ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಬಿಜೆಪಿಯಿಂದ ಲಹರಿ ವೇಲು ಕಣಕ್ಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Jameer-Lahari-Ahamad--023

ಬೆಂಗಳೂರು, ಅ.5- ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಹೊಸ ಮುಖಗಳಿಗೆ ಆದ್ಯತೆ ನೀಡಲು ಮುಂದಾಗಿದೆ. ಇದರ ಭಾಗವಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಲಹರಿ ವೇಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ. ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕರು ಜೆಡಿಎಸ್‍ನ ಜಮೀರ್ ಅಹಮದ್ ಖಾನ್. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಜಮೀರ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧತೆ ಆರಂಭಿಸಿದ್ದಾರೆ.

ಲಹರಿ ವೇಲು ಎಂದೇ ಖ್ಯಾತರಾಗಿರುವ ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ವೇಲು ಆ.28ರಂದು ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಚಾಮರಾಜಪೇಟೆಯಲ್ಲಿ ಚಿರಪರಿಚಿತರಾಗಿರುವ ಲಹರಿ ವೇಲು ಅವರನ್ನು ಜಮೀರ್ ಅಹಮದ್ ಖಾನ್ ಎದುರು ಚುನಾವಣೆಗೆ ನಿಲ್ಲಿಸುವ ಬಗ್ಗೆ ಬಿಜೆಪಿ ವಯಲದಲ್ಲಿ ಚಿಂತನೆ ನಡೆದಿದೆ. ಜಮೀರ್ ಅಹಮದ್ ಖಾನ್ ವಿರುದ್ಧ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. ಇಬ್ಬರು ಮುಸ್ಲಿಂ ಅಭ್ಯರ್ಥಿಗಳ ನಡುವೆ ಲಹರಿ ವೇಲು ಅವರನ್ನು ಕಣಕ್ಕಿಳಿಸಿದರೆ, ಮತ ವಿಭಜನೆಯಾಗಿ ಜಯಗಳಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಚಾಮರಾಜಪೇಟೆ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಾರಿಸಿರುವ ಜಮೀರ್ ಅಹಮದ್ ಖಾನ್ ಅವರನ್ನು ಈ ಬಾರಿ ಸೋಲಿಸಬೇಕು ಎಂಬುದು ಬಿಜೆಪಿಯ ಯೋಚನೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಮೀರ್ ಅಹಮದ್ 56,339 ಮತಗಳನ್ನು ಪಡೆದು ಜಯಗಳಿಸಿದ್ದರು. ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ 1994ರ ನಂತರ ಗೆಲುವು ಕಂಡಿಲ್ಲ. 2013ರ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಬಿ.ವಿ.ಗಣೇಶ್ 17,720 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಲು ಪಕ್ಷ ತಂತ್ರ ರೂಪಿಸುತ್ತಿದೆ.

ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿರುವ ಜಮೀರ್ ಅಹಮದ್ ಖಾನ್ ಸೋಲಿಸಲು ಪ್ರಬಲ ಅಭ್ಯರ್ಥಿಯ ಅಗತ್ಯವಿದೆ. ಆದ್ದರಿಂದ, ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಆದ್ದರಿಂದ, ತಿಂಗಳ ಹಿಂದಷ್ಟೇ ಬಿಜೆಪಿ ಸೇರಿರುವ ಲಹರಿ ವೇಲು ಅವರಿಗೆ ಟಿಕೆಟ್ ನೀಡುವ ಆಲೋಚನೆ ಇದೆ.
ಆ.28ರಂದು ಬಿಜೆಪಿ ಸೇರಿರುವ ಲಹರಿ ವೇಲು ಅವರು ಪಕ್ಷದಲ್ಲಿ ಸಕ್ರಿಯವಾಗುತ್ತಿದ್ದಾರೆ. ಈಗಾಗಲೇ ನಾಗ್ಪುರಕ್ಕೆ ಭೇಟಿ ನೀಡಿ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ, ಲಹರಿ ವೇಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ.
ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಜಮೀರ್ ಸೋಲಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಂತ್ರ ರೂಪಿಸಿದ್ದಾರೆ. ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಲು ಗೌಡರು ನಿರ್ಧರಿಸಿದ್ದಾರೆ. ಆದರೆ, ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ.

Facebook Comments

Sri Raghav

Admin