ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟಿನ್‍

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah----011

ಬೆಂಗಳೂರು, ಸೆ.26- ಬಡವರ ಹಸಿವು ನೀಗಿಸಲು ಸರ್ಕಾರ ಸ್ಥಾಪಿಸಿರುವ ಇಂದಿರಾ ಕ್ಯಾಂಟಿನ್‍ಗಳನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆರಂಭಿಸುವುದಾಗಿ ಇಂದಿಲ್ಲಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಗ ಸಿಗದಿದ್ದರೆ ಬಾಡಿಗೆ ಮನೆಗಳಲ್ಲಾದರೂ ಕ್ಯಾಂಟಿನ್‍ಗಳನ್ನು ಪ್ರಾರಂಭಿಸುವ ಮೂಲಕ ಹಸಿದವರಿಗೆ ಅನ್ನ ನೀಡುತ್ತೇವೆ ಎಂದು ಹೇಳಿದರು. ಮಹಾಲಕ್ಷ್ಮಿ ಲೇಔಟ್, ಶಂಕರಮಠ ವಾರ್ಡ್‍ನ ಕುರುಬರಹಳ್ಳಿ ವೃತ್ತದಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ನೂರು ಇಂದಿರಾ ಕ್ಯಾಂಟಿನ್‍ಗಳನ್ನು ಪ್ರಾರಂಭಿಸಿ ಕಡಿಮೆ ದರದಲ್ಲಿ ಊಟ-ಉಪಹಾರ ವಿತರಿಸಲಾಗುತ್ತಿದೆ. ಅ.2ರೊಳಗೆ ಉಳಿದ ಕ್ಯಾಂಟಿನ್‍ಗಳನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು, ಆಗದಿದ್ದರೆ ನವೆಂಬರ್ ಅಂತ್ಯದೊಳಗೆ ಕ್ಯಾಂಟಿನ್‍ಗಳನ್ನು ಎಲ್ಲ ಕಡೆ ಪ್ರಾರಂಭಿಸಬೇಕು. ಇಲ್ಲದಿದ್ದರೆ ಬಾಡಿಗೆ ಕಟ್ಟಡವನ್ನಾದರೂ ಪಡೆದು ಹಸಿದವರಿಗೆ ಊಟ ಒದಗಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಎಲ್ಲ ಆಸ್ಪತ್ರೆಗಳಲ್ಲಿ ಕ್ಯಾಂಟಿನ್ ಆರಂಭಿಸಿ ಬಡವರಿಗೆ ಊಟ ನೀಡುತ್ತೇವೆ ಎಂದು ಹೇಳಿದರು. ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಅಪಾರವಾದ ಕೊಡುಗೆ ನೀಡಿದೆ. ವಿಶ್ವಮಾನ್ಯಗೊಂಡಿರುವ ಬೆಂಗಳೂರನ್ನು ಡೈನಾಮಿಕ್ ಸಿಟಿ ಮಾಡಲು ಮಹತ್ವದ ಯೋಜನೆಗಳನ್ನು ರೂಪಿಸಿದೆ. ನಗರದ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಿದ್ದು, ಪೌರ ಕಾರ್ಮಿಕರನ್ನು ಖಾಯಂ ಮಾಡುವ ನಿರ್ಧಾರ ಕೈಗೊಂಡಿದೆ. ಪೌರ ಕಾರ್ಮಿಕರ ವೇತನವನ್ನು 17,000ಕ್ಕೆ ಹೆಚ್ಚಿಸಿ ಆ ಹಣವನ್ನು ನೇರ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ ಎಂದು ಹೇಳಿದರು.

ಯಾರೂ ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಯಿತು. ಬಿಜೆಪಿ ಪಕ್ಷ ಕೂಡ ಅಧಿಕಾರ ನಡೆಸಿದ್ದರೂ ಜನಪರವಾದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿಯಂತಹ ಯೋಜನೆಗಳನ್ನು ಏಕೆ ಜಾರಿಗೆ ತರಲಿಲ್ಲ ಎಂದು ಅವರು ಹರಿಹಾಯ್ದರು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಪರಿವರ್ತಿಸಿದಾಗ ಅದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೊಟ್ಟವರು ನಾವು. ಅದಕ್ಕಾಗಿ ಒಂದು ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದ್ದೇವೆ. ನಮ್ಮ ಪಕ್ಷ ಬಿಬಿಎಂಪಿಯಲ್ಲಿ ಆಡಳಿತ ಹಿಡಿದಾಗ 800 ಕೋಟಿ ರೂ.ಗಳ ಸಾಲವಿತ್ತು. ವಿವಿಧ ಬಿಬಿಎಂಪಿ ಆಸ್ತಿಗಳನ್ನು ಅಡಮಾನವಿಡಲಾಗಿತ್ತು. ಅವುಗಳೆಲ್ಲವನ್ನೂ ವಾಪಸ್ ಪಡೆಯುವ ಪ್ರಯತ್ನವನ್ನು ನಮ್ಮ ಪಕ್ಷ ಮಾಡಿದೆ.

