ಗೋವಾ ಕನ್ನಡಿಗರ ಪುನರ್ ವಸತಿಗೆ ಆರ್ಥಿಕ ನೆರವಿನ ಭರವಸೆ ನೀಡಿದ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಬೆಂಗಳೂರು, ಅ.3-ಗೋವಾ ಸರ್ಕಾರದ ದೌರ್ಜನ್ಯಕ್ಕೆ ತುತ್ತಾಗಿ ಮನೆ ಕಳೆದುಕೊಂಡ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸಲು ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.  ಇತ್ತೀಚೆಗೆ ಗೋವಾ ಸರ್ಕಾರ ಒತ್ತುವರಿ ತೆರವು ನೆಪದಲ್ಲಿ ಕನ್ನಡಿಗರ ನೂರಾರು ಮನೆಗಳನ್ನು ನೆಲಸಮಗೊಳಿಸಿತ್ತು. ಈ ಸಂಬಂಧ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬೂರಾವ್ ಚಿಂಚನಸೂರ್ ಅವರು ಗೋವಾಗೆ ತೆರಳಿ. ಕನ್ನಡಿಗರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿದ್ದು, ಇಂದು ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಚಿಂಚನಸೂರ್ ಗೋವಾದ ಕನ್ನಡಿಗರ ಪರಿಸ್ಥಿತಿಯ ಬಗ್ಗೆ ವಿವರವಾದ ವರದಿ ನೀಡಿದರು.
ಕೆಳವರ್ಗದ ಬಡವರೇ ಹೆಚ್ಚಾಗಿರುವ ಗೋವಾ ಕನ್ನಡಿಗರನ್ನು ವಕಲ್ಲೆಬ್ಬಿಸಲಾಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಕರ್ನಾಟಕ ಸರ್ಕಾರ ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕನ್ನಡಿಗರಿಗೆ ರಕ್ಷಣೆ ನೀಡುವಲ್ಲಿ ಮುತುವರ್ಜಿ ವಹಿಸಬೇಕೆಂದು ಚಿಂಚನಸೂರ್ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಗೋವಾ ಸರ್ಕಾರ ಜಾಗ ಕೊಟ್ಟರೆ ಕನ್ನಡಿಗರಿಗೆ ಮನೆ ಕಟ್ಟಿಕೊಡಲು ಆರ್ಥಿಕ ಸಹಕಾರ ನೀಡಲು ಸಿದ್ದವಿದ್ದು, ಈ ಬಗ್ಗೆ ಸಚಿವರ ನಿಯೋಗವನ್ನು ಗೋವಾಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಅವರು, ಮುಖ್ಯಮಂತ್ರಿ ಅವರು ಗೋವಾ ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರಿಗೆ ಪುನರ್ ವಸತಿ ಕಲ್ಪಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದರು.

Facebook Comments

Sri Raghav

Admin