತೆರಳಲು ಸಾಧ್ಯವಾಗದ ಗರ್ಭಿಣಿಯರು, ಬಾಣಂತಿಯರ ಮನೆಗೆ ನೇರವಾಗಿ ಆಹಾರ ನೀಡಲು ಅನುಕೂಲ ಕಲ್ಪಿಸಲಾಗುವುದು ಎಂದು ವಿವರಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಇಲಾಖೆ ನಿರ್ದೇಶಕಿ ದೀಪಾ ತೋಳನ್, ಆಹಾರ ತಜ್ಞೆ ಡಾ.ಕ್ಯಾತಿ ತಿವಾರಿ, ಡಾ.ರಾಜ್‍ಕುಮಾರ್ ಮತ್ತಿತರರಿದ್ದರು.

Facebook Comments

Sri Raghav

Admin