ಒಂದು ಕೋಟಿ ಮೌಲ್ಯದ ತೇಗದ ಮರ ವಶ : 9 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮದ್ದೂರು, ಸೆ.29- ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತೇಗದ ಮರಗಳನ್ನು ಕಳವು ಮಾಡಿ ಅಪಹರಿಸಿದ್ದ ಪ್ರಕರಣವನ್ನು ಬೇಧಿಸಿರುವ ಮದ್ದೂರು ಅಪರಾಧ ವಿಭಾಗದ ಪೊಲೀಸರು 9 ಮಂದಿಯನ್ನು ಬಂಧಿಸಿ ಸುಮಾರು 1 ಕೋಟಿ ರೂ . ಮೌಲ್ಯದ ತೇಗದ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಾಳಘಟ್ಟ ಗ್ರಾಮದ ರಾಮಕೃಷ್ಣ, ಹರಿಸಂದ್ರದ ಹೆಚ್.ಎಸ್.ಸಿದ್ದರಾಜು, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಸರಗೂರು ಗ್ರಾಮದ ನಂದೀಶ ಸೋನಹಳ್ಳಿ, ಚಲುವ ಅಲಿಯಾಸ್ ಚಲುವೇಗೌಡ, ಮೈಸೂರು ಕಲ್ಯಾಣಗಿರಿ ಆಶೀಫ್ ಪಾಷಾ, ಮಂಡಿ ಮೊಹಲ್ಲಾದ ಸಯ್ಯದ್ ನಾಸೀರ್, ಪಯಾಜ್ ಪಾಷಾ, ಶಾಂತಿನಗರದ ರೆಹಮತ್ ಉಲ್ಲಾಖಾನ್ ಹಾಗೂ ಸಯ್ಯದ್ ಅಜಗರ್ ಬಂಧಿತ ಆರೋಪಿಗಳು.

Madduru--02

ಬಂಧಿತರಿಂದ ಮಂಡ್ಯ, ಮೈಸೂರು ಹಾಗೂ ರಾಮನಗರದಲ್ಲಿ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಕಳವು ಮಾಡಿದ್ದ ಸುಮಾರು 1 ಕೋಟಿ ರೂ. ಮೌಲ್ಯದ ತೇಗದ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸಲಾಗಿದ್ದ 2 ಮಿನಿ ಕ್ಯಾಂಟರ್ ಲಾರಿ, 1 ಟಾಟಾ ಎಸ್ಟೇಟ್ ಕಾರು, 1 ಗೂಡ್ಸ್ ಆಟೋ, 1 ಬೈಕು ಹಾಗೂ ಮರಗಳನ್ನು ಕತ್ತರಿಸಲು ಬಳಸಲಾಗಿದ್ದ ಗರಗಸಗಳನ್ನು ಅಮಾನತು ಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ರುವಾರಿಗಳಾದ ರಾಮಕೃಷ್ಣ, ಚಲುವೇಗೌಡ, ಸಿದ್ದರಾಜು, ನಂದೀಶ್, ಆಶೀಫ್ ಪಾಷಾ ಹಾಗೂ ಸಯ್ಯದ್ ನಾಸೀರ್ ಅವರುಗಳನ್ನು ಈಗಾಗಲೇ ವಿಚಾರಣೆ ನಡೆಸಿ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇನ್ನೂ ಹಲವು ಆರೋಪಿಗ ಬಂಧನಕ್ಕೆ ಬಲೆ ಬೀಸಲಾಗಿದ್ದು, ರೆಹಮತ್ ಉಲ್ಲಾಖಾನ್, ಪಯಾಜ್ ಪಾಷಾ ಮತ್ತು ಸಯ್ಯದ್ ಅಜಗರ್ ಅವರುಗಳನ್ನು ಪೊಲೀಸ್ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮದ್ದೂರು ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆ ಎಲ್ಲೆಗೆ ಸೇರಿದ ಬಿ.ವಿಜಯೇಂದ್ರ ಹಾಗೂ ಡಾ.ಅಪ್ಪಾಜಿಗೌಡ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ 12 ತೇಗದ ಮರಗಳನ್ನು ಕಳೆದ ಜುಲೈ 12 ರಂದು ಆರೋಪಿಗಳು ಕಳವು ಮಾಡಿ ಅಪಹರಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.

