ಹಳ್ಳ ಹಿಡಿಯಿತೇ ‘ಸರ್ವರಿಗೂ ಆರೋಗ್ಯ ಭಾಗ್ಯ’ ಯೋಜನೆ..!

ಈ ಸುದ್ದಿಯನ್ನು ಶೇರ್ ಮಾಡಿ

Arogya-Bhagay--02

ಬೆಂಗಳೂರು, ಅ.5- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸರ್ವರಿಗೂ ಆರೋಗ್ಯ ಭಾಗ್ಯ ಯೋಜನೆ ಪ್ರಾರಂಭದಲ್ಲೇ ಹಳ್ಳ ಹಿಡಿದಿದೆ. ಪ್ರತಿಯೊಬ್ಬರಿಗೂ ಉತ್ತಮವಾದ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಸರ್ವರಿಗೂ ಆರೋಗ್ಯ ಭಾಗ್ಯ ಯೋಜನೆ ಪ್ರಾರಂಭಿಸಿತ್ತು. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಕರೆಯಲಾಗಿದ್ದ ಟೆಂಡರನ್ನು ರದ್ದುಪಡಿಸಲಾಗಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ ನಿನ್ನೆಯಷ್ಟೇ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಭಾರೀ ಪ್ರಮಾಣದ ಗೋಲ್‍ಮಾಲ್ ನಡೆದಿದೆ ಎಂದು ಆರೋಪಿಸಿದ್ದರು. ಇದೀಗ ಸರ್ಕಾರ ಟೆಂಡರ್ ರದ್ದುಪಡಿಸಿರುವುದು ಪ್ರತಿಪಕ್ಷಗಳ ಆರೋಪವನ್ನು ಪುಷ್ಠೀಕರಿಸಿದಂತಿದೆ.

ನಾವು ಕರೆದಿದ್ದ ಟೆಂಡರ್‍ನಲ್ಲಿ ಕೆಲವು ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಇದನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದೇವೆ. ಮುಂದಿನ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ನಾವು ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ. ಯೂನಿವರ್ಸಲ್ ಹೆಲ್ತ್‍ಕಾರ್ಡ್ ಯೋಜನೆಯಡಿ ಕಾರ್ಡ್ ವಿತರಣೆ ಗುತ್ತಿಗೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದರು.

ಎಂಟು ದಿನಗಳ ಕಾಲಾವಕಾಶ ನೀಡಿ ಟೆಂಡರ್ ಪ್ರಕ್ರಿಯೆ ಮೂಲಕ ಕಾರ್ಡ್ ವಿತರಣೆಗೆ ನೂರಾರು ಕೋಟಿ ಖರ್ಚು ಮಾಡುತ್ತಿರುವುದು ಸರಿಯಲ್ಲ, ಈ ಗುತ್ತಿಗೆಯಲ್ಲಿ ಅಕ್ರಮಗಳು ನಡೆದಿವೆ. ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಿ ಆಧಾರ್‍ಕಾರ್ಡ್ ಬಳಸುವಂತೆ ಆಗ್ರಹಿಸಿದ್ದರು. ತಲಾ 30ರೂ. ವೆಚ್ಚದಲ್ಲಿ ಕಾರ್ಡ್ ವಿತರಣೆ ಮಾಡುವ ಅಗತ್ಯವಿಲ್ಲ. ಸರ್ಕಾರ ಬೇರೊಂದು ಕಾರ್ಡ್ ವಿತರಣೆ ಮಾಡುತ್ತಿರುವುದರ ಹಿಂದೆ ನೂರಾರು ಕೋಟಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಸರ್ಕಾರದ ಎಲ್ಲಾ ಯೋಜನೆಗಳಿಗೂ ಆಧಾರ್‍ಕಾರ್ಡ್ ಬಳಸುತ್ತಿರುವಾಗ ಇದಕ್ಕೂ ಏಕೆ ಬಳಸಬಾರದು ಎಂದು ಪ್ರಶ್ನಿಸಿದ್ದರು. ಇದೀಗ ಸರ್ಕಾರ ಸಂಪೂರ್ಣ ಟೆಂಡರ್ ರದ್ದುಪಡಿಸಿರುವುದರಿಂದ ಪುನಃ ಟೆಂಡರ್ ಪ್ರಕ್ರಿಯೆಯನ್ನು ಕರೆಯಬೇಕಾಗಿದೆ.

ಏನಿದು ಯೋಜನೆ:

ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಉತ್ತಮವಾದ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿತ್ತು. ನ.1ರಿಂದ ಈ ಯೋಜನೆ ಆರಂಭವಾಗಬೇಕಿತ್ತು.  ಕಳೆದ ಸೆಪ್ಟೆಂಬರ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಡ್ ವಿತರಣೆ ಮಾಡಲು ಟೆಂಡರ್ ಕರೆದಿತ್ತು. ಈ ಟೆಂಡರ್‍ನಲ್ಲೇ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ವಾಸನೆಬಂದಿತ್ತು. ಸರ್ಕಾರ ದಿಢೀರನೆ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಿರುವುದು ಮತ್ತೆ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

Facebook Comments

Sri Raghav

Admin