ಮಳೆಯಿಂದಾಗುವ ತೊಂದರೆಗೆ ಪೂರ್ಣ ವಿರಾಮ ಹಾಕಲು ದೊಡ್ಡ ಮೋರಿಗಳ ದುರಸ್ತಿ ನಡೆಯುತ್ತಿದೆ. ಮುಂದಿನ ಅಧಿಕಾರವು ನಮ್ಮದೇ. ಜನ ನಮ್ಮನ್ನು ಆಶೀರ್ವಾದ ಮಾಡುತ್ತಾರೆ. ಶಾಸಕ ಗೋಪಾಲಯ್ಯನವರೇ ಇತ್ತ ಕೇಳಿ, ಮುಂದೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಶಂಕರಮಠ ವಾರ್ಡ್ ಸದಸ್ಯರಾದ ಎಂ.ಶಿವರಾಜ್ ಅವರು ಕ್ರಿಯಾಶೀಲ ವ್ಯಕ್ತಿ. ಅವರು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಅವರು ಸ್ಥಾಯಿಸಮಿತಿ ಅಧ್ಯಕ್ಷರಾಗಿದ್ದಾಗ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಲ್ಲದೆ ಅಡಮಾನವಿಟ್ಟ ಕಟ್ಟಡಗಳನ್ನು ವಾಪಸ್ ಪಡೆದಿದ್ದಾರೆ. ಇಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳಿಗೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಇದಕ್ಕೆ ಜನ ಮನ್ನಣೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರ ಆಡಳಿತದಲ್ಲಿ ಮಾಡಬಾರದ್ದನ್ನು ಮಾಡಿ ಈಗ ಏನಾದರೂ ಮಾಡಿ ಅಧಿಕಾರ ಹಿಡಿಯಲು ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಅವರು ಯಾವುದೇ ಕೆಲಸ ಮಾಡಿಲ್ಲ. ನಾವು ಎರಡು ವರ್ಷಗಳಿಂದ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಪಾಲಿಕೆ ಬೇರೆ, ವಿಧಾನಸೌಧ ಬೇರೆ ಎಂದು ಗೋಪಾಲಯ್ಯ ಅವರ ಕಡೆ ತಿರುಗಿ ಹೇಳಿದರು.ಗೋಪಾಲಯ್ಯ ಕೂಡ ನಮ್ಮ ಮನುಷ್ಯನೇ. ಅವರಿಗೆ ಅಭಿವೃದ್ಧಿ ಹೇಗೆ ಮಾಡಬೇಕು ಎಂದು ಗೊತ್ತಿದೆ ಎಂದು ತಿಳಿಸಿದರು. ಬೆಂಗಳೂರು ವಿಭಜನೆ ವಿಚಾರವನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ ಅವರು, ಇದಕ್ಕೆ ಹಲವರ ವಿರೋಧವಿದೆ. ಕೆಂಪೇಗೌಡ ಜಯಂತಿಯನ್ನು ಆರಂಭಿಸಿದ್ದು ನಾವು ಎಂದು ಹೇಳಿದರು.

ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ನಗರದ ಎಲ್ಲ ರಸ್ತೆಗಳನ್ನೂ ವೈಟ್ ಟ್ಯಾಪಿಂಗ್ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕೆ.ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ, ಬಿಜೆಪಿ ಪಕ್ಷ ಅಭಿವೃದ್ಧಿಗೆ ತೊಡಕಾಗಿದೆ. ಆರ್‍ಟಿಐ ಮೂಲಕ ಅಭಿವೃದ್ಧಿಗೆ ಅಡಚಣೆ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ನನ್ನ ಕ್ಷೇತ್ರದ ಏಳು ವಾರ್ಡ್‍ಗಳಲ್ಲಿ ತಾರತಮ್ಯವಿಲ್ಲದೆ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. 5 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, 2 ಕೋಟಿ ವೆಚ್ಚದಲ್ಲಿ ಈಜುಕೊಳ, ಡಯಾಲಿಸಿಸ್ ಕೇಂದ್ರ ಸ್ಥಾಪನೆ, ಎಲ್ಲದಕ್ಕೂ ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಬಿಬಿಎಂಪಿ ಸದಸ್ಯರಾದ ಶಿವರಾಜ್ ಮಾತನಾಡಿ, ಬೆಂಗಳೂರಿನ ದೂರದೃಷ್ಟಿ ಹಿನ್ನೆಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಶಂಕರಮಠದ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಕೆಲಸಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಕಾರ್ಡ್‍ರೋಡ್‍ನಿಂದ ರಿಂಗ್‍ರೋಡ್‍ವರೆಗೆ ರಸ್ತೆ ಕಾಮಗಾರಿ 50 ಕೋಟಿ ವೆಚ್ಚದಲ್ಲಿ ನಡೆಸಲು ಉದ್ದೇಶಿಸಿರುವ ಕಾಮಗಾರಿಯತ್ತ ಸಾಕಷ್ಟು ಅನುಕೂಲವಾಗುತ್ತಿದೆ. ಶಂಕರಮಠ ವಾರ್ಡ್‍ನ ಕೊಳಗೇರಿಯ 250 ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ಶಿವರಾಜ್ ವಿಷಯ ಪ್ರಸ್ತಾಪಿಸಿದರು.
ಸಚಿವರಾದ ಎಂ.ಆರ್.ಸೀತಾರಾಂ, ರೇವಣ್ಣ, ಸ್ಥಳೀಯ ಪಾಲಿಕೆ ಸದಸ್ಯರಾದ ಕೇಶವಮೂರ್ತಿ, ಮುಖಂಡರಾದ ಕೃಷ್ಣಮೂರ್ತಿ, ನಿಸರ್ಗ ಜಗದೀಶ್ ಮುಂತಾದವರು ಭಾಗವಹಿಸಿದ್ದರು.

Facebook Comments

Sri Raghav

Admin