ಗೋವಾ ಕನ್ನಡಿಗರ ರಕ್ಷಣೆಗೆ ವಾಟಾಳ್ ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

vATAL-M

ಬೆಂಗಳೂರು, ಸೆ.28-ಗೋವಾ ಕನ್ನಡಿಗರಿಗೆ ನಾಳೆ ಸಂಜೆಯೊಳಗಾಗಿ ಪುನರ್ವಸತಿ ಕಲ್ಪಿಸದಿದ್ದರೆ ಗೋವಾ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಕನ್ನಡ ಒಕ್ಕೂಟದ ಮುಖಂಡ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಗೋವಾ ಕನ್ನಡಿಗರ ನಿವಾಸಗಳನ್ನು ನೆಲಸಮ ಮಾಡಿ ಅವರನ್ನು ಅಲ್ಲಿಂದ ಓಡಿಸುವ ಕೆಲಸವನ್ನು ಅಲ್ಲಿನ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮಾಡುತ್ತಿರುವುದು ಖಂಡನೀಯ. ಕೂಡಲೇ ಗೋವಾ ಸರ್ಕಾರ ಪುನರ್ವಸತಿ ಕಲ್ಪಿಸಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಹೇಳಿದರು.

ಕರ್ನಾಟಕ ಸರ್ಕಾರ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‍ಗೆ ಪತ್ರ ಬರೆದು ಕೈ ತೊಳೆದುಕೊಂಡಿದೆ. ಇಷ್ಟು ಮಾಡಿದರೆ ಸಾಲದು ಕೂಡಲೇ ಒಬ್ಬ ಸಚಿವರನ್ನು ಅಲ್ಲಿಗೆ ಕಳುಹಿಸಿ, ಅಲ್ಲಿನ ಕನ್ನಡಿಗರ ಪರಿಸ್ಥಿತಿ ಅವಲೋಕಿಸಿ ಪುನರ್ವಸತಿ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಗೋವಾ ಸರ್ಕಾರ ಕನ್ನಡಿಗರನ್ನು ತೀವ್ರವಾಗಿ ಕಡೆಗಣಿಸುತ್ತಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಗೋವಾ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಅವರು ಆಗ್ರಹಿಸಿದರು.

ಸಂಸತ್ ಸದಸ್ಯರು ಯಾರೂ ಗೋವಾ ಕನ್ನಡಿಗರ ಪರಿಸ್ಥಿತಿ ಬಗ್ಗೆ ದನಿ ಎತ್ತುತ್ತಿಲ್ಲ. ಮಹದಾಯಿ ವಿಷಯದಲ್ಲಿ ಹೋರಾಟ ಮಾಡುತ್ತಿಲ್ಲ. ಎಲ್ಲರೂ ಕಣ್ಮುಚ್ಚಿ ಕುಳಿತಿದ್ದಾರೆ. ಸಮಸ್ಯೆಗಳಿಗೂ ನಮಗೂ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಈ ಎಲ್ಲವನ್ನು ಖಂಡಿಸಿ ಕನ್ನಡ ಒಕ್ಕೂಟ ವತಿಯಿಂದ ಗೋವಾ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಾಳೆ ಸಂಜೆಯೊಳಗಾಗಿ ಗೋವಾ ಕನ್ನಡಿಗರ ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಲಾಗುವುದು ಎಂದರು.

ಗೋವಾ ಸರ್ಕಾರ ಕನ್ನಡಿಗರ ಪದೇ ಪದೇ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಕನ್ನಡ ನಾಡಿನಿಂದ ಹಣ್ಣು, ತರಕಾರಿ, ಹಾಲು, ಪಡಿತರ ಎಲ್ಲವೂ ಸರಬರಾಜಾಗುತ್ತದೆ. ಆದರೆ ಅಲ್ಲಿರುವ ಕೆಲ ಕನ್ನಡಿಗರು ವಾಸ ಮಾಡುವುದು ಬೇಡ ಎಂದರೆ ಹೇಗೆ. ಇದನ್ನು ನಾವು ಸಹಿಸುವುದಿಲ್ಲ. ಜೀವನ ಅರಸಿ ಹೋದವರಿಗೆ ಅವಕಾಶ ನೀಡಬೇಕು, ಈ ರೀತಿ ಬಡಿದು ಅನಾಗರಿಕರಂತೆ ವರ್ತಿಸುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು. ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಗಿರೀಶ್‍ಗೌಡ, ಮಂಜುನಾಥ್ ದೇವು ಈ ಸಂದರ್ಭದಲ್ಲಿದ್ದರು.

Facebook Comments

Sri Raghav

Admin