ನಂತರ ತೇಗದ ಮರಗಳ ಕಳವು ಪ್ರಕರಣದಲ್ಲಿ ಬಹುದೊಡ್ಡ ಜಾಲವೇ ಕೃತ್ಯ ನಡೆಸಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಿ.ರಾಧಿಕ, ಎಎಸ್ಪಿ ಲಾವಣ್ಯ, ಡಿವೈಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಅಪರಾಧ ಪತ್ತೆ ದಳದ ವಿಶೇಷ ತಂಡವನ್ನು ರಚಿಸಲಾಗಿತ್ತು. ಸಿಪಿಐ ಕೆ.ಪ್ರಭಾಕರ್ ನೇತೃತ್ವದಲ್ಲಿ ಸಂಚಾರಿ ಠಾಣೆ ಪಿಎಸ್‍ಐ ಸಂತೋಷ್, ಕೆಸ್ತೂರು ಠಾಣೆ ಪಿಎಸ್‍ಐ ಮಂಜೇಗೌಡ, ಅಪರಾದ ಪತ್ತೆದಳ ತಂಡದ ಎಎಸ್‍ಐ ಬೆಳಗುಲಿ ಮಹದೇವಪ್ಪ, ಮುಖ್ಯ ಪೇದೆಗಳಾದ ಅಫೀಜ್ ಪಾಷಾ, ಕರಿಗಿರೀಗೌಡ ಹಾಗೂ ಸಿಬ್ಬಂದಿಗಳಾದ ಕುಮಾರ ಸ್ವಾಮಿ, ಮಹೇಶ್, ವಿಠಲ್, ಭರತ್, ನಟರಾಜು, ರಮೇಶ್ ಜಮಾಣಿ, ಜೀಪ್ ಚಾಲಕರಾದ ನರಸಿಂಹಮೂರ್ತಿ, ಮಂಜುನಾಥ್ ತಂಡ ಎಸ್.ಪಿ.ಕಚೇರಿಯ ತಾಂತ್ರಿಕ ವಿಭಾಗದ ಕಿರಣ್ ಅವರುಗಳ ನೆರವಿನೊಂದಿಗೆ ಜಂಟಿ ಕಾರ್ಯಚರಣೆ ಕೈಗೊಂಡಿದ್ದರು.

ಮದ್ದೂರು ಸಮೀಪದ ನಿಡಘಟ್ಟದ ಬಳಿ ಸೆ.15 ರಂದು ಅನುಮಾನಸ್ಪದವಾಗಿ ಕ್ಯಾಂಟರ್ ಚಾಲನೆ ಮಾಡಿಕೊಂಡು ಹೋಗುತಿದ್ದ ಸಂದರ್ಭದಲ್ಲಿ ಆರೋಪಿಗಳ ಪೈಕಿ ರಾಮಕೃಷ್ಣ, ಚಲುವೇಗೌಡ, ನಂದೀಶ ಅವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇಡೀ ತೇಗದ ಮರಗಳ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲಾ ಆರೋಪಿಗಳು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ 2, ಮಳವಳ್ಳಿ, ಮಂಡ್ಯ ಗ್ರಾಮಾಂತರದಲ್ಲಿ ತಲಾ 1, ಕಿರುಗಾವಲು, ಬೆಳಕವಾಡಿ, ಶಿವಳ್ಳಿ, ಕೆರಗೋಡು, ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ತಲಾ 1 ಪ್ರಕರಣ ಹಾಗೂ ರಾಮನಗರ ಜಿಲ್ಲೆಗೆ ಸೇರಿದ 2 ಪ್ರಕರಣ ಮತ್ತು ಮೈಸೂರು ಜಿಲ್ಲೆ ತಲಕಾಡು ಪೆÇಲೀಸ್ ಠಾಣೆಗೆ ಸೇರಿದ 1 ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಕಳವು ಮಾಡಿದ್ದ 1 ಕೋಟಿ ರೂ ಮೌಲ್ಯದ ತೇಗದ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin