ಕಂಗೊಳಿಸುತ್ತಿದೆ ನೋಡಾ ಕ್ಯಾಲಸನಹಳ್ಳಿ ಕೆರೆ 

ಈ ಸುದ್ದಿಯನ್ನು ಶೇರ್ ಮಾಡಿ

Park--01

– ರಮೇಶ್ ಪಾಳ್ಯ

ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ… ಈ ಹಾಡು ಎಂತಹ ಸೋಮಾರಿಯನ್ನೂ ಬಡಿದೆಬ್ಬಿಸಬಲ್ಲದು. ಆದರೆ,   ಹಾಡು ಗುನುಗಿಕೊಂಡು ಸುಮ್ಮನಾಗುವವರೇ ಹೆಚ್ಚು. ಇದಕ್ಕೆ ಅಪವಾದವೆಂಬಂತೆ ಸನ್‍ಸೇರಾ ಖಾಸಗಿ ಸಂಸ್ಥೆಯೊಂದು ಕೇವಲ  ನಾಲ್ಕು ತಿಂಗಳಿನಲ್ಲೇ ಗಬ್ಬು ನಾರುತ್ತಿದ್ದ ಕೆರೆಗೆ ಕಾಯಕಲ್ಪ ನೀಡುವ ಮೂಲಕ ಮಾದರಿ ಸಂಸ್ಥೆಯಾಗಿ ಹೊರ ಹೊಮ್ಮಿದೆ.

ಹೌದು. ಕೆಲ ದಿನಗಳ ಹಿಂದೆ ಜಿಗಣಿ ಸಮೀಪದ ಕ್ಯಾಲಸನಹಳ್ಳಿ ಕೆರೆಗೆ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳ ತ್ಯಾಜ್ಯ ನೀರು ಹರಿದು ಸಂಪೂರ್ಣ ಮಲಿನಗೊಂಡಿತ್ತು. ಗಿಡಗಂಟಿಗಳಿಂದ ತುಂಬಿ ಹೋಗಿದ್ದು,  ಎಲ್ಲಿ ನೋಡಿದರೂ ಕಸದ ರಾಶಿ ಕಣ್ಣಿಗೆ ರಾಚುತ್ತಿತ್ತು. ಈ ಕೆರೆಯಲ್ಲಿ  ದನಕರುಗಳು ನೀರು ಕುಡಿಯಲು ಸಾಧ್ಯವಾಗುತ್ತಿರಲಿಲ್ಲ. ಸುತ್ತಮುತ್ತಲಿನ ನಿವಾಸಿಗಳು ಬಟ್ಟೆ ತೊಳೆಯಲು ಸಾಧ್ಯವಾಗದೆ ಪರಿತಪಿಸುವಂತಾಗಿತ್ತು. ಇಂತಹ ಹೀನಾಯ ಸ್ಥಿತಿಗೆ ತಲುಪಿದ್ದ ಕ್ಯಾಲಸನಹಳ್ಳಿ ಕೆರೆ ಇಂದು ನಳನಳಿಸುತ್ತಿದೆ.  ಮಾತ್ರವಲ್ಲ , ಒಂದು ಸುಂದರ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.  ಸುತ್ತಮುತ್ತಲ ಜನರಿಗೆ ಆಧಾರ ಸ್ತಂಭವಾಗಿದೆ. ಇದಕ್ಕೆಲ್ಲ ಮೂಲ ಕಾರಣ ಸನ್‍ಸೇರಾ ಇಂಜಿನಿಯರಿಂಗ್ ಸಂಸ್ಥೆ.

WhatsApp Image 2017-10-03 at 10.21.54 AM

ಮಿಯಾವಾಕಿ ಅರಣ್ಯ:

ಬರಡಾಗಿದ್ದ  ಕ್ಯಾಲಸನಹಳ್ಳಿ ಕೆರೆಯನ್ನು ಹಸಿರುಮಯ ಮಾಡುವ ಉದ್ದೇಶದಿಂದ ಕೆರೆಯ ಅಂಗಳದಲ್ಲಿ ಮಿಯಾವಾಕಿ ಅರಣ್ಯ ಘಟಕ ಸ್ಥಾಪಿಸಿ 68 ಜಾತಿಯ ಸಾವಿರಾರು ಗಿಡ, ಬಳ್ಳಿಗಳನ್ನು ಪೆÇೀಷಿಸಲಾಗುತ್ತಿದೆ. ಅರಣ್ಯ ಬೆಳೆಸುವುದರಲ್ಲಿ ನಾವು 20 ವರ್ಷ ಹಿಂದೆ ಉಳಿದಿರುವ ಹಿನ್ನೆಲೆಯಲ್ಲಿ ಮಿಯಾವಾಕಿ ಅರಣ್ಯ ಬೆಳೆಸಿ ತ್ವರಿತವಾಗಿ ಅಂದರೆ 10ಪಟ್ಟು ಹೆಚ್ಚು ದಟ್ಟವಾದ ಅರಣ್ಯ ಬೆಳೆಸುತ್ತಿದ್ದೇವೆ ಎಂದರು.

WhatsApp Image 2017-10-03 at 10.20.01 AM

ಐದು ನಡುಗಡ್ಡೆಗಳು:

ನೀರಿನ ಶುದ್ಧೀಕರಣ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಕೆರೆಯಲ್ಲಿ ಐದು ನಡುಗಡ್ಡೆಗಳನ್ನು ನಿರ್ಮಾಣ ಮಾಡಿದ್ದೇವೆ. ಈ ನಡುಗಡ್ಡೆಗಳಿಗೆ ಯಾರೂ ಪ್ರವೇಶ ಮಾಡುವಂತಿಲ್ಲ. ಅವುಗಳನ್ನು ಕೇವಲ ವಿವಿಧ ಬಗೆಯ ಪಕ್ಷಿಗಳಿಗೆ ಸೀಮಿತವಾಗಿಡಲಾಗಿದೆ.

ಇಲ್ಲಿ ಆಲದಮರ ಮತ್ತಿತರ ಹಣ್ಣು ಬಿಡುವ ಗಿಡಗಳನ್ನು ಬೆಳೆಸಲಾಗಿದ್ದು, ದೇಶ-ವಿದೇಶಗಳ ಪಕ್ಷಿಗಳು ಇಲ್ಲಿಗೆ ಬಂದು ನೆಲೆಸುವುದರಿಂದ ಭವಿಷ್ಯದಲ್ಲಿ ಈ ಕೆರೆ ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತನೆಗೊಳ್ಳಲಿದೆ.

ಒತ್ತುವರಿ ತೆರವು:

36 ಎಕರೆಯಲ್ಲಿ ವಿಸ್ತಾರಗೊಂಡಿದ್ದ ಕ್ಯಾಲಸನಹಳ್ಳಿ ಕೆರೆ ಸುಮಾರು 15 ಎಕರೆಯಷ್ಟು ಒತ್ತುವರಿಯಾಗಿತ್ತು. ಒತ್ತುವರಿ ತೆರವು ಕಾರ್ಯವನ್ನು ಸನ್‍ಸೇರಾ ಸಂಸ್ಥೆಯೇ ನಿರ್ವಹಿಸಿದೆ. ಮುಂದೆ ಯಾರೂ ಒತ್ತುವರಿ ಮಾಡದಂತೆ ಕೆರೆಯನ್ನು ಸಂರಕ್ಷಿಸಲಾಗಿದೆ. ನೀರು ಇದ್ದರೆ ಭವಿಷ್ಯ ಎಂಬುದರ ಬಗ್ಗೆ ಸುತ್ತಮುತ್ತಲಿನ ರೈತರಿಗೆ ಅರಿವು ಮೂಡಿಸಲಾಗಿದೆ.

