ನಮ್ಮದು ಬರಿ ಮಾತಲ್ಲ ‘ಕಾಮ್ ಕಿ ಬಾತ್’

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiah-b-02

ಬೆಂಗಳೂರು, ಅ.2- ಪ್ರಧಾನಿ ನರೇಂದ್ರಮೋದಿಯವರ ಮನ್ ಕಿ ಬಾತ್‍ಗೆ ಪರ್ಯಾಯವಾಗಿ ನಾವು ಕಾಮ್ ಕಿ ಬಾತ್ ಯೋಜನೆ ರೂಪಿಸಿದ್ದೇವೆ. ನಮ್ಮದು ಕಾರ್ಯಾನುಷ್ಠಾನದ ಮಾತು. ಕೇವಲ ಮನದ ಮಾತಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಗಾಂಧಿ ಜಯಂತಿ ಅಂಗವಾಗಿ ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡಿ ನಾವು ಕಾಮ್ ಕಿ ಬಾತ್ ಪ್ರಾರಂಭಿಸುತ್ತಿದ್ದೇವೆ. ಕಾರ್ಯಾನುಷ್ಠಾನ ಮಾಡಿರುವ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ತಾವು ಕಾಮ್ ಕಿ ಬಾತ್ ಎಂದು ಹಿಂದಿ ಬಳಸುತ್ತಿದ್ದೀರ ಎಂಬ ಸುದ್ದಿಗಾರರ ಪ್ರಶ್ನೆಗೆ ವಿಮರ್ಶಾತ್ಮಕವಾಗಿಯೇ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸ್, ಕಾರ್ ಇವುಗಳಿಗೆ ಕನ್ನಡದ ಪರ್ಯಾಯ ಪದವೇನು ಎಂದು ಪ್ರಶ್ನಿಸಿದರು. ಕುವೆಂಪು ಅವರು ಕೆಲವು ಇಂಗ್ಲಿಷ್ ಪದಗಳು ಅರ್ಥ ಸಿಗದಿದ್ದರೆ ಉ ಕಾರ ಸೇರಿಸಿ ಎಂದು ತಿಳಿಸಿದ್ದರು ಎಂಬುದನ್ನು ವಿವರಿಸಿದರು. ಅದೇ ರೀತಿ ನಾವು ಮನ್ ಕಿ ಬಾತ್‍ಗೆ ಪರ್ಯಾಯವಾಗಿ ಕಾಮ್ ಕಿ ಬಾತ್ ಪ್ರಾರಂಭಿಸಿದ್ದೇವೆ ಎಂದರು.

ಗಾಂಧಿ ಕೇವಲ ನಮ್ಮ ದೇಶಕ್ಕೆ ನಾಯಕರಲ್ಲ. ಅವರು ವಿಶ್ವ ನಾಯಕರು. ಗಾಂಧಿಯನ್ನು ಮರೆತರೆ ನಮಗೆ ಭವಿಷ್ಯವಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನಾವೆಲ್ಲ ಸಂಭ್ರಮದಲ್ಲಿದ್ದೆವು. ಆದರೆ, ಮಹಾತ್ಮ ಗಾಂಧೀಜಿಯವರು ನೋವಿನಲ್ಲಿದ್ದವರಿಗೆ ಸಾಂತ್ವನ ಹೇಳುತ್ತಿದ್ದರು. ಯುದ್ಧ ಇಲ್ಲದೆ ಯಾವುದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಆದರೆ, ಸತ್ಯ, ಅಹಿಂಸೆ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಏಕೈಕ ವ್ಯಕ್ತಿ ಮಹಾತ್ಮ ಗಾಂಧೀಜಿಯವರು. ಅವರ ಮಾರ್ಗದರ್ಶನ, ಆದರ್ಶಗಳು ನಮಗೆಲ್ಲ ಪ್ರೇರಣೆಯಾಗಿರಬೇಕು. ಒಬ್ಬ ಮತಾಂಧನಿಂದ ಅವರು ಬಲಿಯಾಗಿದ್ದು ದುರದೃಷ್ಟಕರ. ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಂಧೀಜಿಯವರ ತತ್ವಾದರ್ಶಗಳು ಅಗತ್ಯ ಮತ್ತು ಅನಿವಾರ್ಯವಾಗಿವೆ ಎಂದು ಅವರು ಹೇಳಿದರು.

ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ಮೌಲ್ಯಯುತ ವ್ಯಕ್ತಿತ್ವ ಹೊಂದಿದ್ದವರು. ಜೈ ಜವಾನ್-ಜೈ ಕಿಸಾನ್ ಮೂಲಕ ಕೃಷಿಕ ರೈತರನ್ನು ಹುರಿದುಂಬಿಸಿದರು. ಪ್ರಾಮಾಣಿಕ ರಾಜಕಾರಣಿಗಳಲ್ಲಿ ಮುಂಚೂಣಿ ಸಾಲಿನಲ್ಲಿ ನಿಲ್ಲುವವರು ಎಂದು ಹೇಳಿದರು. ನನ್ನ ಆರೋಗ್ಯ ವಿಚಾರಣೆಗೆ ಬರುವುದಕ್ಕಿಂತ ಜನಸಾಮಾನ್ಯರ ಆರೋಗ್ಯ ವಿಚಾರಣೆಗೆ ಮುಖ್ಯಮಂತ್ರಿಗಳು ತೆರಳಬೇಕಿತ್ತೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದರು.   ಸೌಜನ್ಯಕ್ಕೆ ಭೇಟಿ ನೀಡಿದ್ದೆ. ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin