ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯದಲ್ಲಿ ರೋಹಿತ್ ಮಾಡಿದ ದಾಖಲೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Rohit-Sharma--02

ನಾಗ್ಪುರ, ಅ.2- ಪೇಟಿಯಂನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಬ್ಯಾಟಿಂಗ್ ಮಾಡುವ ಭಾರತ ತಂಡವನ್ನು ಐಸಿಸಿ ರ್ಯಾಂಕಿಂಗ್‍ನಲ್ಲಿ ಟಾಪ್ 1 ಸ್ಥಾನಕ್ಕೆ ಏರಿಸಿದ ಕೀರ್ತಿಗೆ ಭಾಜನರಾದ ರೋಹಿತ್‍ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸರಣಿಯಲ್ಲಿ 5 ಪಂದ್ಯಗಳಿಂದ 1 ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 296 ರನ್ ಗಳಿಸಿ ಗರಿಷ್ಠ ಸ್ಕೋರರ್ ಬ್ಯಾಟ್ಸ್‍ಮನ್ ಎಂಬ ಖ್ಯಾತಿಗೆ ಭಾಜನರಾದರು. ಆಸ್ಟ್ರೇಲಿಯಾದ ಹಿಂದಿನ ಎರಡು ಸರಣಿಗಳಲ್ಲೂ ಕೂಡ ಟೀಂ ಇಂಡಿಯಾ ಪರ ರೋಹಿತ್‍ಶರ್ಮಾರೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಭಾರತದ ನೆಲದಲ್ಲಿ ಅತಿ ವೇಗದ 2000 ರನ್‍ಗಳನ್ನು ಗಳಿಸಿದ ಕೀರ್ತಿಗೆ ರೋಹಿತ್ ಭಾಜನರಾದರು. ಈ ಹಿಂದೆ ಸೌರವ್ ಗಂಗೂಲಿ (45 ಇನ್ನಿಂಗ್ಸ್) ಹಾಗೂ ಟೀಂ ಇಂಡಿಯಾದ ನಾಯಕ (46 ಇನ್ನಿಂಗ್ಸ್)ಗಳಲ್ಲಿ ಈ ಸಾಧನೆ ಮಾಡಿದರೆ ರೋಹಿತ್ ಕೇವಲ 42 ಪಂದ್ಯಗಳಲ್ಲಿ ಈ ಮೈಲುಗಲ್ಲನ್ನು ತಲುಪಿದ್ದಾರೆ.
ನಾಗ್ಪುರ ಪಂದ್ಯದಲ್ಲಿ 5 ಸಿಕ್ಸರ್‍ಗಳನ್ನು ಸಿಡಿಸುವ ಮೂಲಕ ಆಸ್ಟ್ರೇಲಿಯಾದ ವಿರುದ್ಧದ ಗರಿಷ್ಠ ಸಿಕ್ಸರ್ (63 ಸಿಕ್ಸರ್) ಸಿಡಿಸಿದ ಮೊದಲ ಆಟಗಾರರಾಗಿ ಕೂಡ ಗುರುತಿಸಿಕೊಂಡರು. ಇದಕ್ಕೂ ಮುನ್ನ ನ್ಯೂಜಿಲೆಂಡ್‍ನ ಬ್ರೆಡಂ ಮೆಕುಲುಂ (61 ಸಿಕ್ಸರ್) ಹಾಗೂ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (60 ಸಿಕ್ಸರ್) ಆಸೀಸ್ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ಬ್ಯಾಟ್ಸ್‍ಮನ್‍ಗಳಾಗಿದ್ದರು.

ಶತಕದ ಜೊತೆಯಾಟದಲ್ಲೂ ರೋಹಿತ್ ಶರ್ಮಾ ದಾಖಲೆ ನಿರ್ಮಿಸಿದ್ದಾರೆ, ಪ್ರಸ್ತುತ ಸರಣಿಯ ಮೂರು ಪಂದ್ಯಗಳಲ್ಲೂ ಆರಂಭಿಕ ಆಟಗಾರ ಅಜೆಂಕ್ಯಾ ರಹಾನೆಯೊಂದಿಗೆ ಸತತ 3 ಶತಕಗಳ ಜೊತೆಯಾಟವನ್ನು ನೀಡಿದ್ದೇ ಅಲ್ಲದೆ ನಾಯಕ ವಿರಾಟ್ ಕೊಹ್ಲಿಯೊಂದಿಗೆ 99 ರನ್‍ಗಳ ಜೊತೆಯಾಟದಲ್ಲೂ ಕೂಡ ರೋಹಿತ್ ಪಾಲ್ಗೊಂಡಿದ್ದರು. ಇದೇ ಅಲ್ಲದೆ ಆಸ್ಟ್ರೇಲಿಯಾದ ವಿರುದ್ಧ ಭಾರತ ತಂಡವು ಹಲವು ದಾಖಲೆಗಳನ್ನು ಬರೆದವು.

* ವಿರಾಟ್ ಕೊಹ್ಲಿ ನಾಯಕನಾದ ನಂತರ ಭಾರತ 6ನೆ ಸರಣಿ ಜಯ ಸಾಧಿಸಿತು. ಇದಕ್ಕೂ ಮುನ್ನ ಟೀಂ ಇಂಡಿಯಾ ಜಿಂಬಾಬ್ವೆ , ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್‍ಇಂಡೀಸ್, ಶ್ರೀಲಂಕಾ ತಂಡಗಳ ವಿರುದ್ಧ ವಿಜಯ ಸಾಧಿಸಿತ್ತು.
* ಯುವರಾಜ್ ಸಿಂಗ್ ನಂತರ 200 ಕ್ಕೂ ಹೆಚ್ಚು ರನ್ ಮತ್ತು 5 ಕ್ಕೂ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹಾರ್ದಿಕ್ ಪಾಂಡ್ಯಾ ಗುರ್ತಿಸಿಕೊಂಡಿದ್ದಾರೆ.
* ಹಾರ್ದಿಕ್ ಪಾಂಡ್ಯಾಗೆ ಮೊದಲ ಸರಣಿ ಶ್ರೇಷ್ಠ ಪ್ರಶಸ್ತಿ 22 ರನ್ ಮತ್ತು 6 ವಿಕೆಟ್
* ಆಸ್ಟ್ರೇಲಿಯಾ ತಂಡದ ವಿರುದ್ದ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸುವ ಮೂಲಕ ಅಜೆಂಕ್ಯಾ ರಹಾನೆ , ಮಾಸ್ಟರ್ ಬ್ಲಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ಇಷ್ಟೆಲ್ಲಾ ದಾಖಲೆಗಳನ್ನು ನಿರ್ಮಿಸಿರುವ ಭಾರತ ತಂಡದ ಈಗ ಅಕ್ಟೋಬರ್ 7 ರಂದು ರಾಂಚಿಯಲ್ಲಿ ನಡೆಯಲಿರುವ 3 ಟ್ವೆಂಟಿ-20 ಸರಣಿಯತ್ತ ನೆಟ್ಟಿದೆ.

Facebook Comments

Sri Raghav

Admin