ಸಿಗರೇಟ್ ಸೇದುತ್ತಿದ್ದವರಿಗೆ ಬುದ್ದಿಹೇಳಿದವನನ್ನು ಕೊಚ್ಚಿ ಕೊಂದರು..!

ಈ ಸುದ್ದಿಯನ್ನು ಶೇರ್ ಮಾಡಿ

Bang-Murder--02

ಬೆಂಗಳೂರು, ಅ.1- ಬೆಳಗಿನ ಜಾವ ಸಾಗುತ್ತಿದ್ದ ಪಲ್ಲಕ್ಕಿ ಉತ್ಸವದ ವೇಳೆ ಗುಂಪು ಕಟ್ಟಿಕೊಂಡು ಸಿಗರೇಟ್ ಸೇದುತ್ತಿದ್ದವರಿಗೆ ಬುದ್ಧಿಮಾತು ಹೇಳಿದ ಯುವಕನನ್ನೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಶೋಕನಗರದ ಬಿ ಸ್ಟ್ರೀಟ್ ನಿವಾಸಿ ಹರೀಶ್ (32) ಕೊಲೆಯಾದ ದುರ್ದೈವಿ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪಲ್ಲಕ್ಕಿ ಉತ್ಸವ ಸಾಗುತ್ತಿತ್ತು. ಈ ವೇಳೆ ಮನೆಯಲ್ಲಿ ಮಲಗಿದ್ದ ಹರೀಶ್ ಎಚ್ಚರಗೊಂಡು ಪಲ್ಲಕ್ಕಿ ವೀಕ್ಷಿಸಲು ಮನೆಯಿಂದ ಹೊರಗೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ನಾಲ್ಕು ಮಂದಿ ಯುವಕರು ಗುಂಪು ಕಟ್ಟಿಕೊಂಡು ಸಿಗರೇಟ್ ಸೇದುತ್ತಿದ್ದರು. ಹರೀಶ್ ಇವರಿಗೆ ಬುದ್ಧಿವಾದ ಹೇಳಿದ್ದಾನೆ. ಇದರಿಂದ ಕೋಪಗೊಂಡ ನಾಲ್ವರು ಈತನ ಜತೆ ಜಗಳವಾಡಿ ಮಾತಿಗೆ ಮಾತು ಬೆಳೆದಿದೆ.  ತದನಂತರ ಅಲ್ಲಿಂದ ತೆರಳಿದ ಈ ನಾಲ್ವರು ಕೆಲ ಸಮಯದ ನಂತರ ಮತ್ತೆ ಕೆಲವರೊಂದಿಗೆ ಮಚ್ಚು ಹಾಗೂ ಮಾರಕಾಸ್ತ್ರಗಳೊಂದಿಗೆ ಬಂದು ಮನೆ ಮುಂದೆ ನಿಂತಿದ್ದಹರೀಶ್ ಮೇಲೆ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಇದನ್ನು ಗಮನಿಸಿದ ಫೋಷಕರು ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್‍ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಹರೀಶ್ ಮೃತಪಟ್ಟಿದ್ದಾರೆ. ಈ ಸಂಬಂಧ ಅಶೋಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಗಳಿಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin