ಪ್ರೀತಿಸಿ ಮದುವೆಯಾಗುವವರಿಗೊಂದು ಸೂಪರ್ ಸುದ್ದಿ ಇಲ್ಲಿದೆ..!

ಈ ಸುದ್ದಿಯನ್ನು ಶೇರ್ ಮಾಡಿ

Marriage-Certificate--02

ಬೆಂಗಳೂರು,ಅ.2- ಸಪ್ತಪದಿ ತುಳಿಯಲು ಮುಂದಾಗಿರುವ ಯುವ ಪ್ರೇಮಿಗಳಿಗೊಂದು ಸಂತಸದ ಸುದ್ದಿ. ಮದುವೆಯಾದರೆ ವಿವಾಹ ನೋಂದಣಿ ಮಾಡಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಇನ್ನು ಮುಂದೆ ನಿಮ್ಮನ್ನು ಕಾಡದು.  ಏಕೆಂದರೆ ಇನ್ನು ಮುಂದೆ ವಿವಾಹ ನೋಂದಣಿ ಮಾಡಿಸಿಕೊಳ್ಳುವ ನವದಂಪತಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಇದನ್ನು ಪಡೆಯಬಹುದು.  ಹೀಗಾಗಿ ಸಬ್‍ರಿಜಿಸ್ಟ್ರರ್ ಕಚೇರಿಗೆ ಅಲೆಯುವ ಪ್ರಮೇಯವೇ ಇರುವುದಿಲ್ಲ. ಕಾರಣ ನೀವು ಯಾವುದಾದರೊಂದು ಗುರುತಿನ ಚೀಟಿ ನೀಡಿದರೆ ಸಾಕು. ಆನ್‍ಲೈನ್‍ನಲ್ಲಿ ನೋಂದಣಿಯಾಗಿ ನಿಮ್ಮ ಮನೆ ಬಾಗಿಲಿಗೆ ನೋಂದಣಿ ಪತ್ರ ತಲುಪಲಿದೆ.

ರಾಜ್ಯ ಸರ್ಕಾರ ಇನ್ನು ಮುಂದೆ ಆನ್‍ಲೈನ್ ಮೂಲಕವೇ ವಿವಾಹ ನೋಂದಣಿ ಮಾಡಲಿದೆ. ಪ್ರಾರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಮಾತ್ರ ಇದು ಆರಂಭವಾಗಲಿದ್ದು , ಈ ವರ್ಷಾಂತ್ಯಕ್ಕೆ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.  ಕರ್ನಾಟಕ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಸಾರ್ವಜನಿಕರಿಗೆ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವ ಸದ್ದುದೇಶದಿಂದ ಆನ್‍ಲೈನ್ ಮೂಲಕ ವಿವಾಹ ನೋಂದಣಿಯನ್ನು ನೀಡಲಿದೆ.  ಸಾರ್ವಜನಿಕರು ಸರ್ಕಾರದ ಯಾವುದಾದರೂ ಯೋಜನೆಯ ಲಾಭ ಪಡೆಯಲು ಯಾವ ರೀತಿ ಅರ್ಜಿ ಹಾಕುತ್ತಾರೋ ಅದೇ ಮಾದರಿಯಲ್ಲಿ ಆನ್‍ಲೈನ್‍ನಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದರೆ ಸಾಕು 3ರಿಂದ 4 ದಿನದೊಳಗೆ ನಿಮ್ಮ ಮನೆ ಬಾಗಿಲಿಗೆ ಇದು ತಲುಪಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಧು-ವರರು ಕಡ್ಡಾಯವಾಗಿ ಸಬ್‍ರಿಜಿಸ್ಟ್ರಾರ್ ಇಲ್ಲವೇ ತಹಸೀಲ್ದಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರೀಯ ಕಾನೂನು ಆಯೋಗ ನಿರ್ದೇಶನ ನೀಡಿತ್ತು. ಭವಿಷ್ಯದಲ್ಲಿ ಉಂಟಾಗಬಹುದಾದ ತೊಂದರೆಯಿಂದ ಪಾರಾಗಲು ಇದು ಅನುಕೂಲವಾಗಲಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು.  ಆದರೆ ವಿವಾಹ ನೋಂದಣಿ ಪತ್ರ ಪಡೆಯಲು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ನೂರೆಂಟು ತಕರಾರುಗಳು ಉಂಟಾಗುತ್ತಿದ್ದವು. ಒಂದಲ್ಲೊಂದು ನೆಪ ಹೇಳಿ ಮುಂದೂಡುವ ಇಲ್ಲವೆ ಸತಾಯಿಸುತ್ತಿದುದು ಸರ್ವೆ ಸಾಮಾನ್ಯವಾಗಿತ್ತು.

ಇದನ್ನು ತಪ್ಪಿಸಲು ಮುದ್ರಾಂಕ ಇಲಾಖೆ ಅನ್‍ಲೈನ್‍ನಲ್ಲೇ ವಧು-ವರರು ಅರ್ಜಿ ಸಲ್ಲಿಸಿದರೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ. ಇದಕ್ಕಾಗಿ ನಾವು ಆಧಾರ್‍ಕಾರ್ಡ್, ಗುರುತಿನ ಚೀಟಿ, ಚಾಲನಾ ಪರವಾನಗಿ(ಡಿಎಲ್) ಸೇರಿದಂತೆ ಇಬ್ಬರು ಸಾಕ್ಷಿಧಾರರ ಹೆಸರನ್ನು ಸೂಚಿಸಿದರೆ ಸಾಕು.  ಮೊದಲು ಬೆಂಗಳೂರಿನ ಎಲ್ಲ ಸಬ್‍ರಿಜಿಸ್ಟ್ರರ್ ಕಚೇರಿಗಳಲ್ಲಿ ಇದು ಪ್ರಾರಂಭವಾಗಲಿದೆ. ಡಿ.31ರೊಳಗೆ ರಾಜ್ಯದೆಲ್ಲೆಡೆ ಆರಂಭವಾಗಲಿದ್ದು , ಕಚೇರಿ ಕದ ಬಡಿಯುವ ತಾಪತ್ರಯ ತಪ್ಪಿದಂತಾಗುತ್ತದೆ.

Facebook Comments

Sri Raghav

Admin