ಗಾಂಜಾ ಜಾಲ ಬೆನ್ನಟ್ಟಿದ ಪೊಲೀಸರು : 6 ಮಂದಿಗೆ ನೋಟಿಸ್, ನೆರೆ ರಾಜ್ಯದಲ್ಲಿ ವಿಷ್ಣುಗಾಗಿ ತೀವ್ರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Vishnu--02

ಬೆಂಗಳೂರು,ಅ.2- ಖ್ಯಾತ ಉದ್ಯಮಿಯೊಬ್ಬರ ಮೊಮ್ಮಗನ ಕಾರು ಅಪಘಾತ ಸಂಭವಿಸಿದಾಗ ಬೆಂಜ್ ಕಾರಿನಲ್ಲಿ ದೊರೆತ ಡ್ರಗ್ಸ್ ಜಾಲ ಬೇಧಿಸಲು ಮುಂದಾಗಿದ್ದೇವೆ ಹಾಗೂ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಗೀತಾವಿಷ್ಣು ಬಂಧನಕ್ಕೂ ಕ್ರಮ ಕೈಗೊಂಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ತಿಳಿಸಿದ್ದಾರೆ.  ಕಾರಿನಲ್ಲಿ ದೊರೆತ ಗಾಂಜಾ ಎಲ್ಲಿಂದ ಸರಬರಾಜಾಗಿತ್ತು. ಈ ದಂಧೆಯ ಹಿಂದೆ ಯಾರ್ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಹೊಣೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಆಯುಕ್ತರು ಹೇಳಿದರು.

ಆಸ್ಪತ್ರೆಯಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿರುವ ಗೀತಾವಿಷ್ಣು ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಶಂಕೆ ಇರುವ ಹಿನ್ನೆಲೆಯಲ್ಲಿ ಪೊಲೀಸರ ಒಂದು ತಂಡ ನೆರೆಯ ರಾಜ್ಯಕ್ಕೆ ತೆರಳಿ ಆರೋಪಿಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದರು.

ನೋಟಿಸ್:

ಪ್ರತಿಷ್ಠಿತ ಆಂಧ್ರ ಮೂಲದ ಉದ್ಯಮಿಯೊಬ್ಬರ ಮೊಮ್ಮಗ ವಿಷ್ಣು ಚಲಾಯಿಸುತ್ತಿದ್ದ ಐಷಾರಾಮಿ ಕಾರು ಅಪಘಾತ ಹಾಗೂ ಘಟನೆಗೂ ಮುನ್ನ ವಿಷ್ಣುವಿನ ಜೊತೆ ಪಾರ್ಟಿ ಮಾಡಿದ್ದ ಖ್ಯಾತ ಚಿತ್ರನಟ ದೇವರಾಜ್ ಪುತ್ರ ಪ್ರಣವ್ ದೇವರಾಜ್ ಸೇರಿದಂತೆ ಆರು ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಈ ಸಂಜೆಗೆ ತಿಳಿಸಿದ್ದಾರೆ.  ಪ್ರಣವ್ ದೇವರಾಜ್, ಶಶಾಂಕ್, ಫೈಜಲ್, ಆದಿ ಸೇರಿದಂತೆ ಒಟ್ಟು ಆರು ಮಂದಿಯಲ್ಲಿ ಈಗಾಗಲೇ ಮೂರು ಮಂದಿ ಜಯನಗರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಉಳಿದವರು ಇಂದು ಸಂಜೆ ಅಥವಾ ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದರು.

ಬಿಬಿಎಂಪಿ ದೂರು:

ವಿಷ್ಣು ಕಾರು ಅಪಘಾತದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಲಾಗಿದ್ದ ಮಾದರಿ ಪಾದಚಾರಿ ಮಾರ್ಗ ಹಾನಿಗೊಳಗಾಗಿದ್ದು , ಆರೋಪಿಗಳಿಂದ ಅದರ ವೆಚ್ಚ ಕಟ್ಟಿಸಿಕೊಡುವಂತೆ ಯಡಿಯೂರು ವಾರ್ಡ್ ಇಂಜಿನಿಯರ್ ನಾಗರಾಜ್ ಅವರು ಜಯನಗರ ಕಾನೂನು ಮತ್ತು ಸಂಚಾರಿ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.

ಘಟನೆ ಹಿನ್ನೆಲೆ:

ಸೆ.28ರಂದು ಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಂಧ್ರ ಮೂಲದ ಪ್ರತಿಷ್ಠಿತ ಉದ್ಯಮಿಯೊಬ್ಬರ ಮೊಮ್ಮಗ ವಿಷ್ಣು ಎಂಬಾತ ಮಧ್ಯರಾತ್ರಿ 12.15ರಲ್ಲಿ ಸ್ನೇಹಿತರೊಂದಿಗೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಜಯನಗರ ಮುಖಾಂತರ ಹೋಗುತ್ತಿದ್ದರು.  ಈ ವೇಳೆ ಸೌತ್ ಎಂಡ್ ಸರ್ಕಲ್ ಬಳಿ ಹೋಗುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಇವರ ಕಾರು ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡಿತ್ತು. ಇದರಿಂದ ಆಕ್ರೋಶಗೊಂಡ ಓಮ್ನಿ ಕಾರಿನಲ್ಲಿದ್ದವರು ಹಾಗೂ ಬೆಂಜ್ ಕಾರಿನಲ್ಲಿದ್ದವರ ನಡುವೆ ಜಗಳವಾಡುತ್ತಿದ್ದಾಗ ಸಾರ್ವಜನಿಕರು ಸ್ಥಳಕ್ಕಾಗಮಿಸಿ ವಿಷ್ಣು ಹಾಗೂ ಮತ್ತವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದರು. ಸುದ್ದಿ ತಿಳಿದ ಜಯನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಸಾರ್ವಜನಿಕರನ್ನು ಕಳುಹಿಸಿದ್ದರು.

ಅಪಘಾತ ನಡೆಸಿದ ಮರ್ಸಿಡಿಸ್ ಬೆಂಜ್ ಕಾರನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ 100 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಈ ಮಾದಕ ವಸ್ತುವನ್ನು ಪೇಪರ್ನಲ್ಲಿ ಸುತ್ತಿಟ್ಟಿದ್ದನ್ನು ಗಮನಿಸಿದ ಪೊಲೀಸರು ಈ ವಿಷಯವನ್ನು ಜಯನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ತಿಳಿಸಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಸ್ಥಳಕ್ಕೆ ಬಂದು ಕಾರಿನಲ್ಲಿದ್ದ ಗಾಂಜಾವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Facebook Comments

Sri Raghav

Admin