ಐಟಿ ಮೇಲೆ ಎಸಿಬಿ ದಾಳಿ ಮಾಡಲು ಕಾನೂನು ತಜ್ಞರ ಅಭಿಪ್ರಾಯ ಪಡೀತಾರಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

ramalinga

ಬೆಂಗಳೂರು, ಅ.6- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಮಾಡಬೇಕೇ, ಇಲ್ಲವೇ ಎಂಬ ಗೊಂದಲಗಳಿವೆ. ಇದನ್ನು ಬಗೆಹರಿಸಿಕೊಳ್ಳಲು ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ವಿಧಾನಸೌಧದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭ್ರಷ್ಟ್ರಾಚಾರ ನಿಗ್ರಹ ದಳ ತನ್ನ ಕಾರ್ಯವ್ಯಾಪ್ತಿಯಲ್ಲೇ ಕೆಲಸ ಮಾಡುತ್ತಿದೆ. ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂಬಂಧ ಈವರೆಗೂ ಯಾವುದೇ ಸಭೆಗಳು ನಡೆದಿಲ್ಲ. ಆದರೆ, ನಿನ್ನೆಯಿಂದ ವಿಷಯ ಚರ್ಚೆಯಾಗುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಧಿಕಾರ ಇದೆಯೇ ಎಂಬ ಬಗ್ಗೆ ಗೊಂದಲಗಳಿವೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಟೆಲಿಫೋನ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರಬಹುದು ಎಂಬ ಅನುಮಾನದಿಂದ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದಾಗ ರಾಜ್ಯ ನಾಯಕರಿಗೆ ಹೆಚ್ಚುವರಿ ಕೆಲಸ ನೀಡಿದ್ದು, ವಾರಕ್ಕೊಮ್ಮೆಯಾದರೂ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಅವರ ವಿರುದ್ಧ ಏನಾದರೊಂದು ಆರೋಪ ಮಾಡುತ್ತಲೇ ಇರಿ ಎಂದು ಸೂಚಿಸಿದ್ದಾರೆ. ಹಾಗಾಗಿ ಬಿಜೆಪಿಯವರು ಆರೋಪ ಮಾಡುತ್ತಾರೆ. ನಾವು ತಾನೇ ಏನು ಮಾಡಲು ಸಾಧ್ಯ ಎಂದರು.

ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ನಮ್ಮ ದೂರವಾಣಿ ಸಂಖ್ಯೆಯಗಳು ಟ್ಯಾಪ್ ಆಗಿರುವ ಬಗ್ಗೆ ಬಹಳ ಹಿಂದೆಯೇ ನಾನು ಹೇಳಿಕೆ ನೀಡಿದ್ದೆ. ಈಗ ಆದಾಯ ತೆರಿಗೆ ಅಧಿಕಾರಿಯೊಬ್ಬರು ಎಸಿಬಿ ದಾಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಪತ್ರ ಬರೆದಿರುವುದು ನೋಡಿದರೆ ಕೇಂದ್ರ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡುತ್ತಿರಬಹುದು. ಅಲ್ಲಿಂದ ಈ ಮಾಹಿತಿ ಸೋರಿಕೆ ಮಾಡಿ ಚರ್ಚೆ ಆರಂಭಿಸರಬಹುದು ಎಂಬ ಅನುಮಾನ ಬರುತ್ತಿದೆ. ಆದರೆ, ನಾವು ಎಸಿಬಿಯನ್ನು ಯಾವುದೇ ಕಾರಣಕ್ಕೂ ದುರಪಯೋಗ ಪಡಿಸಿಕೊಳ್ಳುವುದಿಲ್ಲ. ಆ ಸಂಸ್ಥೆ ಕಾರ್ಯವ್ಯಪ್ತಿಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಶೀಘ್ರ ಗೌರಿ ಹಂತಕರ ಬಂಧನ:

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಶೀಘ್ರವೇ ಆರೋಪಿಗಳನ್ನು ಬಂಧಿಸಲಿದೆ ಎಂಬ ವಿಶ್ವಾಸವಿದೆ. ಸದ್ಯದಲ್ಲಿ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ನಾವು ಏನನ್ನೂ ಹೇಳುವುದಿಲ್ಲ. ಸುಳಿವು ಸಿಕ್ಕಿರುವ ಬಗ್ಗೆ, ಆರೋಪಿಗಳ ಬಂಧನದ ಬಗ್ಗೆ ಮತ್ತೊಂದು ಬಾರಿ ಮಾತನಾಡುತ್ತೇನೆ. ಸದ್ಯಕ್ಕೆ ಈ ವಿಷಯದ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ ಎಂದರು. ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಮಬಂಧಪಟ್ಟಂತೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ಅದು ಒಂದೇ ಕೋಮಿನ ಎರಡು ಗುಂಪುಗಳ ನಡುವಿನ ಮಾರಾಮಾರಿ. ಆ ಕೊಲೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇತರೆ ರಾಜ್ಯಗಳನ್ನು ನೋಡಿದರೆ ನಮ್ಮಲ್ಲಿ ಶಾಂತಿ, ಸುವ್ಯವಸ್ಥೆ ಉತ್ತಮವಾಗಿದೆ. ಮಂಗಳೂರಿನಲ್ಲಿ ಇತ್ತೀಚೆಗೆ ಸ್ವಲ್ಪ ತೊಂದರೆಯಾಗಿದ್ದು, ಅದನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.  ಮಳೆ ಅನಾಹುತಗಳ ಬಗ್ಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಅವರು ಸಚಿವರ ಸಭೆ ನಡೆಸಿದ್ದಾರೆ. ಶೀಘ್ರವೇ ಸಮಸ್ಯೆಗೆ ಪರಿಹಾರ ದೊರಕಿಸಿ ಮಳೆ ನೀರು ಮತ್ತು ರಸ್ತೆ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ. ತಾವು ಮತ್ತು ಸಚಿವ ಜಾರ್ಜ್ ಅವರು ಜತೆಯಾಗಿ ಕೆಲಸ ಮಾಡುವುದಾಗಿ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Facebook Comments

Sri Raghav

Admin