ವಿಜಯಶಂಕರ್ ಸತ್ಯ ಹೇಳಿದ್ದಾರೆ, ಬಿಜೆಪಿಯಲ್ಲೂ ಇದೆ ಸೂಟ್‍ಕೇಸ್ ರಾಜಕಾರಣ

ಈ ಸುದ್ದಿಯನ್ನು ಶೇರ್ ಮಾಡಿ

CM-Ibrahim--01

ಬೆಂಗಳೂರು, ಅ.7-ಬಿಜೆಪಿಯಲ್ಲಿ ಸೂಟ್‍ಕೇಸ್ ರಾಜಕಾರಣವಿದೆ ಎಂದು ಮಾಜಿ ಸಂಸದ ವಿಜಯಶಂಕರ್ ಅವರ ಹೇಳಿಕೆ ಸತ್ಯವಾಗಿದೆ. ಆ ಪಕ್ಷದಲ್ಲಿ ಯಾರೂ ಸತ್ಯ ಹೇಳುತ್ತಿಲ್ಲ. ಮೊದಲ ಬಾರಿಗೆ ವಿಜಯಶಂಕರ್ ಸತ್ಯ ಹೇಳುವ ಧೈರ್ಯ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪತ್ರಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಹೇಳಲು ಎಲ್ಲರೂ ಭಯಬೀಳುತ್ತಿದ್ದರು. ಇದೀಗ ವಿಜಯಶಂಕರ್ ಧೈರ್ಯ ಮಾಡಿ ಮಾತನಾಡಿದ್ದಾರೆ. ಅವರನ್ನು ಮೆಚ್ಚಲೇಬೇಕು. ಭೂಮಿ ತೂಕದ ವ್ಯಕ್ತಿತ್ವ ಇರುವ ವಿಜಯಶಂಕರ್ ಸುಮ್ಮನೆ ಆರೋಪ ಮಾಡೊಲ್ಲ. ಒಂದಲ್ಲ ಒಂದು ದಿನ ಸತ್ಯ ಹೊರಬರಲೇಬೇಕು. ಈಗ ಬಂದಿದೆ ಎಂದರು.

ರಾಷ್ಟ್ರ ರಾಜಕಾರಣವೂ ಅಧೋಗತಿ ತಲುಪಿದೆ. ಯಶವಂತ ಸಿನ್ಹಾ ಅವರಂಥ ನಾಯಕರು ಮಾತನಾಡಲು ಆರಂಭಿಸಿದ್ದಾರೆ. ಬಿಜೆಪಿಯವರ ಬಂಡವಾಳ ಬಯಲಾಗುತ್ತದೆ. ಎಷ್ಟು ದಿನ ತಾನೇ ಹೆದರಿ ಸತ್ಯ ಮುಚ್ಚಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ವಿರುದ್ಧ ಚಾರ್ಜ್‍ಶೀಟ್ ಬಿಡುಗಡೆ ಮಾಡುವುದರೊಳಗೆ ಬಿ.ಎಸ್.ಯಡಿಯೂರಪ್ಪ ಹಾವು ಇದೆ ಎಂದು ಖಾಲಿ ಬುಟ್ಟಿ ತೋರಿಸುತ್ತಾರೆ. ಅವರ ಯಾವುದೇ ಆರೋಪಗಳಿಗೆ ಸಾಕ್ಷ್ಯ ಇದ್ದರೆ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು, ಪದೇ ಪದೇ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.

ಮೋದಿ ಅವರ ಮನ್ ಕೀ ಬಾತ್‍ನಿಂದ ಜನ ಬೇಸತ್ತಿದ್ದಾರೆ. ಈಗ ಕಾಮ್ ಕೀ ಬಾತ್ ಕೇಳುತ್ತಿದ್ದಾರೆ. ನಮ್ಮ ಸರ್ಕಾರ ಅದನ್ನು ಮಾಡಿ ತೋರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚುವ ಪರಿಸ್ಥಿತಿಯಲ್ಲಿದೆ. ಹಾಗಾಗಿ ಹತಾಶೆಯಿಂದ ಆ ಪಕ್ಷದ ನಾಯಕರು ಮನಸ್ಸಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ನಟ ಪ್ರಕಾಶ್‍ರೈ ಅವರಿಗೆ ಶಿವರಾಮಕಾರಂತ ಪ್ರಶಸ್ತಿ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿಯವರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ಇಬ್ರಾಹಿಂ, ಸತ್ಯ ಹೇಳುವುದನ್ನು ಕಾಂಗ್ರೆಸ್ ಏಜೆಂಟ್ ಅಥವಾ ಅಸಮರ್ಥರು ಎಂದು ಬಿಂಬಿಸುವ ಯತ್ನ ನಡೆಸುತ್ತಿದೆ. ಸುಳ್ಳನ್ನೇ ಸತ್ಯಮಾಡುವ ಕೆಲಸ ಮಾಡುವ ಪ್ರಯತ್ನ ಬಿಜೆಪಿಯವರದ್ದು. ಅದು ಯಶಸ್ವಿಯಾಗದೆ ಇದೀಗ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು.

ಕೇರಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರ್ಯಾಲಿ ವಿಫಲವಾಗಿದೆ.ಅವರ ಪಾದಯಾತ್ರೆಗೆ ಬೆಂಬಲ ಸಿಗಲಿಲ್ಲ. ಹೀಗಾಗಿ ರ್ಯಾಲಿಯನ್ನು ಅರ್ಧಕ್ಕೇ ಕೈಬಿಟ್ಟು ಹೋಗಿದ್ದಾರೆ. ಜಾತಿವಾದ, ಮತೀಯವಾದಗಳಿಗೆ ದಕ್ಷಿಣ ಭಾರತದಲ್ಲಿ ನೆಲೆ ಸಿಗುವುದಿಲ್ಲ. ಇದು ಬಿಜೆಪಿ ಅವರಿಗೆ ಅರ್ಥವಾಗಬೇಕು ಎಂದರು.

Facebook Comments

Sri Raghav

Admin