ಸಮಿತಿ ರಚನೆ: ಕೆರೆಯ ಸಂರಕ್ಷಣೆಗಾಗಿ ರೈತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು,   ಈ ಸಮಿತಿ ಕಾಲಕಾಲಕ್ಕೆ ಸಭೆ ನಡೆಸಿ ಕೆರೆ ರಕ್ಷಣೆಗೆ ಒತ್ತು ನೀಡಲಿದೆ.

WhatsApp Image 2017-10-03 at 10.19.53 AM

ಸರ್ಕಾರದಿಂದ ಕರೆ: ಕೇವಲ ನಾಲ್ಕು ತಿಂಗಳಿನಲ್ಲಿ ಮಲಿನಗೊಂಡಿದ್ದ  ಕೆರೆಯನ್ನು ಒಂದು ಸುಂದರ ತಾಣವನ್ನಾಗಿ ಪರಿವರ್ತನೆ ಮಾಡಿರುವ ಸನ್‍ಸೇರಾ ಸಂಸ್ಥೆಯ ಕಾರ್ಯ ಸರ್ಕಾರದ ಗಮನಕ್ಕೂ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆರೆ ಅಭಿವೃದ್ಧಿ ಕುರಿತು ಮಾಹಿತಿ ನೀಡುವಂತೆ ಸನ್‍ಸೇರಾ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದು, ಸಂಸ್ಥೆಯ ಸಿಬ್ಬಂದಿಗಳು ಶೀಘ್ರದಲ್ಲೇ ಸಿಎಂ ಅವರನ್ನು ಭೇಟಿಯಾಗಿ ಕೆರೆ ಅಭಿವೃದ್ಧಿಯ ಮಾಹಿತಿ ನೀಡಲಿದ್ದಾರೆ.

ಮಾದರಿಯಾಗಲಿ: ಬೆಂಗಳೂರಿಗೆ ಯಾವುದೇ ನದಿ ಮೂಲ ಇಲ್ಲದಿರುವುದರನ್ನು ಮನಗಂಡಿದ್ದ ನಾಡಪ್ರಭು ಕೆಂಪೇಗೌಡರು ಆ  ಕಾಲದಲ್ಲೇ 400ಕ್ಕೂ ಹೆಚ್ಚು ಕೆರೆಕುಂಟೆಗಳನ್ನು ನಿರ್ಮಿಸಿ ಮಾದರಿಯಾಗಿದ್ದರು.  ನಗರ ಬೆಳೆದಂತೆ ಪಟ್ಟಭದ್ರಹಿತಾಸಕ್ತಿಗಳು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದರಿಂದ ಇಂದು ಬೆರಳೆಣಿಕೆಯಷ್ಟು ಕೆರೆಗಳು ಕಂಡುಬರುವುದಿಲ್ಲ.

WhatsApp Image 2017-10-03 at 10.20.45 AM

ಇಷ್ಟೆಲ್ಲಾ ಆದರೂ ಆಡಳಿತ ನಡೆಸುವವರು ಕೆರೆ ಉಳಿಸುವ ಘೋಷಣೆ ಮಾಡುತ್ತಾರೆಯೇ ಹೊರತು ನೈಜ ಪ್ರಯತ್ನ ನಡೆಸದಿರುವುದು ದುರಂತವೇ ಸರಿ. ಸಂಬಂಧಪಟ್ಟವರು ಈಗಲಾದರೂ ಸನ್‍ಸೇರಾ ಸಂಸ್ಥೆಯ ಕಾರ್ಯವನ್ನು ಮಾದರಿಯನ್ನಾಗಿಟ್ಟುಕೊಂಡು ಅಳಿದುಳಿದಿರುವ ಕೆರೆಗಳನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಕೊಡುಗೆಯನ್ನಾಗಿ ನೀಡಲಿ ಎಂಬುದೇ ಈ ಲೇಖನದ ಉದ್ದೇಶ.

ಪರಿಸರಕ್ಕೆ ಆದ್ಯತೆ..

ಕೆರೆ ಹಾಳಾಗುವುದನ್ನು ನೋಡಿಕೊಂಡು ಸುಮ್ಮನಾಗಲು ಮನಸ್ಸು ಬಾರಲಿಲ್ಲ. ಹೀಗಾಗಿ ಸನ್‍ಸೇರಾ ಸಂಸ್ಥೆವತಿಯಿಂದ ಪ್ರತಿಷ್ಠಾನ ಮಾಡಿಕೊಂಡು ಕೆರೆ ಉಳಿಸಲು ನಾವು ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ ಎನ್ನುತ್ತಾರೆ ಪ್ರತಿಷ್ಠಾನದ ಸದಸ್ಯ ಆನಂದ್ ಮಲ್ಲಿಗೌಡ. ಕೆರೆಗೆ ಕಾಯಕಲ್ಪ ನೀಡುವುದು ಮಾತ್ರ ನಮ್ಮ ಉದ್ದೇಶವಲ್ಲ. ಪ್ರತಿಯಾಗಿ ನೀರು ಶುದ್ಧೀಕರಣಕ್ಕೂ  ಆದ್ಯತೆ ನೀಡಿದ್ದೇವೆ. ಪರಿಸರ ಕಾಪಾಡುವ ಉದ್ದೇಶದಿಂದ ಕೆರೆಯ ಸುತ್ತಮುತ್ತ ಗಿಡಮರಗಳನ್ನು ನೆಟ್ಟು ಪರಿಸರ ಕಾಪಾಡಲು ಮನಸ್ಸು ಮಾಡಿದ್ದೇವೆ.

ಸುತ್ತಮುತ್ತಲಿನ ಜನರು ವಾಯುವಿಹಾರ  ಮಾಡಲು ಅನುಕೂಲ ವಾಗುವಂತೆ ಕೆರೆಯ ಸುತ್ತಮುತ್ತ 3.50 ಕಿ.ಮೀ. ಸುತ್ತಳತೆಯ ವಾಕಿಂಗ್ ಟ್ರ್ಯಾಕ್ ನಿರ್ಮಿಸಿದ್ದೇವೆ. ಪ್ರಾಣಿ, ಪಕ್ಷಿಗಳಿಗೆ ಆಹಾರ ಸಿಗುವ ಉದ್ದೇಶದಿಂದ  ಹಣ್ಣು ಬಿಡುವ ಗಿಡಗಳು ಸೇರಿದಂತೆ 18 ಸಾವಿರ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಇದರಲ್ಲಿ ಆಯುರ್ವೇದ ಗಿಡಗಳನ್ನೂ ನೆಡಲಾಗಿದೆ ಎಂದು ಮಲ್ಲೀಗೌಡ ತಿಳಿಸಿದ್ದಾರೆ.

WhatsApp Image 2017-10-03 at 10.26.22 AM

ಸದ್ದಿಲ್ಲದೆ ಸುದ್ದಿ ಮಾಡಿತು : 

ಕೈಗಾರಿಕಾ ಪ್ರದೇಶದ ಸಮೀಪವೇ ಇರುವ ಕ್ಯಾಲಸನಹಳ್ಳಿ ಕೆರೆ ಗಬ್ಬು ನಾರುತ್ತಿದ್ದರೂ ಯಾರೊಬ್ಬರೂ ಗಮನಹರಿಸಿರಲಿಲ್ಲ. ಆದರೆ, ಇಂತಹ ಅವ್ಯವಸ್ಥೆಯನ್ನು ನೋಡಿಕೊಂಡು ಸುಮ್ಮನೆ ಕೂರದ ಸನ್‍ಸೇರಾ ಸಂಸ್ಥೆ, ಸದ್ದಿಲ್ಲದೆ ಮಹತ್ಕಾರ್ಯದ ಮೂಲಕ ಸುದ್ದಿ ಮಾಡಿ ಇದೀಗ ದೇಶದ ಗಮನ ಸೆಳೆದಿದೆ.  ಸಿಎಸ್‍ಆರ್ ನಿಧಿಯ ಒಂದು ಕೋಟಿ ರೂ. ವೆಚ್ಚದಲ್ಲಿ ಕೆರೆಗೆ ಕಾಯಕಲ್ಪ ನೀಡಲು ಮನಸ್ಸು ಮಾಡಿದ  ಸಂಸ್ಥೆಯ ಸಿಬ್ಬಂದಿ ಕೇವಲ ನಾಲ್ಕು ತಿಂಗಳಿನಲ್ಲೇ ಇಡೀ ಕೆರೆಯ ಚಿತ್ರಣವನ್ನೇ ಬದಲಿಸಿದೆ.

ಸರ್ಕಾರವೇ ಕೆರೆಗೆ ಕಾಯಕಲ್ಪ ನೀಡಲು ಮುಂದಾಗಿದ್ದರೆ 5ರಿಂದ 10 ಕೋಟಿ ಹಣ ಖರ್ಚು ಮಾಡಬೇಕಾಗಿತ್ತು. ಹಣ ಹೆಚ್ಚಾದರೂ ಕಾಮಗಾರಿ ಮುಗಿಯಲು ಕನಿಷ್ಟ ಒಂದು ವರ್ಷವಾದರೂ ಬೇಕಿತ್ತು. ಸರ್ಕಾರದವರು ಹೆಚ್ಚೆಂದರೆ  2ರಿಂದ 3 ಅಡಿ ಹೂಳು ಎತ್ತುತ್ತಿದ್ದರು.

ಆದರೆ, ಸನ್‍ಸೇರಾ ಸಿಬ್ಬಂದಿ ಕೇವಲ ನಾಲ್ಕು ತಿಂಗಳಿನಲ್ಲೇ ಕೆರೆಗೆ ಕಾಯಕಲ್ಪ ನೀಡಿರುವುದಲ್ಲದೆ, 5ರಿಂದ 10 ಅಡಿ ಹೂಳೆತ್ತಿದೆ. ಕೆರೆ ಒತ್ತುವರಿ ದಾರರನ್ನು ತೆರವುಗೊಳಿಸಿದೆ. ಹೀಗಾಗಿ ಇಂದು ಕ್ಯಾಲಸನಹಳ್ಳಿ ಕೆರೆ 36 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದ್ದು, ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಕೆರೆ ತುಂಬಿ ತುಳುಕುತ್ತಿದ್ದು, ನೋಡುಗರ ಕಣ್ಮನಸೆಳೆಯುತ್ತಿದೆ.

ವರ್ಷಕ್ಕೆ ಎರಡು ಬೆಳೆ :

ಕೆರೆಯಲ್ಲಿ ಸುಮಾರು 10 ಅಡಿ ಹೂಳು ತೆಗೆದಿರುವುದರಿಂದ 32ಪಟ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಸುತ್ತಮುತ್ತಲಿನ ರೈತರು ವರ್ಷಕ್ಕೆ ಎರಡರಿಂದ ಮೂರು ಬೆಳೆ ಬೆಳೆದರೂ ಈಗಿರುವ ನೀರು ಕನಿಷ್ಠ ಮೂರು ವರ್ಷ ಬಳಸಬಹುದು. ತುಂಬಿ ತುಳುಕುತ್ತಿರುವ ಕೆರೆಯಿಂದ ಸುತ್ತಮುತ್ತಲ ಜಮೀನಿನಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಮಲಿನ ನೀರು ಕೆರೆ ಸೇರದಂತೆ ಕ್ರಮ ವಹಿಸಲಾಗಿದ್ದು, ಕೆರೆ ಸುತ್ತಮುತ್ತ ರಾಜಕಾಲುವೆ ನಿರ್ಮಾಣ ಮಾಡಿರುವುದರಿಂದ ಕ್ಯಾಲಸನಹಳ್ಳಿ ಕೆರೆ ಮುಂದಿನ ಕಾಲಕ್ಕೂ ನಳನಳಿಸುತ್ತಲೇ ಇರುತ್ತದೆ.

 

Facebook Comments

Sri Raghav

Admin