ಉಗರ ಅಟ್ಟಹಾಸ : ಮನೆಗೆ ನುಗ್ಗಿ ಬಿಎಸ್‍ಎಫ್ ಯೋಧನ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

BSF--02

ಶ್ರೀನಗರ, ಸೆ.28- ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ನಾಲ್ವರು ಭಯೋತ್ಪಾದಕರು ಮನೆಯೊಂದಕ್ಕೆ ನುಗ್ಗಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧನೊಬ್ಬನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ನಿನ್ನೆ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಂಡಿಪೆÇೀರಾದಲ್ಲಿ ನಡೆದಿದೆ. ಮಹಮದ್ ರಂಜಾನ್ ಪ್ಯಾರಿ (23) ಉಗ್ರರ ಕ್ರೌರ್ಯಕ್ಕೆ ಬಲಿಯಾದ ಯೋಧ. ಈ ದಾಳಿಯಲ್ಲಿ ಆತನ ತಂದೆ ಮತ್ತು ಸಹೋದರರೂ ಗಾಯಗೊಂಡಿದ್ದಾರೆ
ಶೋಪಿಯಾನ್‍ನಲ್ಲಿ ಮೂರು ತಿಂಗಳ ಹಿಂದೆ ಮದುವೆ ಮನೆಯೊಂದನ್ನು ನುಗ್ಗಿ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಉಗ್ರರು ಹತ್ಯೆ ಮಾಡಿದ ಘಟನೆ ಇನ್ನೂ ನೆನಪಿನಲ್ಲಿರುವಾಗಲೇ ಮತ್ತೊಂದು ಕೃತ್ಯ ನಡೆದಿದೆ.

ಕೆಲವು ವರ್ಷಗಳ ಹಿಂದೆ ಬಿಎಸ್‍ಎಫ್‍ಗೆ ಸೇರಿದ್ದ ಪ್ಯಾರಿ, ಬಾರಾಮುಲ್ಲಾ ಪಟ್ಟಣದಲ್ಲಿ 73ನೇ ಬೆಟಾಲಿಯನ್‍ನಲ್ಲಿ ಸೇವೆಯಲ್ಲಿದ್ದರು. 20 ದಿನಗಳ ರಜೆ ಮೇಲೆ ಅವರು ತಮ್ಮ ಹುಟ್ಟೂರಿಗೆ ಬಂದಿದ್ದರು.  ನಾಲ್ವರು ಉಗ್ರರು ಮನೆಗೆ ನುಗ್ಗಿ ಯೋಧನನ್ನು ಭೀಕರವಾಗಿ ಥಳಿಸಿದರು. ಈ ಸಂದರ್ಭದಲ್ಲಿ ಆತನ ಇಬ್ಬರು ಸಹೋದರರಾದ ಜಾವೇದ್ ಮತ್ತು ಸಾಹೀಬ್, ತಂದೆ ಗುಲಾಂ ಮತ್ತು ಚಿಕ್ಕಮ್ಮ ಹಬಾ ಬೇಗಂ ಪ್ರತಿರೋಧ ವ್ಯಕ್ತಪಡಿಸಿದರು. ಆನಂತರ ಅವರನ್ನು ಬೆದರಿಸಿದ ಭಯೋತ್ಪಾದಕರು ಸ್ವಯಂಚಾಲಿತ ಬಂದೂಕಿನಿಂದ ಗುಂಡು ಹಾರಿಸಿ ಪ್ಯಾರಿಯನ್ನು ಕೊಂದು ಪರಾರಿಯಾದರು.

ಗಾಯಗೊಂಡಿರುವ ಆತನ ತಂದೆ ಮತ್ತು ಸಹೋದರರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ.
ಬಿಎಸ್‍ಎಫ್ ಯೋಧನನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿ ಕೊಲ್ಲುವುದು ಉಗ್ರರ ಉದ್ದೇಶವಾಗಿತ್ತು. ಆದರೆ ಕುಟುಂಬದ ಸದಸ್ಯರ ತೀವ್ರ ಪ್ರತಿರೋಧದಿಂದ ಅವರು ಮನೆಯಲ್ಲೇ ಗುಂಡು ಹಾರಿಸಿ ಕೊಂದರು ಎಂದು ಬಂಡಿಪೋರಾ ಪೊಲೀಸ್ ವರಿಷ್ಠಾಧಿಕಾರಿ ಜುಲ್ಫೀಕರ್ ಅಜಾದ್ ತಿಳಿಸಿದ್ದಾರೆ.
ಹಂತಕ ಉಗ್ರರಿಗಾಗಿ ವ್ಯಾಪಕ ಶೋಧ ಮುಂದುವರಿದಿದೆ. ಈ ಘಟನೆ ನಂತರ ಕಾಶ್ಮೀರ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin