ಬೆಂಗಳೂರಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿ 

ಈ ಸುದ್ದಿಯನ್ನು ಶೇರ್ ಮಾಡಿ

Garbage--05

ಬೆಂಗಳೂರು, ಅ.1- ಮಾಮೂಲು ದಿನಗಳಲ್ಲೇ ಸಮರ್ಪಕ ಕಸ ವಿಲೇವಾರಿ ಅಸಾಧ್ಯ. ಇನ್ನು ಹಬ್ಬ ಹರಿದಿನಗಳಲ್ಲಿ ಕೇಳಬೇಕೆ…? ನಾಡ ಹಬ್ಬ ದಸರಾ ಮುಗಿಯುತ್ತಿದ್ದಂತೆ ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ರಾಶಿ ರಾಶಿ ಕಸ ರಾರಾಜಿಸುತ್ತಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯನಗರ, ಬಸವೇಶ್ವರನಗರ, ಗಾಂಧಿಬಜಾರ್, ಜಯನಗರ, ಮಲ್ಲೇಶ್ವರಂ, ಕೆ.ಆರ್. ಮಾರುಕಟ್ಟೆ ಮತ್ತಿತರ ಪ್ರದೇಶಗಳ ರಸ್ತೆಗಳಲ್ಲಿ ಬಾಳೆಕಂಬಗಳು ಮಾವಿನ ಸೊಪ್ಪು, ಬೂದು ಕುಂಬಳಕಾಯಿ ಸೇರಿದಂತೆ ಮತ್ತಿತರ ತ್ಯಾಜ್ಯಗಳ ರಾಶಿ ರಾಶಿ ಕಂಡುಬರುತ್ತಿವೆ.

Garbage--04

ದಸರಾ ಹಬ್ಬದಲ್ಲಿ ತಮ್ಮ ವಾಹನಗಳಿಗೆ ಮತ್ತು ಆಯುಧಗಳನ್ನು ಬಾಳೆಕಂಬ, ಮಾವಿನಸೊಪ್ಪು, ಹೂ ಮತ್ತಿತರ ವಸ್ತುಗಳಿಂದ ಸಿಂಗರಿಸಿ ಪೂಜೆ ಮಾಡುವುದು ವಾಡಿಕೆ.  ಈ ಹಬ್ಬದ ಸಂದರ್ಭದಲ್ಲಿ ಹಳ್ಳಿಗಳಿಂದ ರೈತರು ಮತ್ತು ವ್ಯಾಪಾರಿಗಳು ರಾಶಿ ರಾಶಿ ಬಾಳೆ ಕಂಬ, ಬೂದುಕುಂಬಳಕಾಯಿ, ಮಾವಿನಸೊಪ್ಪು, ಹೂ ತಂದು ಮಾರಾಟ ಮಾಡುತ್ತಾರೆ.ಹಬ್ಬ ಮುಗಿದ ಕೂಡಲೇ ವ್ಯಾಪಾರವಾಗದೇ ಉಳಿಯುವ ವಸ್ತುಗಳನ್ನು ರಸ್ತೆಯಲ್ಲೇ ಬಿಟ್ಟು ಹೋಗುತ್ತಾರೆ. ಹೀಗಾಗಿ ರಸ್ತೆ  ರಸ್ತೆಗಳಲ್ಲಿ ರಾಶಿ ರಾಶಿ ಕಸ ಕಂಡು ಬರುತ್ತದೆ.

Garbage--03

ಶುಕ್ರವಾರ ಹಾಗೂ ಶನಿವಾರ ಹಬ್ಬದ ಸಡಗರವಾದರೆ, ಭಾನುವಾರ ಮಾಮೂಲು ರಜೆ. ಸೋಮವಾರ ಗಾಂಧಿಜಯಂತಿ. ಹೀಗೆ ಒಟ್ಟು ನಾಲ್ಕು ದಿನಗಳ ಸರಣಿ ರಜೆ ಸಿಕ್ಕಿರುವುದರಿಂದ ಕಸವಿಲೇವಾರಿ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ಹಾಗೂ ಬಿಬಿಎಂಪಿ ಸಿಬ್ಬಂದಿ ನಾಪತ್ತೆ. ಇದರ ಪರಿಣಾಮವೇ ಕಂಡ ಕಂಡಲ್ಲಿ ಕಸದ ರಾಶಿ ಕಂಡು ಬರುತ್ತಿದೆ.  ಮೇಯರ್ ಸಂಪತ್‍ರಾಜ್ ಅವರು ಎಚ್ಚೆತ್ತುಕೊಂಡು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪರಿಣಾಮ ಅಷ್ಟೋಇಷ್ಟೋ ಕಸ ವಿಲೇವಾರಿಯಾಗುತ್ತಿದೆ.

Garbage--02

ಆದರೂ ನಗರದ ಬಹುತೇಕ ಪ್ರದೇಶಗಳಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಇಂದೂ ಅಥವಾ ನಾಳೆ ಜೋರು ಮಳೆಯಾದರೆ ಮಳೆ ನೀರಿನಲ್ಲಿ ಕಸ ಕೊಳೆತು ದುರ್ನಾತ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ರಸ್ತೆಯಲ್ಲಿ ರಾಶಿ ರಾಶಿ ಕಸಕ್ಕೆ ಮುಕ್ತಿ ದೊರಕಿಸಿಕೊಡುವ ಅಗತ್ಯವಿದೆ.

Facebook Comments

Sri Raghav

Admin