ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡರೆ..? ಬಿಜೆಪಿ ಆರೋಪವೇನು..?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

ಬೆಂಗಳೂರು, ಅ.7- ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡು ವಾಸದ ನಿವೇಶನಗಳಿಗೆ ಮೀಸಲಾದ ಪ್ರದೇಶದಲ್ಲಿ ಕೈಗಾರಿಕಾ ಉದ್ದೇಶಕ್ಕೆ ನಿವೇಶನ ನೀಡಿ ಭೂ ಕಬಳಿಕೆ ಮಾಡಿದ್ದಾರೆಂದು ಬಿಜೆಪಿ ಆರೋಪಿಸಿದೆ. ಮಹಾಲಕ್ಷೀಲೇಔಟ್‍ನ ಕೇತಮಾರನಹಳ್ಳಿ ಯಲ್ಲಿ ಶಾಂತ ಇಂಡಸ್ಟ್ರೀಸ್‍ಗೆ ಮಂಜೂರಾಗಿದ್ದ 21ಕುಂಟೆ ಜಮೀನಿಗೆ ಪರ್ಯಾಯವಾಗಿ ಹೆಬ್ಬಾಳ ಫ್ಲೈಓವರ್ ಬಳಿ ಎರಡೂವರೆ ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 200ಕೋಟಿ ನಷ್ಟವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅಧಿಕಾರ ದುರುಪಯೋಗ ಪಡಿಸಿಕೊಂಡು ಬಿಡಿಎ ಮೇಲೆ ಒತ್ತಡ ಹಾಕಿ ಬದಲಿ ನಿವೇಶನವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಇದು ಅಧಿಕಾರ ದುರುಪಯೋಗದ ಸ್ಪಷ್ಟ ಉಲ್ಲಂಘನೆ ಯಾಗಿರು ವುದರಿಂದ ಕೂಡಲೇ ಜಮೀನು ಕಳೆದುಕೊಂಡ ನಿವಾಸಿಗಳಿಗೆ ಹಿಂದುರುಗಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ತಮ್ಮ ಆರೋಪಗಳನ್ನು ಪುಷ್ಠಿಕರಿಸುವಂತೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ ಪುಟ್ಟಸ್ವಾಮಿ, ಮಹಾಲಕ್ಷ್ಮೀಲೇಔಟ್‍ನಲ್ಲಿ ಸರ್ವೆ ನಂ.174, 175ರ ಒಟ್ಟು 26 ಎಕರೆ, 25 ಕುಂಟೆಯಲ್ಲಿ ಬಡಾವಣೆ ನಿರ್ಮಾಣ ಮಾಡಲು 1978ರ ಆಗಸ್ಟ್ 5ರಂದು ಜಮೀನನ್ನು ಕಾರ್ಯಪಾಲಕರ ಅಭಿಯಂತರರಿಗೆ ಹಸ್ತಾಂತರ ಮಾಡಲಾಗಿತ್ತು.

1984ರ ಮೇ 4ರಂದು ಅಧಿಸೂಚನೆ ಹೊರಡಿಸಿದ ಜಮೀನಿನಲ್ಲಿ ಶಾಂತ ಇಂಡಸ್ಟ್ರೀಸ್ ಎಂಟರ್‍ಪ್ರೈಸಸ್ ಪರವಾಗಿ ಬಿ.ಕೆ.ಶ್ರೀನಿವಾಸ್ ಅವರಿಗೆ 2 ಎಕರೆ 33ಕುಂಟೆ ಜಮೀನನ್ನು ನೀಡಲಾಯಿತು. ಇವರಿಗೆ 19-2-1987ರಂದು 21,09,335 ರೂ.ಗಳನ್ನು ಭೂ ಪರಿಹಾರವಾಗಿ ಚೆಕ್ ಮೂಲಕ ಹಣ ನೀಡಲಾಗಿದೆ ಎಂದು ವಿವರಿಸಿದರು. ತದನಂತರ 30-04-2010ರಂದು ಶಾಂತ ಇಂಡಸ್ಟ್ರೀಸ್ ಎಂಟರ್‍ಪ್ರೈಸಸ್‍ನಲ್ಲಿ ಚಿತ್ರದುರ್ಗದ ಮಾಜಿ ಸಂಸದ ಕೆ.ಪಿ.ಮೂಡಲಗಿರಿಯಪ್ಪ ಅವರ ಮಗ ಸಿ.ಎಂ.ರಾಜೇಶ್‍ಗೌಡ, ಬಿ.ಎಚ್.ಸತೀಶ್, ಚನ್ನಕೇಶವನಾಯ್ಕ ಇವರುಗಳು ಪಾಲುದಾರರಾಗಿ ಸೇರ್ಪಡೆಯಾಗಿದ್ದಾರೆ.
ಕೈಗಾರಿಕಾ ಉದ್ದೇಶಹೊಂದಿದ್ದ ಈ ಸಂಸ್ಥೆಯನ್ನು ಕಬಳಿಸುವ ಉದ್ದೇಶದಿಂದ 30-04-2010ರಿಂದ ಸಿ.ಎಂ.ರಾಜೇಶ್‍ಗೌಡ ಮತ್ತು ಮುಖ್ಯಮಂತ್ರಿ ಅವರ ಮಗ ಯತೀಂದ್ರ ಲ್ಯಾಂಡ್ ಡೆವಲಪರ್ ಮತ್ತು ಬಿಲ್ಡರ್ಸ್‍ಗೆ ಪರಿವರ್ತನೆ ಮಾಡಿದ್ದಾರೆ ಎಂದು ಆಪಾದಿಸಿದರು.

ಕೇತಮಾರನಹಳ್ಳಿಯಲ್ಲಿ ಶಾಂತ ಇಂಡಸ್ಟ್ರೀಸ್‍ಗೆ ಪರಿಹಾರ ನೀಡಿದ್ದರಿಂದ ಪರ್ಯಾಯ ಭೂಮಿಯನ್ನು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಬಿಡಿಎ ಭೂಸ್ವಾಧೀನ ವಿಶೇಷ ಆಯುಕ್ತರು ಹಾಗೂ ಕಾನೂನು ತಜ್ಞರು ಸಲಹೆ ನೀಡುತ್ತಾರೆ.  ಆದರೆ, ಪರ್ಯಾಯ ಜಮೀನು ನೀಡಲೇಬೇಕೆಂಬ ಕಾರಣಕ್ಕಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಎ.ಆರ್.ಲಕ್ಷ್ಮಣ್ ಅವರಿಗೆ 2.25ಲಕ್ಷ ಶುಲ್ಕ ನೀಡಿ ತದನಂತರ ಎಚ್‍ಬಿಆರ್ ಬಡಾವಣೆಯಲ್ಲಿ 21 ಕುಂಟೆ ಜಮೀನನ್ನು ನೀಡಲಾಗಿತ್ತು. ಇದಕ್ಕೆ ಬಿಡಿಎ ಒಪ್ಪಿಗೆ ಸೂಚಿಸದಿದ್ದಾಗ ತದನಂತರ ಹೆಬ್ಬಾಳ ಫ್ಲೈಓವರ್ ಬಳಿ ಎರಡೂವರೆ ಎಕರೆ ಜಮೀನನ್ನು ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ನೀಡಿದ್ದಾರೆ ಎಂದು ಪುಟ್ಟಸ್ವಾಮಿ ಆರೋಪಿಸಿದರು.

ಮಾರುಕಟ್ಟೆ ಬೆಲೆಯಲ್ಲಿ ಇದರ ಬೆಲೆ 200 ಕೋಟಿ ಆಗಿದೆ. ಸರ್ಕಾರಿ ಮಾರ್ಗಸೂಚಿ ಪ್ರಕಾರ ಪ್ರತಿ ಚದುರ ಮೀಟರ್‍ಗೆ 1.30ಲಕ್ಷ ಇದೆ. ಕೇವಲ 15 ದಿನದಲ್ಲಿ ಇದನ್ನು ನೋಂದಾವಣಿ ಮಾಡಲಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 15 ಕೋಟಿ ನಷ್ಟವಾಗಿದೆ ಎಂದರು. ಇದರಲ್ಲಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಪುತ್ರನಿಗೆ ಲಾಭವಾಗಲಿ ಎಂಬ ಕಾರಣಕ್ಕಾಗಿ ಜಮೀನು ನೀಡಿದ್ದಾರೆ. ಸೂಕ್ತ ತನಿಖೆ ನಡೆಸದಿದ್ದಾರೆ ಕಾನೂನು ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಉತ್ತರ ಕೊಡುತ್ತಾರೆ ಎಂಬುದು ನನಗೆ ಗೊತ್ತಿದೆ. ಅವರು ಉಡಾಫೆ ಉತ್ತರ ಕೊಡುವುದರಲ್ಲಿ ನಿಸ್ಸೀಮರು. ಪುತ್ರನಿಗೆ ಕಾನೂನು ಉಲ್ಲಂಘಿಸಿ ಜಮೀನು ನೀಡಿರುವುದು ಸ್ಪಷ್ಟವಾಗಿದೆ. ಕೇವಲ ಯಾವುದೋ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಹಗರಣ ಮುಚ್ಚಿ ಹೋಗುವುದಿಲ್ಲ. ಇದರ ನೈತಿಕ ಹೊಣೆ ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದರು.

ಮುಂದಿನ ಮೂರು ದಿನಗಳಲ್ಲಿ ಸರ್ಕಾರದ ಹಗರಣಗಳನ್ನು ಬಯಲು ಮಾಡುತ್ತೇವೆ. ಈ ಸರ್ಕಾರ ಎಷ್ಟು ಹಗರಣ ನಡೆಸಿದೆ ಎಂಬುದನ್ನು ಜನತೆಯ ಮುಂದಿಡುವುದಾಗಿ ಗುಡುಗಿದರು. ಪತ್ರಿಕಾಗೋಷ್ಠಿಯಲ್ಲಿ ನೆ.ಲ.ನರೇಂದ್ರ ಬಾಬು, ಪಕ್ಷದ ವಕ್ತಾರ ಡಾ.ವಾಮನಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin