ಕಾಂಗ್ರೆಸ್ ಗೆ ನಡುಕ ಹುಟ್ಟಿಸಲು ಬಿಜೆಪಿ ರಣತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

BJP-Vs-Congress

ಬೆಂಗಳೂರು, ಅ.3- ರಾಜ್ಯ ಸರ್ಕಾರದ ವಿರುದ್ಧ ನವೆಂಬರ್ 2ರಂದು  ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯನ್ನು ಯಶಸ್ವಿಯಾಗಿ ನಡೆಸುವಂತೆ ಕೇಂದ್ರ ನಾಯಕರು ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ಕೊಟ್ಟಿದ್ದಾರೆ. ಸರ್ಕಾರದ ವಿರುದ್ಧ ಇದು ರಣಕಹಳೆ ಮೊಳಗಿಸುವ ಕಾರ್ಯಕ್ರಮವಾಗಲಿರುವುದರಿಂದ ಪರಿವರ್ತನಾ ಯಾತ್ರೆಗೆ ಯಾವುದೇ ರೀತಿ ಅಡಚಣೆ ಉಂಟಾಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ದೇಶಿಸಿದ್ದಾರೆ.

ಪರಿವರ್ತನಾ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಆಗಮಿಸಲಿರುವುದರಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಸರ್ಕಾರದ ವಿರುದ್ಧ ಅಂದೇ ಚುನಾವಣೆಗೆ ಕಹಳೆ ಮೊಳಗಿಸಬೇಕೆಂದು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ರಾಜ್ಯ ಉಸ್ತುವಾರಿ ಮುರಳೀಧರರಾವ್, ಸಹ ಉಸ್ತುವಾರಿ ಪಿಯುಷ್ ಗೋಯಲ್ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೇ ಖುದ್ದು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ಅವರ ಜತೆ ರಾಜ್ಯ ಘಟಕದ ನಾಯಕರಾದ ಅಶೋಕ್, ಲಿಂಬಾವಳಿ, ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು, ಪಕ್ಷದ ಪದಾಧಿಕಾರಿಗಳು ಕೈ ಜೋಡಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಬೈಕ್: ನವೆಂಬರ್ 2ರಂದು ನಡೆಯಲಿರುವ ಪರಿವರ್ತನಾ ಯಾತ್ರೆಗೆ ರಾಜ್ಯದ ಸುಮಾರು 55 ಸಾವಿರ ಬೂತ್ ಸಮಿತಿಗಳನ್ನು ರಚನೆ ಮಾಡಲಾಗಿದೆ. ಪ್ರತಿ ಬೂತ್‍ನಿಂದ ಮೂವರು ಕಾರ್ಯಕರ್ತರನ್ನು ಕಡ್ಡಾಯವಾಗಿ ಕರೆತರುವಂತೆ ಸೂಚಿಸಲಾಗಿದೆ.

55 ಸಾವಿರ ಬೂತ್ ಸಮಿತಿಗಳಿಂದ 1,65,000 ದ್ವಿಚಕ್ರ ವಾಹನಗಳು ಆಗಮಿಸಲಿವೆ. ಇದರಲ್ಲಿ 1 ಬೈಕ್‍ಗೆ ಇಬ್ಬರಂತೆ ಅಂದರೆ ಸರಿಸುಮಾರು 3,55,000 ಬೂತ್ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು ಸೇರಿದಂತೆ ಒಟ್ಟು 5 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಜಮಾಯಿಸಬೇಕೆಂದು ತಾಕೀತು ಮಾಡಿದೆ. ಕೇಂದ್ರ ವರಿಷ್ಠರಿಂದಲೇ ಸೂಚನೆ ಬಂದಿರುವ ಕಾರಣ ಯಡಿಯೂರಪ್ಪ ಈಗಾಗಲೇ ತಮ್ಮ ಕೆಲವು ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಪರಿವರ್ತನಾ ಯಾತ್ರೆಗೆ ಕೈಗೊಳ್ಳಬೇಕಾದ ಸಕಲ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ.

ಬಳ್ಳಾರಿ ಮೀರಿಸುವಂತಹ ಕಾರ್ಯಕ್ರಮ: ಈ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೂ ಅಂದಿನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೃಹತ್ ಪಾದಯಾತ್ರೆ ನಡೆಸಿದ್ದರು. ಕೊನೆಯ ದಿನ ಗಣಿ ನಾಡಿನಲ್ಲಿ ಕಾಂಗ್ರೆಸ್ ಯಾವ ರೀತಿ ಬಿಜೆಪಿ ಸರ್ಕಾರದ ವಿರುದ್ಧ ಅಬ್ಬರಿಸಿತ್ತೋ ಅದೇ ಮಾದರಿಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟಕ್ಕಿಳಿಯುವಂತೆ ರಾಜ್ಯ ನಾಯಕರಿಗೆ ಕೇಂದ್ರದವರು ಸೂಚನೆ ಕೊಟ್ಟಿದ್ದಾರೆಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಅಂದು ಬಳ್ಳಾರಿಯಲ್ಲಿ ಸಮಾವೇಶ ನಡೆಸಿದ ಪರಿಣಾಮವೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಇದೇ ಮಾದರಿಯಲ್ಲಿ ಸರ್ಕಾರದ ಭ್ರಷ್ಟಾಚಾರ, ವೈಫಲ್ಯ, ಕಾನೂನು ಸುವ್ಯವಸ್ಥೆ ಕುಸಿತ ಸೇರಿದಂತೆ ಹತ್ತು-ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಅಣಿಯಾಗಬೇಕು. ಪರಿವರ್ತನಾ ಯಾತ್ರೆ ಕಾಂಗ್ರೆಸ್‍ಗೆ ನಡುಕ ಹುಟ್ಟಿಸುವಂತಿರಬೇಕು ಎಂದು ವರಿಷ್ಠರು ಸಲಹೆ ಮಾಡಿದ್ದಾರೆ.

ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಬೇಕೋ ಇಲ್ಲವೆ ತುಮಕೂರಿನಲ್ಲಿ ನಡೆಸಬೇಕೊ ಎಂಬುದರ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ನವೆಂಬರ್ 1ರಂದು ರಾಜ್ಯೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ 2ರಂದು ಪರಿವರ್ತನಾ ಯಾತ್ರೆಯನ್ನು ಕಲ್ಪತರು ನಾಡು ತುಮಕೂರು ಇಲ್ಲವೆ ಬೆಂಗಳೂರಿನಲ್ಲಿ ನಡೆಸಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಅಂತಿಮವಾಗಿ ಪ್ರಧಾನಿ ನರೇಂದ್ರಮೋದಿಯವರ ರಾಜ್ಯ ಪ್ರವಾಸ ಅಧಿಕೃತಗೊಂಡ ನಂತರ ಯಾವ ಸ್ಥಳದಲ್ಲಿ ಪರಿವರ್ತನಾ ಯಾತ್ರೆ ನಡೆಯಲಿದೆ ಎಂಬುದು ಗೊತ್ತಾಗಲಿದೆ.

Facebook Comments

Sri Raghav

Admin