ಬೆಂಗಳೂರಿಗರಿಗೆ ಬೋಟ್ ಭಾಗ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Boat--01
ಬೆಂಗಳೂರು, ಅ.6-ಹಲವಾರು ಭಾಗ್ಯಗಳನ್ನು ನೀಡಿ ಜನಮಾನಸ ಗೆದ್ದಿರುವ ಕಾಂಗ್ರೆಸ್ ಸರ್ಕಾರ ದೀಪಾವಳಿ ಹಬ್ಬದ ಉಡುಗೊರೆಯಾಗಿ ಬೆಂಗಳೂರು ನಾಗರಿಕರಿಗೆ ಬೋಟ್ ಭಾಗ್ಯ ನೀಡಲು ಮುಂದಾಗಿದೆ..!ಏನಪ್ಪಾ.. ಇದು ಬೋಟ್ ಭಾಗ್ಯ ಎಂದು ಹುಬ್ಬೇರಿಸಬೇಡಿ.. ಇದು ಕೇವಲ ಕಾಲ್ಪನಿಕವಷ್ಟೆ. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಗಳು ಕೆರೆಯಂತಾಗಿ ವಾಹನ ಸಂಚಾರವೇ ದುಸ್ತರವಾಗಿ ಪರಿಣಮಿಸಿದೆ.

ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ನಗರದ ಈ ಪರಿಸ್ಥಿತಿಯನ್ನು ಹೋಗಲಾಡಿಸುವ ಭರವಸೆಯನ್ನು ನೀಡುತ್ತಿದೆಯೇ ಹೊರತು ಸಮಸ್ಯೆ ಬಗೆಹರಿಸುವ ಗಂಭೀರ ಪ್ರಯತ್ನವನ್ನೇ ಮಾಡಿಲ್ಲ. ನಿನ್ನೆ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಇಡೀ ನಗರ ಕೆರೆಯಂತಾಗಿ ಪರಿವರ್ತನೆಗೊಂಡಿತ್ತು. ಇದರಿಂದ ಸಾರ್ವಜನಿಕರು ಬೆಂಗಳೂರಿನ ಸಹವಾಸವೇ ಬೇಡ ಎನ್ನುವಷ್ಟು ಬೇಸತ್ತಿದ್ದಾರೆ.

ಜನರ ಈ ಮನೋಭಾವನೆಯನ್ನು ಅರಿತ ಕಲಾವಿದನೊಬ್ಬ ತುಂಬಿ ಹರಿಯುತ್ತಿರುವ ರಸ್ತೆಗಳಲ್ಲಿ ಬೋಟ್ ಸೃಷ್ಟಿಸಿ ಮೈಸೂರು ರಸ್ತೆಯಿಂದ ಬನಶಂಕರಿಗೆ, ಬನಶಂಕರಿಯಿಂದ ಕೆಂಗೇರಿಗೆ ಬೋಟ್‍ನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿರುವಂತೆ ಸೃಷ್ಟಿಸಿರುವ ಕಾಲ್ಪನಿಕ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾತೆತ್ತಿದರೆ ಭಾಗ್ಯ… ಭಾಗ್ಯ… ಎನ್ನುವ ಸರ್ಕಾರ ಬೆಂಗಳೂರಿಗರೂ ಬೋಟ್ ಭಾಗ್ಯ ಕಲ್ಪಿಸಲಿ ಎಂದು ನಗರದ ನಾಗರಿಕರು ಕುಹಕವಾಡುತ್ತಿದ್ದಾರೆ.

Facebook Comments

Sri Raghav

Admin