ಭಾರಿ ಮಳೆಗೆ ಮನೆಯ ಗೋಡೆ ಕುಸಿದು ತಾಯಿ-ಮಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Huirisave--02

ಹಿರೀಸಾವೆ, ಅ.4- ಕಳೆದ 2-3 ದಿನಗಳಿಂದ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ತಾಯಿ, ಮಗಳು ಸ್ಥಳದಲ್ಲೆ ಮೃತಪಟ್ಟಿದ್ದು ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಲ್ಲಿನ ಒಂಟಿಕೊಪ್ಪಲು ಬಡಾವಣೆ (ಕಾಲೇಜು ಬಡಾವಣೆ) ನಿವಾಸಿಗಳಾದ ಸಣ್ಣಮ್ಮ (ತೋಪಮ್ಮ) (75) ಇವರ ಮಗಳು ಸುಜಾತ (38) ಸ್ಥಳದಲ್ಲೇ ಮೃತಪಟ್ಟಿದ್ದು ಸುಜಾತರ ಮಗಳು ರಾಜೇಶ್ವರಿ (10) ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ನಿನ್ನೆ ಬೆಳಿಗ್ಗೆ ಸುಮಾರು 9.30 ಗಂಟೆ ಸಮಯದಲ್ಲಿ ಮೂವರೂ ತಮ್ಮ ವಾಸದ ಮನೆಯಲ್ಲಿ ಬೆಳಗಿನ ತಿಂಡಿ ತಿನ್ನುತ್ತಿದ್ದ ಸಮಯದಲ್ಲಿ ಪಕ್ಕದ ಸುಶೀಲಮ್ಮ ಬೇಕರಿ ಕಾಳಪ್ಪಅವರ ವಾಸದ ಮನೆಯ ಗೋಡೆ ಇವರ ಮನೆಯ ಮೇಲೆ ಬಿದ್ದು ಎರಡೂ ಮನೆಯ ಗೋಡೆಗಳು ತಾಯಿ ಮತ್ತು ಮಗಳ ಮೇಲೆ ಬಿದ್ದಿದೆ. ಗೋಡೆ ಬಿದ್ದ ಶಬ್ದ ಮತ್ತು ಇಬ್ಬರೂ ಸಹಾಯಕ್ಕಾಗಿ ಕೂಗಿಕೊಂಡಾಗ ಅಕ್ಕಪಕ್ಕದವರು ಸ್ಥಳಕ್ಕಾಗಮಿಸಿದಾಗ ಇವರಿಬ್ಬರೂ ಗೋಡೆ ಮಧ್ಯೆ ಸಿಲುಕಿ ಸಂಪೂರ್ಣ ಮುಚ್ಚಿಹೋಗಿದ್ದರು.

10 ವರ್ಷ ರಾಜೇಶ್ವರಿ ಸ್ವಲ್ಪ ದೂರದಲ್ಲಿದ್ದು ಗೋಡೆ ಇಟ್ಟಿಗೆ ಮಣ್ಣು ಇವಳಿಗೂ ಬಿದ್ದಿದ್ದು ಗಾಯಗಳಾಗಿವೆ, ತಕ್ಷಣ ಇವಳನ್ನು ಆಸ್ಪತ್ರೆಗೆ ಸಾಗಿಸಿದ್ದು ತಾಯಿ ಮತ್ತು ಮಗಳ ಮೇಲೆ ಬಿದ್ದಿದ್ದ ಇಟ್ಟಿಗೆ ಮತ್ತು ಮಣ್ಣನ್ನು ತೆಗೆಯುವಷ್ಟರಲ್ಲಿ ಇಬ್ಬರೂ ಮೃತಪಟ್ಟರುತ್ತಾರೆ. ಸುಜಾತಳನ್ನು ಅಮೃತೂರು ಹೋಬಳಿಯ ಹಳೆಯೂರು ಗ್ರಾಮದ ನಾಗರಾಜು ಎಂಬುವರಿಗೆ ಮದುವೆ ಮಾಡಿದ್ದು ಇವರಿಗೆ ಇಬ್ಬರು ಮಕ್ಕಳು. ರಾಜೇಶ್ ಮತ್ತು ರಾಜೇಶ್ವರಿ. ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ದಸರಾ ರಜೆಯಲ್ಲಿ ಸುಜಾತ ಮಗಳೊಂದಿಗೆ ತಾಯಿ ಮನೆಗೆ ಬಂದಿದ್ದರು. ತಾಯಿ ಮನೆಯಲ್ಲಿ ವಿಧಿಯಾಟಕ್ಕೆ ಇವರಿಬ್ಬರೂ ಬಲಿಯಾಗಿದ್ದಾರೆ.

ಮೃತ ದೇಹಗಳು ಸರಕಾರಿ ಆಸ್ಪತ್ರೆಯಲ್ಲಿದ್ದು ಸಂಬಂಧಿಕರು, ಅಕ್ಕಪಕ್ಕದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು ನೋಡುವವರ ಕರುಳು ಕಿತ್ತುಬರುವಂತಿತ್ತು. ಸ್ಥಳಕ್ಕೆ ಚನ್ನರಾಯಪಟ್ಟಣ ತಹಸೀಲ್ದಾರ್ ಸೋಮಶೇಖರ್. ನಾಡಕಚೇರಿಯ ಉಪತಹಸಿಲ್ದಾರ್ ಮೋಹನ್, ಕಂದಾಯ ವೃತ್ತ ನಿರೀಕ್ಷಕ ರಂಗೇಗೌಡ, ಕಂದಾಯ ಕಾರ್ಯದರ್ಶಿ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Facebook Comments

Sri Raghav

Admin