ಐಟಿ ವಿರುದ್ಧ ಎಸಿಬಿ ಅಸ್ತ್ರ : ಸೇಡು ತೀರಿಸಿಕೊಳ್ಳಲು ಮುಂದಾಯಿತೇ ರಾಜ್ಯ ಸರ್ಕಾರ..?

ಈ ಸುದ್ದಿಯನ್ನು ಶೇರ್ ಮಾಡಿ

IT-vs-ACB--01

ಬೆಂಗಳೂರು, ಅ.5- ಕಾಳಧನಿಕರ ಬಣ್ಣ ಬಯಲು ಮಾಡುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಕಣ್ಣು ಬಿದ್ದಿರುವುದು ಈ ಎರಡು ಸಂಸ್ಥೆಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಐಟಿ ಅಧಿಕಾರಿಗಳು ನಡೆಸುತ್ತಿರುವ ದಾಳಿಯ ಹಿಂದೆ ಕೇಂದ್ರ ಸರ್ಕಾರದ ಕುಮ್ಮಕ್ಕಿದೆ. ಹೀಗಾಗಿ ಕೇವಲ ಕಾಂಗ್ರೆಸ್ ನಾಯಕರನ್ನೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರಿಯಾಗಿರಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪ್ರತಿಯಾಗಿ ತಮ್ಮ ಬಂಡವಾಳ ಬಯಲು ಮಾಡುತ್ತಿರುವ ಐಟಿ ಇಲಾಖೆ ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳನ್ನು ಛೂ ಬಿಡಲು ರಾಜ್ಯಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸ್ವತಃ ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕ ಬಾಲಕೃಷ್ಣ ಅವರೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಅವರಿಗೆ ಬರೆದಿರುವ ಪತ್ರದಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.  ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಮ್ಮ ಇಲಾಖೆ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ನಮಗೆ ದೊರೆತಿದೆ.   ಐಟಿ ಇಲಾಖೆ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಅಧಿಕಾರ ಎಸಿಬಿಗೆ ಇಲ್ಲ. ಭ್ರಷ್ಟಾಚಾರದ ಆರೋಪ ಕೇಳಿ ಬಂದರೆ ಐಟಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಇಲ್ಲವೇ, ಸಿಬಿಐಗೆ ದೂರು ನೀಡಬೇಕು ಎಂದು ಬಾಲಕೃಷ್ಣ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೆಲ ಪ್ರಮುಖ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ ಮೂವರು ಹಿರಿಯ ಐಟಿ ಅಧಿಕಾರಿಗಳ ನಿವಾಸಗಳ ಮೇಲೆ ಎಸಿಬಿ ದಾಳಿ ನಡೆಸಲು ಮುಂದಾಗಿದೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ಎಚ್ಚರಿಕೆ ನಂತರ ಎಚ್ಚೆತ್ತುಕೊಂಡಿರುವ ಬಾಲಕೃಷ್ಣ ಅವರು ದತ್ತ ಅವರಿಗೆ ಪತ್ರ ಬರೆದಿರುವುದು ಇದೀಗ ಬಹಿರಂಗಗೊಂಡಿದೆ.

1988ರ ಕಾಯ್ದೆ ಪ್ರಕಾರ ರಚನೆಯಾಗಿರುವ ಎಸಿಬಿ ಯಾವುದೇ ತನಿಖೆ ನಡೆಸುವಾಗ ಮತ್ತೊಂದು ಸಂಸ್ಥೆ ನಮ್ಮ ಕಾರ್ಯಕ್ಕೆ ಅಡ್ಡಿಪಡಿಸಬಾರದು ಎಂಬ ನಿಯಮವಿದೆ. ಹೀಗಾಗಿ ನಮ್ಮ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಯಾರು ಏನೇ ಹೇಳಿದರೂ ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತೇವೆ ಎನ್ನುತ್ತಿವೆ ಎಸಿಬಿ ಮೂಲಗಳು.

ಬಾಲಕೃಷ್ಣ ಅವರು ಪತ್ರದ ನಂತರವೂ ತಮ್ಮ ಕಾರ್ಯವನ್ನು ಮುಂದುವರೆಸಿರುವ ಎಸಿಬಿ ಅಧಿಕಾರಿಗಳು, ಐಟಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಸಂಬಂಧಿತ ದಾಖಲೆಗಳನ್ನು ಕಲೆ ಹಾಕುವ ಕಾರ್ಯವನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳ ಮೇಲಿನ ದಾಳಿಯ ನೇತೃತ್ವವನ್ನು ಸ್ವತಃ ಎಸಿಬಿ ಎಡಿಜಿಪಿ ಎಂ.ಎನ್.ರೆಡ್ಡಿ ವಹಿಸಿಕೊಂಡಿದ್ದು, ಯಾವುದೇ ಸಂದರ್ಭದಲ್ಲೂ ಐಟಿ ಅಧಿಕಾರಿಗಳ ನಿವಾಸಗಳ ಮೇಲೆ ದಿಢೀರ್ ದಾಳಿ ನಡೆಸಿದರೂ ಅಚ್ಚರಿಪಡುವಂತಿಲ್ಲ.

Facebook Comments

Sri Raghav

Admin