ಅದ್ಧೂರಿ ರಾಜ್ಯೋತ್ಸವದ ಮೂಲಕ ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸ್ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

BJP-Vs-Congress

ಬೆಂಗಳೂರು, ಸೆ.28-ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮುಂಬರುವ ನವೆಂಬರ್ 2 ರಂದು ಕೈಗೊಂಡಿರುವ ಪರಿವರ್ತನಾ ರ್ಯಾಲಿಗೆ ಪರ್ಯಾಯವಾಗಿ ಕಾಂಗ್ರೆಸ್ ರಾಜ್ಯಾದ್ಯಂತ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸಿದೆ. ಬೂತ್‍ಮಟ್ಟದ ಎಲ್ಲಾ ಅಧ್ಯಕ್ಷರುಗಳ ನಿವಾಸಗಳ ಮೇಲೆ ನವೆಂಬರ್ 1 ರಿಂದ ಬಿಜೆಪಿ ಧ್ವಜ ಹಾರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಫರ್ಮಾನು ಹೊರಡಿಸಿದ್ದಾರೆ ಎಂಬ ವಿಷಯ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  ನವೆಂಬರ್ 2ರಿಂದ ಬಿಜೆಪಿ ನವಕರ್ನಾಟಕದ ಪರಿವರ್ತನಾ ರ್ಯಾಲಿ ಕೈಗೊಂಡಿದ್ದು, ರ್ಯಾಲಿಗೆ ಚಾಲನೆ ನೀಡಲು ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

ಇದರ ಸುಳಿವರಿತ ಕಾಂಗ್ರೆಸ್ ಪಕ್ಷ ರ್ಯಾಲಿಗೆ ಪರ್ಯಾಯವಾಗಿ ಬಿಜೆಪಿಗೆ ಟಾಂಗ್ ಕೊಡಲು ಕನ್ನಡ ರಾಜ್ಯೋತ್ಸವವನ್ನು ರಾಜಧಾನಿ ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ಪ್ರಮುಖ ನಗರಗಳು ಹಾಗೂ ರಾಜ್ಯದ ವಿವಿಧೆಡೆ ಅದ್ಧೂರಿಯಾಗಿ ಆಚರಿಸಲು, ನಾಡಿನೆಲ್ಲೆಡೆ ಕನ್ನಡ ಧ್ವಜಗಳನ್ನು ಹಾರಿಸಲು ತೀರ್ಮಾನಿಸಿದೆ. ಕನ್ನಡ ನಾಡಿನ ಜ್ವಲಂತ ಸಮಸ್ಯೆಗಳು, ಗಡಿ ಸಮಸ್ಯೆಗಳು, ಜಲ ವಿವಾದಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕಾವೇರಿ, ಮಹದಾಯಿ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿದೆ. ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಬಲವಂತವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ವಿರೋಧಿಸಿ ನಾಡಿನಲ್ಲಿರುವ ಸಾವಿರಾರು ಕನ್ನಡ ಪರ ಸಂಘಟನೆಗಳು ಈಗಾಗಲೇ ಹೋರಾಟವನ್ನು ಆರಂಭಿಸಿವೆ. ಇದಲ್ಲದೆ, ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರು ನವೆಂಬರ್ 1 ರಂದೇ ಬಿಜೆಪಿ ಧ್ವಜ ಹಾರಾಟ ನಡೆಸಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು. ಇದು ನಾಡಿನ ಜನರನ್ನು ಮತ್ತಷ್ಟು ಕೆರಳಿಸಿತ್ತು.

ನವೆಂಬರ್ 1 ರ ಕಾರ್ಯಕ್ರಮವನ್ನು ಬಿಜೆಪಿ ನವೆಂಬರ್ 2 ರಿಂದ ಮಾಡಲು ತೀರ್ಮಾನಿಸಿತು. ಇದನ್ನರಿತ ಕಾಂಗ್ರೆಸ್ ಪರಿವರ್ತನಾ ರ್ಯಾಲಿಗೆ ಪರ್ಯಾಯವಾಗಿ ನಾಡಿನ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯೋತ್ಸವದ ನೆಪದಲ್ಲಿ ಬಿಜೆಪಿಯನ್ನು ಹಣಿಯುವ ತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ನೀರು ನಿರ್ವಹಣಾ ಮಂಡಳಿ ರಚನೆಗೆ ರಾಜ್ಯ ವಿರೋಧಿಸುತ್ತಾ ಬಂದಿದೆ, ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯೆಪ್ರವೇಶ ಮಾಡುತ್ತಿಲ್ಲ. ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಅಲ್ಲಿನ ಕನ್ನಡಿಗರಿಗೆ ರಕ್ಷಣೆ ಇಲ್ಲ ಮತ್ತು ಮಹದಾಯಿ ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿವರ್ತನಾ ರ್ಯಾಲಿ ಸಂದರ್ಭದಲ್ಲಿ ಕಾಂಗ್ರೆಸ್ ಬಿಂಬಿಸಲು ತೀರ್ಮಾನಿಸಿದೆ. ಈ ಮೂಲಕ ಬಿಜೆಪಿಯ ಪರಿವರ್ತನಾ ರ್ಯಾಲಿಯನ್ನು ನಿಯಂತ್ರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin