ರಾಜಕೀಯ ಜನ್ಮ ಕೊಟ್ಟ ಶಿಕಾರಿಪುರದಿಂದಲೇ ಯಡಿಯೂರಪ್ಪ ಸ್ಪರ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa--1

ಬಾಗಲಕೋಟೆ, ಅ.6- ಉತ್ತರ ಕರ್ನಾಟಕದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿ ಸಲಿದ್ದಾರೆ ಎಂಬ ಎಲ್ಲಾ ವದಂತಿಗಳಗೆ ತೆರೆ ಬಿದ್ದಿದ್ದು, ಖುದ್ದು ಶಿಕಾರಿಪುರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ನನಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಕೇಂದ್ರ ವರಿಷ್ಠರು ಸೂಚಿಸಿದ್ದು ನಿಜ. ಅದೇ ರೀತಿ ಈ ಭಾಗದಿಂದ ಕಣಕ್ಕಿಳಿಯಬೇಕೆಂದು ಪಕ್ಷದ ಅನೇಕ ಮುಖಂಡರು ಮನವಿ ಮಾಡಿದ್ದಾರೆ. ಆದರೆ, ನನಗೆ ರಾಜಕೀಯ ಜನ್ಮ ಕೊಟ್ಟ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ ಎಂದು ಪುನರುಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ವರಿಷ್ಠರು ಮನವಿ ಮಾಡಿದ್ದರು. ಇನ್ನು ಇದೇ ಜಿಲ್ಲೆಯ ಅನೇಕ ಮುಖಂಡರು ನನಗೆ ಕ್ಷೇತ್ರ ಬಿಟ್ಟುಕೊಡಲು ಮುಂದೆ ಬಂದಿದ್ದರು.
ಶಿಕಾರಿಪುರ ಕ್ಷೇತ್ರದ ಜನತೆ ಕ್ಷೇತ್ರ ಬಿಟ್ಟು ಹೋಗದಂತೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದರು.

ಶಿಕಾರಿಪುರದಿಂದ ನೀವು ನಾಮಪತ್ರ ಸಲ್ಲಿಸಿದರೆ ಸಾಕು. ನಿಮ್ಮನ್ನು ಬಹುಮತದಿಂದ ಗೆಲ್ಲಿಸುತ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ. ನನಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಒತ್ತಡ ಇದ್ದರೂ ಶಿಕಾರಿಪುರದಿಂದಲೇ ಸ್ಪರ್ಧಿಸಲು ಕೇಂದ್ರ ವರಿಷ್ಠರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ತೇರದಾಳದಲ್ಲಿ ಮಾಜಿ ಶಾಸಕ ಸಿದ್ದುಸವದಿ ಸ್ಪರ್ಧಿಸುವುದು ಖಚಿತ. ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಅವರು ಕ್ಷೇತ್ರದಲ್ಲಿ ಬೀಡು ಬಿಟ್ಟು ಪಕ್ಷ ಸಂಘಟಿಸಿದ್ದಾರೆ. ಈ ಬಾರಿ ಅವರು ಇಲ್ಲಿ ಗೆಲ್ಲುವುದು ಖಚಿತ ಎಂದು ಹೇಳಿದರು.

ಮೂರ್ಖತನದ ಪರಮಾವಧಿ:

ಕೆಲ ಸಚಿವರು ಮತ್ತು ಶಾಸಕರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಎಸಿಬಿ ಮೂಲಕ ದಾಳಿ ನಡೆಸಲು ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು. ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸಲು ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಅಧಿಕಾರವಿಲ್ಲ. ಆದರೂ ಸೇಡಿನ ರಾಜಕಾರಣಕ್ಕೆ ಮುಂದಾಗಿರುವ ಸಿದ್ದರಾಮಯ್ಯ, ದಾಳಿ ನಡೆಸಲು ಎಸಿಬಿಗೆ ಸೂಚನೆ ಕೊಟ್ಟಿರುವುದು ಬಹಿರಂಗಗೊಂಡಿದೆ. ಇದಕ್ಕೆ ಈಗ ಏನು ಹೇಳುತ್ತಾರೆ ಎಂದು ಬಿಎಸ್‍ವೈ ಪ್ರಶ್ನಿಸಿದರು. ಶೀಘ್ರದಲ್ಲೇ ಐಟಿ ಅಧಿಕಾರಿಗಳು ಇನ್ನಷ್ಟು ಸಚಿವರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಇದರ ಸುಳಿವು ಹಿಡಿದಿರುವ ಸರ್ಕಾರ ಎಸಿಬಿಯನ್ನು ಚೂ ಬಿಟ್ಟಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಹರಿಹಾಯ್ದರು.

ಎರಡು ದಿನಗಳಲ್ಲಿ ಚಾರ್ಜ್‍ಶೀಟ್ ಬಿಡುಗಡೆ:

ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರು ಇನ್ನೆರಡು ದಿನಗಳಲ್ಲಿ ರಾಜ್ಯ ಸರ್ಕಾರದ ಹಗರಣವೊಂದನ್ನು ಬಿಡುಗಡೆ ಮಾಡಲಿದ್ದಾರೆ. ಪ್ರತಿ ಮೂರು ದಿನಕ್ಕೊಮ್ಮೆ ಒಂದೊಂದು ಹಗರಣಗಳನ್ನು ಬಯಲು ಮಾಡಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಜನತೆಯ ಮುಂದಿಡಲಿದ್ದಾರೆ ಎಂದರು.
ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರ ಮುಖವಾಡವನ್ನು ಬಿಚ್ಚಿಡುತ್ತೇವೆ ಎಂದು ಎಚ್ಚರಿಸಿದರು.

Facebook Comments

Sri Raghav

Admin