ಬಹುಮತ ಬಂದರೆ ಮಾತ್ರ ಆಡಳಿತ ನಡೆಸುತ್ತೇವೆ, ಇಲ್ಲದಿದ್ದರೆ ವಿಪಕ್ಷದಲ್ಲಿ ಕೂರುತ್ತೇವೆ : ಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--002

ಬೆಂಗಳೂರು, ಅ.2- ನಮಗೆ ಸಂಪೂರ್ಣ ಬಹುಮತ ಬಂದರೆ ಆಡಳಿತ ನಡೆಸುತ್ತೇವೆ. ಇಲ್ಲದಿದ್ದರೆ ವಿಪಕ್ಷದಲ್ಲಿ ಕೂರುತ್ತೇವೆ. ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ ಟಿಕೆಟ್ ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರಮೋದಿಯವರು ಮನ್ ಕಿ ಬಾತ್ ಮಾಡುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಮ್ ಕಿ ಬಾತ್ ಮೂಲಕ ಸಡ್ಡು ಹೊಡೆಯುತ್ತಿದ್ದಾರೆ. ಸರ್ಕಾರಗಳು ತಮ್ಮ ಪಕ್ಷಗಳನ್ನು ಮಾರ್ಕೆಟ್ ಮಾಡುತ್ತಿವೆ. ಜನತೆಯ ಹಣವನ್ನು ದುಂದುವೆಚ್ಚ ಮಾಡಿ ಜಾಹೀರಾತು ನೀಡುತ್ತಿವೆ. ಜನರ ಬಡತನ ಕಡಿಮೆಯಾಗಿಲ್ಲ. ಅವರ ಸಾಧನೆ ಕೇವಲ ಹತ್ತನೆ ಒಂದು ಭಾಗ ಮಾತ್ರ. ಅವಳು ಹೇಳಿಕೊಂಡಷ್ಟು ಅಭಿವೃದ್ಧಿ ಮಾಡಿಲ್ಲ ಎಂದು ದೇವೇಗೌಡರು ತಿರುಗೇಟು ನೀಡಿದರು.

ರಾಜಕೀಯದಲ್ಲಿ ಏಳು-ಬೀಳು ಸಹಜ. ಅದನ್ನು ಮೆಟ್ಟಿನಿಂತು ರಾಜಕಾರಣ ಮಾಡಿಕೊಂಡು ನಾವು ಹೋಗುತ್ತಿದ್ದೇವೆ. ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಉಳಿಸಿಕೊಂಡು ಹೋಗುವುದು ಕಷ್ಟ. ಗಾಂಧೀಜಿಯವರ ಮಾರ್ಗದರ್ಶನದಲ್ಲಿ ನಾವು ಹಲವಾರು ಏಳು-ಬೀಳುಗಳೊಂದಿಗೆ ನಡೆಯುತ್ತಿದ್ದೇವೆ ಎಂದು ಹೇಳಿದರು.
ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಅಲ್ಲಿನ ಜನರು ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಕೊಟ್ಟಿಲ್ಲ. ಕೇರಳದಲ್ಲಿ ಕಾಂಗ್ರೆಸ್‍ಅನ್ನು ಹಿಂದೆ ಸರಿಸಲು ಎಡಪಕ್ಷಗಳು ಪ್ರಯತ್ನಿಸುತ್ತಿವೆ. ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಆರ್ಥಿಕ ಶಕ್ತಿ ನಡುವೆ ನಾವು ನಿಲ್ಲುವುದು ಕಷ್ಟವಾಗಿದೆ. ಜನ ಈ ಬಗ್ಗೆ ತೀರ್ಮಾನಿಸಬೇಕು ಎಂದು ದೇವೇಗೌಡರು ಹೇಳಿದರು.

ಪ್ರತಿ ವರ್ಷದಂತೆ ಗಾಂಧಿ ಜಯಂತಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸುತ್ತಿದ್ದೇವೆ. ಗಾಂಧೀಜಿಯವರು ಸತ್ಯ, ಅಹಿಂಸೆ ಪ್ರತಿಪಾದಿಸಿದವರು. ನಾವು ಕಾಂಗ್ರೆಸ್ ಹಿನ್ನೆಲೆಯಿಂದ ಬಂದವರು. ಆದರೆ, ನಾವು ಯಾರನ್ನೂ ಅನುಕರಿಸುವುದಿಲ್ಲ ಎಂದು ಹೇಳಿದರು.   ಕೇರಳದ ನೀರಾವರಿ ಸಚಿವ ಮಥಾಯ್, ವಿಧಾನ ಪರಿಷತ್ ಸದಸ್ಯರಾದ ರಮೇಶ್‍ಬಾಬು, ಟಿ.ಎ.ಶರವಣ, ಬೆಂಗಳೂರು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಕಾಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin