ಅಷ್ಟಕ್ಕೂ ನಿನ್ನೆ ರಾತ್ರಿ ಅಲ್ಲಿ ನಡೆದಿದ್ದೇನು, ಕಾರಿನಲ್ಲಿದ್ದ ಗಾಂಜಾ ಯಾರದ್ದು..!

Car--014

ಬೆಂಗಳೂರು,ಸೆ.28-ಪ್ರತಿಷ್ಠಿತ ಆಂಧ್ರ ಮೂಲದ ಉದ್ಯಮಿಯೊಬ್ಬರ ಮೊಮ್ಮಗ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಅತಿವೇಗವಾಗಿ ಬಂದು ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರೆಲ್ಲ ಸೇರಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತ ಮಾಡಿದ ವಿಷ್ಣುವಿನ ಬೆಂಜ್ ಕಾರಿನಲ್ಲಿ ಗಾಂಜಾ ಪತ್ತೆಯಾಗಿದ್ದು ಜಯನಗರ ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಎಲ್ಲರೂ ಪಾನಮತ್ತ ರಾಗಿದ್ದರೆಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅಪಘಾತ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಇಬ್ಬರು ನಟರು ಇದ್ದರು ಎಂದು ಹೇಳಲಾಗುತ್ತಿದೆ. ಆಂಧ್ರ ಮೂಲದ ಪ್ರತಿಷ್ಠಿತ ಉದ್ಯಮಿಯೊಬ್ಬರ ಮೊಮ್ಮಗ ವಿಷ್ಣು ಎಂಬಾತ ಮಧ್ಯರಾತ್ರಿ 12.15ರಲ್ಲಿ ಸ್ನೇಹಿತರೊಂದಿಗೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಜಯನಗರ ಮುಖಾಂತರ ಹೋಗುತ್ತಿದ್ದರು.

ಈ ವೇಳೆ ಸೌತ್ ಎಂಡ್ ಸರ್ಕಲ್ ಬಳಿ ಹೋಗುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಇವರ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡಿದೆ. ಇದರಿಂದ ಆಕ್ರೋಶಗೊಂಡ ಓಮ್ನಿ ಕಾರಿನಲ್ಲಿದ್ದವರು ಹಾಗೂ ಬೆಂಜ್ ಕಾರಿನಲ್ಲಿದ್ದವರ ನಡುವೆ ಜಗಳವಾಡುತ್ತಿದ್ದಾಗ ಸಾರ್ವಜನಿಕರು ಸ್ಥಳಕ್ಕಾಗಮಿಸಿ ವಿಷ್ಣು ಹಾಗೂ ಮತ್ತವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದ ಜಯನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಸಾರ್ವಜನಿಕರನ್ನು ಕಳುಹಿಸಿದ್ದಾರೆ.  ಹಲ್ಲೆಯಿಂದಾಗಿ ಗಾಯಗೊಂಡಿರುವ ವಿಷ್ಣು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾರತಿ ಓಮ್ನಿ ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಜಗಳದ ವೇಳೆ ಇವರು ಸಹ ಗಾಯಗೊಂಡಿದ್ದು , ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ವಿಷ್ಣು ಅವರ ಕಾರಿನಲ್ಲಿ ಇಬ್ಬರು ಖ್ಯಾತ ನಟರು ಇದ್ದರೆಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.  ಅಪಘಾತ ನಡೆಸಿದ ಮರ್ಸಿಡಿಸ್ ಬೆಂಜ್ ಕಾರನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ 100 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಮಾದಕ ವಸ್ತುವನ್ನು ಪೇಪರ್‍ನಲ್ಲಿ ಸುತ್ತಿಟ್ಟಿದ್ದನ್ನು ಗಮನಿಸಿದ ಪೊಲೀಸರು ಈ ವಿಷಯವನ್ನು ಜಯನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಸ್ಥಳಕ್ಕೆ ಬಂದು ಕಾರಿನಲ್ಲಿದ್ದ ಗಾಂಜಾವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಸಂಚಾರಿ ಪೊಲೀಸರು, ಬೆಂಜ್ ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದರೇ? ಹಾಗೂ ಗಾಂಜಾ ಸೇವಿಸಿದ್ದರೇ? ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ವಿಷ್ಣ್ಣು ಚಲಾಯಿಸುತ್ತಿದ್ದ ಕಾರು ಪಾಂಡಿಚೇರಿಯ ರಿಜಿಸ್ಟ್ರೇಷನ್ ಹೊಂದಿದ್ದು , ಈ ಕಾರು
ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin